ಲಿಂಗದಹಳ್ಳಿ: ನಂದಿಬಟ್ಟಲು ಗ್ರಾಮ ಪಂಚಾಯಿತಿಯ 2024-25ನೇ ಸಾಲಿನ ಮೊದಲ ಸುತ್ತಿನ ಗ್ರಾಮಸಭೆ ಕೆಲವು ಇಲಾಖೆಗಳ ಅಧಿಕಾರಿಗಳು ಗೈರಾಗಿದ್ದರಿಂದ ಗ್ರಾಮಸ್ಥರ ಒತ್ತಾಯಕ್ಕೆ ಮಣಿದು ಗ್ರಾಮಸಭೆಯನ್ನು ಮುಂದೂಡಲಾಯಿತು.
ಗ್ರಾಪಂ ಪಿಡಿಒ ಎನ್.ಎಸ್.ನಾಗರಾಜಪ್ಪ ಮಾತನಾಡಿ, ನಂದಿಬಟ್ಟಲು ಗ್ರಾಪಂನಲ್ಲಿ ನಡೆಯುವ ಗ್ರಾಮಸಭೆಗೆ ಹಾಜರಾಗುವಂತೆ ಸರ್ಕಾರದ ಎಲ್ಲ ಇಲಾಖೆ ಅಧಿಕಾರಿಗಳಿಗೂ ಸುತ್ತೋಲೆಗಳನ್ನು ಕಳುಹಿಸಲಾಗಿತ್ತು. ಆದರೆ ಇಲ್ಲದ ಸಬೂಬು ಹೇಳಿ ವಿವಿಧ ಇಲಾಖೆ ಅಧಿಕಾರಿಗಳು, ಗ್ರಾಮಸಭೆಗೆ ಗೈರಾಗಿದ್ದರು. ಗ್ರಾಪಂ ಅಧ್ಯಕ್ಷರು, ಸದಸ್ಯರು ಮತ್ತು ಗ್ರಾಮಸ್ಥರ ಒತ್ತಾಯದ ಮೇರೆಗೆ ಗ್ರಾಮಸಭೆ ದಿನಾಂಕವನ್ನು ಮುಂದೂಡಲಾಗಿದ್ದು, ಮುಂದಿನ ಭಾರಿ ಸರ್ಕಾರದ ಪ್ರತಿ ಇಲಾಖೆಗೆ ನೋಂದಾಯಿತ ಅಂಚೆ ಪತ್ರದ ಮೂಲಕ ಗ್ರಾಮ ಸಭೆಗೆ ಹಾಜರಾಗುವಂತೆ ಆಹ್ವಾನ ಪತ್ರಿಗಳನ್ನು ಕಳುಹಿಸಲಾಗುವುದು ಎಂದು ತಿಳಿಸಿದರು.
ಗ್ರಾಪಂ ಅಧ್ಯಕ್ಷ ಎ.ಅಬುಬಕರ್ ಕುಟ್ಟಿ ಮಾತನಾಡಿ, ನಂದಿಬಟ್ಟಲು ಗ್ರಾಪಂ ವ್ಯಾಪ್ತಿಯಲ್ಲಿ ಸಣ್ಣ ಮತ್ತು ಅತಿ ಸಣ್ಣ ರೈತರು ಮತ್ತು ಕೂಲಿ ಕಾರ್ಮಿಕರು ಹೆಚ್ಚಾಗಿ ವಾಸಿಸುತ್ತಿದ್ದು, ಈ ಭಾರಿ ಮಳೆಗಾಲದಲ್ಲಿ ಅತಿವೃಷ್ಟಿಯಿಂದ ರೈತರು ಭಿತ್ತನೆ ಮಾಡಿದ್ದ ಆಲೂಗಡ್ಡೆ, ಬಟಾಣಿ, ತಿಂಗಳ ಹುರುಳಿ, ಮುಸುಕಿನ ಜೋಳ, ರಾಗಿ, ಭತ್ತ ಸೇರಿದಂತೆ ಅಲ್ಪ ಕಾಲದ ಬೆಳೆಗಳೆಲ್ಲವೂ ಕೊಳೆತು ಹೋಗಿದೆ. ತೋಟಗಾರಿಕಾ ಬೆಳೆಗಳಾದ ಅಡಕೆ, ತೆಂಗು, ಕಾಫಿ, ಕಾಳುಮೆಣಸು ಮುಂತಾದ ಬೆಳೆಗಳು ಕೊಳೆರೋಗದ ಬಾಧೆಗೆ ತುತ್ತಾಗಿ ಕಾಯಿಗಳೆಲ್ಲ ಕೊಳೆತು ಹೋಗಿವೆ. ಈ ಬಗ್ಗೆ ರೈತರಿಗೆ ಅಗತ್ಯ ಮಾಹಿತಿ ನೀಡಬೇಕಾದ ಕೃಷಿ ಇಲಾಖಾ ಅಧಿಕಾರಿಗಳು ಮತ್ತು ತೋಟಗಾರಿಕಾ ಇಲಾಖಾ ಅಧಿಕಾರಿಗಳು ಗ್ರಾಮಸಭೆಗೆ ಬಾರದ ಕಾರಣ ಗ್ರಾಮಸಭೆಯನ್ನು ಮುಂದೂಡಲಾಗಿದೆ ಎಂದರು.