ಜಿಲ್ಲೆ

ಬಯೋಡಿಗ್ರೇಡಬಲ್​ ಪಾಕೆಟ್​ನಲ್ಲಿ ನಂದಿನಿ ಹಾಲು

ರಾಮನಗರ: ಪರಿಸರ ಮಾಲಿನ್ಯಕ್ಕೆ ಹಾಲಿನ ಪ್ಯಾಕೆಟ್​ಗಳ ಪಾತ್ರವೇ ಹೆಚ್ಚು ಎನ್ನುವ ಆರೋಪದಿಂದ ಮುಕ್ತವಾಗುವ ನಿಟ್ಟಿನಲ್ಲಿ ವಿನೂತನ ಪ್ರಯತ್ನಕ್ಕೆ ಮುಂದಾಗಿರುವ ಬಮುಲ್​ (ಬೆಂಗಳೂರು ಹಾಲು ಒಕ್ಕೂಟ) ಪ್ರಾಯೋಗಿಕವಾಗಿ ಬಯೋಡಿಗ್ರೇಡಬಲ್​ (ಜೈವಿಕವಾಗಿ ವಿಘಟನೆ ಹೊಂದುವ) ಕವರ್​ನಲ್ಲಿ ನಂದಿನ ಹಾಲನ್ನು ಗ್ರಾಹಕರ ಮನೆಗೆ ತಲುಪಿಸಲಿದೆ.

ಸರ್ಕಾರದ ಪ್ಲಾಸ್ಟಿಕ್​ ನಿಷೇಧದ ವಿನಾಯತಿ ಪಡೆದುಕೊಂಡಿರುವ ಬಮುಲ್​ ಪ್ರಸ್ತುತ ಹಾಲನ್ನು ಪಾಲಿಥಿನ್​ ಕವರ್​ಗಳಲ್ಲಿ ಪ್ಯಾಕ್​ ಮಾಡಿ ಮಾರಾಟ ಮಾಡುತ್ತಿದೆ. ಈಗ ಬಳಕೆ ಮಾಡುತ್ತಿರುವ ಪ್ಯಾಕೆಟ್​ಗಳು ಪರಿಸರಕ್ಕೆ ಮಾರಕವಾಗಿದ್ದು, ಇದಕ್ಕೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಮುಂದಡಿ ಇರಿಸಿರುವ ಬಮುಲ್​ ಜೈವಿಕವಾಗಿ ವಿಘಟನೆ ಗೊಳ್ಳುವ ಪ್ಲಾಸ್ಟಿಕ್​ ಕವರ್​ನಲ್ಲಿ ಹಾಲು ಪ್ಯಾಕಿಂಗ್​ ಮಾಡಲು ಮುಂದಾಗಿದೆ.

ಏನಿದು ಹೊಸ ಪ್ರಯತ್ನ?

ಪ್ಲಾಸ್ಟಿಕ್​ ಪರಿಸರಕ್ಕೆ ಮಾರಕ, ಪ್ರಕೃತಿಯಲ್ಲಿ ಕರಗಲು ಹಾಲಿನ ಕವರ್​ಗೆ ಕನಿಷ್ಠ 500 ವರ್ಷಗಳ ಬೇಕು. ಆದರೆ, ಬಮುಲ್​ ಬಳಕೆ ಮಾಡಲು ಉದ್ದೇಶಿಸಿರುವ ಬಯೋ ಡಿ ಗ್ರೇಡಬಲ್​ ಆಗಿದ್ದು, ಇದು ವಾತಾವರಣದಲ್ಲಿ ಇತರೆ ಸಾವಯವ ವಸ್ತುಗಳಂತೆ ಬಹುಬೇಗ ವಿಘಟನೆ ಹೊಂದುತ್ತದೆ. ಹೊಸ ಪರಿಸರ ಸ್ನೇಹಿ ಪ್ಲಾಸ್ಟಿಕ್​ ಕವರ್​ಗಳು 6 ತಿಂಗಳಲ್ಲಿ ಕರಗಿ ಹೋಗುತ್ತದೆ. ಇದರಿಂದಾಗಿ ಪ್ಲಾಸ್ಟಿಕ್​ ತ್ಯಾಜ್ಯಗಳ ಸಮಸ್ಯೆಗೆ ಪರಿಹಾರದ ದೊರೆಯಲಿದೆ.

ಕನಕಪುರ ಘಟಕದಲ್ಲಿ ತಯಾರಿಕೆ

ಬಮುಲ್​ ಕನಕಪುರದ ಶಿವನಹಳ್ಳಿ ಬಳಿ ಸ್ಥಾಪಿಸಿರುವ ಮೆಗಾ ಡೇರಿ ಪ್ಲಾಂಟ್​ನಲ್ಲಿ ಹೊಸದಾಗಿ ಸಿದ್ಧವಾಗಿರುವ ಡಿ- ಕಂಪೋಸಬಲ್​ ಕವರ್​ಗಳನ್ನು ಬಳಕೆ ಮಾಡುತ್ತಿದೆ. ಪ್ರಾಯೋಗಿಕವಾಗಿ 2 ಲಕ್ಷ ಬಯೋ ಡಿ ಗ್ರೇಡಬಲ್​ ಕವರ್​ಗಳನ್ನು ಬಳಕೆ ಮಾಡಿ ಹಾಲನ್ನು ಪ್ಯಾಕ್​ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಒಕ್ಕೂಟದ ವ್ಯಾಪ್ತಿಯ ಎಲ್ಲ ಹಾಲನ್ನು ಈ ಪರಿಸರ ಸ್ನೇಹಿ ಕವರ್​ ಬಳಕೆ ಮಾಡಿಯೇ ಪ್ಯಾಕಿಂಗ್​ ಮಾಡುವ ಗುರಿ ಹೊಂದಿದೆ. ಬಯೋ ಡಿ ಕಂಪೋಸಬಲ್​ ಪ್ಲಾಸ್ಟಿಕ್​ ಕವರ್​ಗಳು ವಿದೇಶಿ ತಂತ್ರಜ್ಞಾನ ಹೊಂದಿದ್ದು, ಈ ಕವರ್​ಗಳನ್ನು ಜೋಳದಿಂದ ತಯಾರಿಸಲಾಗುತ್ತದೆ. ಹಾಲಿನ ಬಳಕೆ ಮಾಡುತ್ತಿರುವ ಕವರ್​ನಂತೆಯೇ ಇದು ಇರಲಿದ್ದು, ಹಾಲಿ ಬಳಕೆ ಮಾಡುತ್ತಿರುವ ಪಾಲಿಥೀನ್​ ಕವರ್​ಗಿಂತ ಹೊಸ ಕವರ್​ ಸ್ವಲ್ಪ ಹೆಚ್ಚು ಬೆಲೆ ಇರಲಿದೆ.

ದೇಶದಲ್ಲಿ ಪ್ರಥಮ ಡಿಕೆಸು

ಕನಕಪುರ ಮೆಗಾ ಡೇರಿಯಲ್ಲಿ ಈ ಪ್ರಯತ್ನಕ್ಕೆ ಚಾಲನೆ ನೀಡಲಾಗಿದ್ದು, ಇದನ್ನು ಬಮುಲ್​ ನಿರ್ದೇಶಕರೂ ಆಗಿರುವ ಮಾಜಿ ಸಂಸದ ಡಿ.ಕೆ.ಸುರೇಶ್​ ಜೂ.5ರಂದು ಪರಿಶೀಲನೆ ನಡೆಸಿ, ಬಮುಲ್​ನಿಂದ ಬಯೋ ಡಿ ಗ್ರೇಡಬಲ್​ ಹಾಲಿನ ಪ್ಯಾಕೆಟ್​ಗಳನ್ನು ಹೊಸದಾಗಿ ಬಿಡುಗಡೆ ಮಾಡಲಾಗಿದೆ. ಇದು ಪ್ರಾಯೋಗಿಕವಾಗಿದ್ದು, ದೇಶದಲ್ಲೇ ಮೊದಲ ಪ್ರಯತ್ನ ಇದಾಗಿದೆ ಎಂದು ಅವರ ತಿಳಿಸಿದ್ದಾರೆ.