ಬೆಂಗಳೂರು: ಹುಚ್ಚನಂತೆ ಪ್ರೀತಿಸಿದ ಯುವತಿ ನನ್ನ ಪ್ರೀತಿಗೆ ಒಲ್ಲೆ ಎಂದಳು ಎನ್ನುವ ಕಾರಣಕ್ಕೆ ಆಕೆಯ ಮೇಲೆ ಮನಸೋಇಚ್ಛೆ ಹಲ್ಲೆ ಮಾಡಿದ್ದ ಪಾಗಲ್ ಪ್ರೇಮಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ದೀಪಕ್ (32) ಬಂಧಿತ ಪಾಗಲ್ ಪ್ರೇಮಿ. ಈತ ಕಳೆದ ಎರಡು ವರ್ಷಗಳಿಂದ ಯುವತಿಯನ್ನು ಪ್ರೀತಿಸುತ್ತಿದ್ದ. ಅದರೆ ಕಳೆದ ವರ್ಷ ಆಗಸ್ಟ್ನಲ್ಲಿ ಲವ್ ಬ್ರೇಕ್ ಅಪ್ ಅಗಿತ್ತು. ನಿನ್ನನ್ನು ಪ್ರೀತಿಸಲು ಸಾಧ್ಯವಿಲ್ಲ ಎಂದು ಯುವತಿ ದೀಪಕ್ನಿಂದ ದೂರಾಗಿದ್ದಳು. ಬಳಿಕ ಆತನ ಜತೆ ಸಂಪರ್ಕ ಕಡಿತಗೊಳಿಸಿದ್ದಳು.
ಆದರೆ ಅಷ್ಟಕ್ಕೆ ಸುಮ್ಮನಾಗದ ದೀಪಕ್ ಹಲವಾರು ಬಾರಿ ಬೇರೆ ಬೇರೆ ಫೋನ್ ನಂಬರ್ನಿಂದ ಕರೆ ಮಾಡಿ ಹಿಂಸೆ ನೀಡಿದ್ದ. ಕಳೆದ ಹದಿನೈದು ದಿನದ ಹಿಂದೆ ಯುವತಿ ಮನೆ ಬಳಿ ಹೋಗಿ ಗಲಾಟೆ ಮಾಡಿದ್ದ. ಜನವರಿ 25ರಂದು ಬೈಕ್ನಲ್ಲಿ ಹೋಗುತ್ತಿದ್ದ ವೇಳೆ ಯುವತಿಯ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಬೆನ್ನು, ಹೊಟ್ಟೆ, ತಲೆ, ಕೈಗೆ ಚಾಕುವಿನಿಂದ ಚುಚ್ಚಿದ್ದಾನೆ. ಈ ಹಿನ್ನಲೆಯಲ್ಲಿ ಯುವತಿ ನಂದಿನಿ ಲೇಔಟ್ ಪೊಲೀಸರಿಗೆ ದೂರು ನೀಡಿದ್ದಳು. ದೀಪಕ್ಗಾಗಿ ಬಲೆ ಬೀಸಿದ್ದ ಪೊಲೀಸರು ಫೆ. 7ರಂದು ಆತನನ್ನು ಬಂಧಿಸಿದ್ದಾರೆ. (ದಿಗ್ವಿಜಯ ನ್ಯೂಸ್)