ಕಿಕ್ಕೇರಿ: ಜಾಗತಿಕ ಕೃಷಿ ಕ್ಷೇತ್ರದ ಸವಾಲು ಕುರಿತ 8ನೇ ಅಂತಾರಾಷ್ಟ್ರೀಯ ಜಾಗತಿಕ ಸಮಾವೇಶ ದಕ್ಷಿಣ ಅಮೆರಿಕದ ಕೊಲಂಬಿಯಾ ದೇಶದ ರಾಜಧಾನಿ ಬೊಗೊಟಾದಲ್ಲಿ ಡಿ.1ರಿಂದ 8ರವರೆಗೆ ನಡೆಯಲಿದ್ದು, ಮಂಡ್ಯ ಜಿಲ್ಲೆ ಪ್ರತಿನಿಧಿಯಾಗಿ ರಾಜ್ಯ ರೈತಸಂಘದ ಮಹಿಳಾ ಘಟಕ ಮಾಜಿ ರಾಜ್ಯಾಧ್ಯಕ್ಷೆ ಸಮೀಪದ ಚಿಕ್ಕಮಂದಗೆರೆ ಗ್ರಾಮದ ನಂದಿನಿ ಜಯರಾಂ ಭಾಗವಹಿಸಲಿದ್ದಾರೆ.
ಸಮಾವೇಶವನ್ನು ಜಾಗತಿಕ ರೈತ ಸಂಘಟನೆಗಳ ಒಕ್ಕೂಟವಾದ ಎಲ್‌ವಿಸಿಯು ಸಂಘಟಿಸಿದ್ದು, ಜಗತ್ತಿನ 81ದೇಶಗಳ 161ರೈತ ಸಂಘಟನೆಗಳು ಭಾಗವಹಿಸಲಿವೆ. ಕಾರ್ಪೊರೇಟ್ ಕೃಷಿಗೆ ನಮ್ಮ ಸಾಂಪ್ರದಾಯಿಕ ಕೃಷಿಯು ಪರ್ಯಾಯವಾಗಿದೆ. ಕೃಷಿ ಹೆಜ್ಜೆ ಹೇಗಿರಬೇಕು ಎಂಬ ವಿಷಯವಾಗಿ ಚರ್ಚಿಸಲಾಗುವುದು ಎಂದು ನಂದಿನಿ ಜಯರಾಂ ತಿಳಿಸಿದ್ದಾರೆ.
ತಮ್ಮೊಂದಿಗೆ ಸಮಾವೇಶದಲ್ಲಿ ಚಾಮರಾಜನಗರದ ಚುಕ್ಕಿ ನಂಜುಂಡಸ್ವಾಮಿ, ಬೆಂಗಳೂರಿನ ಪ್ರೊ.ರವಿವರ್ಮ ಕುಮಾರ್, ಕೋಲಾರದ ನಳಿನಿಗೌಡ, ಮೈಸೂರಿನ ಮಂಜು ಕಿರಣ್, ಹಾವೇರಿಯ ಮಲ್ಲಿಕಾರ್ಜುನ ಬಳ್ಳಾರಿ, ಬೆಳಗಾವಿಯ ಪಾರ್ವತಿ ಕಲ್ಸಣ್ಣನವರ್, ಶಿವಮೊಗ್ಗದ ಅವಿನಾಶ್, ಅಮೃತಭೂಮಿಯಿಂದ ಅಂಬರೀಷ್ ಜತೆಗೆ ತರ್ಜುಮೆದಾರರಾಗಿ ಬಸವರಾಜ್ ಭಾಗವಹಿಸುತ್ತಿರುವುದಾಗಿ ತಿಳಿಸಿದ್ದಾರೆ.