ಜಿಲ್ಲೆ

ಮೈಮುಲ್‌ನಲ್ಲಿ ನಂದಿನಿ ಪಾಕ ಸ್ಪರ್ಧೆ

ಸದೇಶ್ ಕಾರ್ಮಾಡ್

ಮೈಸೂರು: ಮೈಸೂರು ಜಿಲ್ಲಾ ಹಾಲು ಒಕ್ಕೂಟ (ಮೈಮುಲ್) ವತಿಯಿಂದ ಸಿದ್ದಾರ್ಥನಗರದ ಮೈಮುಲ್ ಮೆಗಾಡೇರಿಯಲ್ಲಿ ಜಿಲ್ಲೆಯಲ್ಲಿ ಮಹಿಳೆ ಯರಿಗೆ ‘ನಂದಿನಿ ಪಾಕ ಸ್ಪರ್ಧೆ’ ಏರ್ಪಡಿಸಲಾಗಿತ್ತು.

ಜಿಲ್ಲೆಯ ವಿವಿಧೆಡೆಯಿಂದ 150ಕ್ಕೂ ಹೆಚ್ಚು ಮಹಿಳೆಯರು ಸ್ಪರ್ಧೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡು, ನಂದಿನಿ ಖೋವಾ ಮತ್ತು ಪನ್ನೀರ್ ಬಳಸಿ ವಿಶೇಷ ಖಾದ್ಯಗಳನ್ನು ತಯಾರಿಸಿದರು.

ಸ್ಪರ್ಧೆಗೆ ಚಾಲನೆ ನೀಡಿದ ಮೈಮುಲ್ ಅಧ್ಯಕ್ಷ ಪಿ.ಎಂ. ಪ್ರಸನ್ನ ಮಾತನಾಡಿ, ನಂದಿನಿ ಉತ್ಪನ್ನಗಳನ್ನು ಪ್ರಚುರ ಪಡಿಸುವ ಸಲುವಾಗಿ ಇದೇ ಪ್ರಥಮ ಬಾರಿಗೆ ‘ನಂದಿನಿ ಪಾಕ ಸ್ಪರ್ಧೆ’ಯನ್ನು ಏರ್ಪಡಿಸಲಾಗಿದೆ. ನಂದಿನಿ ಉತ್ಪನ್ನಗಳನ್ನು ಜನರ ಆರೋಗ್ಯ ವೃದ್ಧಿಗೆ ಸಹಕಾರಿಯಾಗಿದ್ದು, ಪ್ರತಿಯೊಬ್ಬರು ನಂದಿನಿ ಉತ್ಪನ್ನಗಳನ್ನು ಬಳಸಬೇಕು ಎಂದು ಮನವಿ ಮಾಡಿದರು.

ಮೈಮುಲ್ ವ್ಯವಸ್ಥಾಪಕ ನಿರ್ದೇಶಕ ಬಿ.ಎನ್. ವಿಜಯ ಕುಮಾರ್ ಮಾತನಾಡಿ, ಹೈನುಗಾರಿಕೆಯಲ್ಲಿ ಅಮೂಲ್ ನಂತರದ ಸ್ಥಾನವನ್ನು ಕೆಎಂಎಫ್ ಪಡೆದುಕೊಂಡಿದೆ. ಸಂಗ್ರಹಿಸುವ ಹಾಲನ್ನು ಶೇ.50 ರಷ್ಟು ಹಾಲಿನ ರೂಪದಲ್ಲಿ, ಉಳಿದ ಶೇ.50 ರಷ್ಟು ಹಾಲನ್ನು ಪನ್ನೀರ್, ಚೀಸ್, ತುಪ್ಪ ಹಾಗೂ ಮುಂತಾದ ಉತ್ಪನ್ನಗಳ ತಯಾರಿಕೆಗೆ ಬಳಕೆ ಮಾಡಲಾಗುತ್ತಿದೆ. ನಂದಿನಿಯ ಉತ್ಪನ್ನಗಳನ್ನು ದೇಶ, ವಿದೇಶಗಳಲ್ಲೂ ಮಾರಾಟ ಮಾಡಲಾಗುತ್ತಿದೆ ಎಂದರು.

ನಮ್ಮ ದೇಶದಲ್ಲಿ ಪನ್ನೀರ್ ಬಳಕೆ ಮಾಡುವವರ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿ ಇದೆ. ವಿದೇಶದಲ್ಲಿ ಚೀಸ್ ಹೆಚ್ಚಾಗಿ ಬಳಸುತ್ತಾರೆ. ಇದಕ್ಕೆ ಪೂರಕವಾಗಿ ನಮ್ಮಲ್ಲಿ ಗುಣಮಟ್ಟದ ಪನ್ನೀರ್ ಅನ್ನು ತಯಾರಿಸಲಾಗುತ್ತಿದೆ ಎಂದು ಹೇಳಿದರು.

ವೇದಿಕೆಯಲ್ಲಿ ಮೈಮುಲ್ ನಿರ್ದೇಶಕರಾದ ಎ.ಟಿ. ಸೋಮಶೇಖರ್, ಕೆ. ಉಮಾಶಂಕರ್, ಕೆ.ಜ. ಮಹೇಶ್, ಸಿ.ಓಂಪ್ರಕಾಶ್, ಕೆ. ಈರೇಗೌಡ, ಕೆ.ಎಸ್. ಕುಮಾರ್, ದ್ರಾಕ್ಷಾಯಿಣಿ ಬಸವರಾಜಪ್ಪ, ಬಿ.ಕೆ. ಲೀಲಾ ನಾಗರಾಜ್, ಬಿ. ನೀಲಾಂಬಿಕೆ ಮಹೇಶ್ ಕುರಹಟ್ಟಿ, ಶಿವಗಾಮಿ ಷಣ್ಮುಗಂ, ಡಿ.ರಾಜೇಂದ್ರ, ಬಿ.ಎನ್. ಸದಾನಂದ, ಆರ್. ಚಲುವರಾಜು, ಗುರುಸ್ವಾಮಿ, ವ್ಯವಸ್ಥಾಪಕರಾದ ಕೆ.ಎಸ್. ಜಗದೀಶ್, ಜಯಶಂಕರ್, ಬಿ.ಎಲ್. ಶ್ವೇತಾ ಹಾಗೂ ಇತರರು ಇದ್ದರು