ಚಿಕ್ಕಬಳ್ಳಾಪುರ: ನಂದಿಯ ಭೋಗ ನಂದೀಶ್ವರಸ್ವಾಮಿ ದೇವಾಲಯದಲ್ಲಿ ನಿರಂತರ ಬಿಸಿಲು ಮಳೆಗೆ ಹಲವು ವರ್ಷಗಳಿಂದ ಶಿಥಿಲಗೊಂಡಿದ್ದ ಶೃಂಗತೀರ್ಥ ಕಲ್ಯಾಣಿ ಗೋಪುರ ಮತ್ತು ಪ್ರಾಕಾರ ಗೋಡೆಗೆ ಹೊಸ ಕಾಯಕಲ್ಪ ನೀಡಲಾಗುತ್ತಿದೆ.
ಗೋಡೆಯ ಮೇಲಿನ ಪಾಚಿ, ಗಿಡಗಳನ್ನು ತೆರವುಗೊಳಿಸಿರುವುದರ ಜತೆಗೆ ಕಿತ್ತು ಬಂದಿರುವ ಕಡೆ ತೇಪೆ ಹಚ್ಚಲಾಗಿದೆ. ನುರಿತ ಕಲಾವಿದರಿಂದ ವಿವಿಧೆಡೆ ಕೆತ್ತನೆಯ ಮೂರ್ತಿಗಳಿಗೆ ಹೊಳಪಿನ ಸ್ಪರ್ಶ ನೀಡಲಾಗಿದೆ. ಗೋಡೆಗಳಿಗೆ ಹೊಸ ಬಣ್ಣ ಬಳಿಯುತ್ತಿರುವುದರ ಜತೆಗೆ ರಕ್ಷಣಾತ್ಮಕ ತಡೆಬೇಲಿ ನಿಲ್ಲಿಸಲಾಗುತ್ತಿದೆ.
ದಕ್ಷಿಣ ಕಾಶಿ ಎಂತಲೇ ಕರೆಸಿಕೊಂಡಿರುವ ನಂದಿ ಗ್ರಾಮದ ಭೋಗನಂದೀಶ್ವರ ಜೋಡಿ ದೇವಾಲಯವು ಚೋಳರು, ನೊಳಂಬ, ಹೊಯ್ಸಳರು, ರಾಷ್ಟ್ರಕೂಟರು, ಗಂಗರು, ವಿಜಯನಗರ ಅರಸರ ಕಾಲದಲ್ಲಿ ಹಂತ ಹಂತವಾಗಿ ಅಭಿವೃದ್ಧಿ ಹೊಂದಿದೆ. ಕಲ್ಲಲ್ಲಿ ಹೂವು ಅರಳಿದಂತಿರುವ ಇಲ್ಲಿ ಕೆತ್ತನೆಯು ಬೆರಗು ಮೂಡಿಸುತ್ತದೆ. ಉಬ್ಬು ಶಿಲ್ಪಗಳು, ಕುಸರಿ ಕೆತ್ತನೆಗಳು, ಕಲ್ಲಿನ ಛತ್ರಿ, ಛಾವಣಿ ಕಲ್ಲಿನಲ್ಲಿ ಬಿಡಿಸಿರುವ ಕಲ್ಲಿನ ಚಿತ್ತಾರಗಳ ಸೊಬಗು ಗಮನ ಸೆಳೆಯುತ್ತದೆ.
ಕರ್ನಾಟಕ, ಆಂಧ್ರಪ್ರದೇಶ ಹಾಗೂ ತಮಿಳುನಾಡು ಮಾತ್ರವಲ್ಲದೆ ವಿದೇಶಗಳಿಂದ ಪ್ರವಾಸಿಗರು ಬಂದು ಇಲ್ಲಿನ ಶಿಲ್ಪಕಲೆಗೆ ಮನಸೋಲುತ್ತಾರೆ. ಮಹಾ ಶಿವರಾತ್ರಿ, ಕಾರ್ತಿಕ ಮತ್ತು ಮಾಘ ಮಾಸ ಸೇರಿ ವಿಶೇಷ ದಿನಗಳಲ್ಲಿ ಜನಜಾತ್ರೆಯೇ ಸೇರುತ್ತದೆ. ಆದರೆ, ಪುರಾತತ್ವ ಇಲಾಖೆಯ ಯಥಾ ಸ್ಥಿತಿಯ ಏಕಮಾತ್ರ ತತ್ವದಿಂದ ಅಭಿವೃದ್ಧಿ, ದುರಸ್ತಿ ಇಲ್ಲದೇ ಆಲಯವು ಶಿಥಿಲಾವಸ್ಥೆಗೆ ತಲುಪಿತ್ತು.
ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ಅಗತ್ಯ: ಪ್ರತಿ ಬಾರಿ ಮಳೆಗಾಲದಲ್ಲಿ ಪ್ರಾಕಾರ ಗೋಡೆ, ಗೋಪುರದಲ್ಲಿ ಶಿಲಾ ಮೂರ್ತಿಗಳ ಭಾಗಗಳು ಕುಸಿದು ಬೀಳುವುದು ಸಾಮಾನ್ಯವಾಗಿದೆ. ಮೇಲೆ ನೀರು ನಿಂತು ಪಾಚಿ ಕಟ್ಟಿಕೊಳ್ಳುತ್ತದೆ. ಬಹುತೇಕ ಕಡೆ ಗೋಡೆ ಬಿರುಕು ಬಿಡುತ್ತಿದೆ. ದೇವಾಲಯದಲ್ಲಿ ಪೂಜೆ ಜವಾಬ್ದಾರಿಯನ್ನು ಮಜರಾಯಿ ಇಲಾಖೆ ಮತ್ತು ದೇವಾಲಯ ಕಟ್ಟಡ ಸಂರಕ್ಷಣೆ ಮತ್ತು ನಿರ್ವಹಣೆ ಜವಾಬ್ದಾರಿಯನ್ನು ಪುರಾತತ್ವ ಇಲಾಖೆ ವಹಿಸಿಕೊಂಡಿದೆ. ಪೂರ್ಣ ಪ್ರಮಾಣದಲ್ಲಿ ದೇವಾಲಯ ಪ್ರಾಕಾರ ಗೋಡೆ ಸಂರಕ್ಷಣೆ ಕಾರ್ಯ ನಡೆದಿಲ್ಲ. ಸುತ್ತಲೂ ರಾರಾಜಿಸುವ ಕಸಕಡ್ಡಿ, ತ್ಯಾಜ್ಯ ಗಿಡಗಳಿಂದ ದುರ್ನಾತ ಮತ್ತು ಇಲಿ, ಹೆಗ್ಗಣ, ಹಾವು, ಕ್ರಿಮಿಕೀಟಗಳ ತಾಣವಾಗಿದೆ. ಪುರಾತನ ದೇವಾಲಯದ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಆದ್ಯತೆ ನೀಡಬೇಕೆಂಬುದು ಜನರ ಒತ್ತಾಯವಾಗಿದೆ.
ಆಲಯದ ನಿರೀಕ್ಷೆ ಏನು?: 1.ಶಿಥಿಲಾವಸ್ಥೆಯಲ್ಲಿರುವ ಗೋಡೆ, ಕಟ್ಟಡ ಮತ್ತು ಮೂರ್ತಿಗಳ ಸಮರ್ಪಕ ದುರಸ್ತಿ ಮತ್ತು ಸಂರಕ್ಷಣೆ 2.ದೇವಾಲಯದ ಆವರಣದಲ್ಲಿ ಕಸ ಎಸೆಯುವುದಕ್ಕೆ, ತ್ಯಾಜ್ಯ ಗಿಡಗಳ ತೆರವು, ದುರ್ನಾತ ಹರಡುವಿಕೆಗೆ ಕಡಿವಾಣ. 3. ಕೇಂದ್ರ ಪುರಾತತ್ವ ಇಲಾಖೆ, ಮುಜರಾಯಿ ಮತ್ತು ಗ್ರಾಪಂ ಸಹಭಾಗಿತ್ವದಲ್ಲಿ ಅಭಿವೃದ್ಧಿ. 4.ಸ್ವಯಂ ಸೇವಾ ಸಂಸ್ಥೆಗಳ ನೆರವಿನೊಂದಿಗೆ ಸ್ವಚ್ಛತೆ ನಿರ್ವಹಣೆ. 5.ಆಲಯದ ಮುಂಭಾಗದ ರಸ್ತೆಯಲ್ಲಿ ಬೃಹತ್ ವಾಹನಗಳ ಸಂಚಾರಕ್ಕೆ ಕಡಿವಾಣ.
ಕೇಂದ್ರ ಪುರಾತತ್ವ ಇಲಾಖೆಯು ಯಥಾ ಸ್ಥಿತಿ ಕಾಪಾಡಿಕೊಂಡು ದೇವಾಲಯದಲ್ಲಿ ಕಲ್ಯಾಣಿ ಮತ್ತು ಪ್ರಾಕಾರ ಗೋಪುರದ ಮೂರ್ತಿಗಳ ದುರಸ್ತಿ, ಸಂರಕ್ಷಣೆ, ಗೋಡೆ ಬಣ್ಣ ಬಳಿಯುವಿಕೆ ಸೇರಿ ವಿವಿಧ ಅಭಿವೃದ್ಧಿ ಕೆಲಸ ಕೈಗೊಳ್ಳುತ್ತಿದೆ. ಎಸ್.ನಾಗರಾಜ್, ಪಾರುಪತ್ತೇದಾರ್, ನಂದಿ ಭೋಗನಂದೀಶ್ವರ ದೇವಾಲಯ ರಾಜಮಹಾರಾಜರ ಕಾಲದ ನಂದಿ ಭೋಗನಂದೀಶ್ವರ ದೇವಾಲಯ ಸಂರಕ್ಷಣೆಗೆ ಮೊದಲ ಆದ್ಯತೆ ನೀಡಬೇಕು. ಸಮಗ್ರ ಯೋಜನೆಯೊಂದಿಗೆ ದುರಸ್ತಿ ಕಾಮಗಾರಿ ನಡೆಸಿ ಅಭಿವೃದ್ಧಿಪಡಿಸಬೇಕು. ಶ್ರೀನಿವಾಸ್, ಸ್ಥಳೀಯ ನಿವಾಸಿ, ನಂದಿ ನಂದಿಯ ಆಲಯದ ಮುಂಭಾಗದ ರಸ್ತೆಯಲ್ಲಿ ಟಿಪ್ಪರ್ ಲಾರಿ ಸೇರಿ ಬೃಹತ್ ವಾಹನಗಳ ಸಂಚಾರಕ್ಕೆ ಕಡಿವಾಣ ಹಾಕಬೇಕು. ಪ್ರವಾಸಿಗರ ಗಮನ ಸೆಳೆಯುವ ನಿಟ್ಟಿನಲ್ಲಿ ನೈರ್ಮಲ್ಯ ಕಾಪಾಡಬೇಕು. ದೇವರಾಜ್, ಸ್ಥಳೀಯ ನಿವಾಸಿ