ಚಿಕ್ಕಬಳ್ಳಾಪುರ: ಕರ್ನಾಟಕದ ಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ನಂದಿ ಭೋಗ ನಂದೀಶ್ವರ ಬ್ರಹ್ಮರಥೋತ್ಸವವು ಶನಿವಾರ ಭಕ್ತ ಸಾಗರದ ನಡುವೆ ವಿಜೃಂಭಣೆಯಿಂದ ನೆರವೇರಿತು.
ಬೆಳಗ್ಗೆ ಸುಮಾರು 11.45ರ ವೇಳೆಗೆ ವೈದ್ಯಕೀಯ ಸಚಿವ ಡಾ.ಕೆ. ಸುಧಾಕರ್ ರಥೋತ್ಸವಕ್ಕೆ ಚಾಲನೆ ನೀಡಿದರು. ಜಿಲ್ಲಾಧಿಕಾರಿ ಡಾ.ಆರ್.ಲತಾ, ತಹಸೀಲ್ದಾರ್ ಕೆ.ನರಸಿಂಹಮೂರ್ತಿ, ತಾಲೂಕು ಪಂಚಾಯಿತಿ ಅಧ್ಯಕ್ಷ ಬಿ.ಎಂ.ರಾಮಸ್ವಾಮಿ, ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ ಭಕ್ತರ ಜತೆಗೆ ತೇರು ಎಳೆದರು.
ಚಿಕ್ಕರಥದಲ್ಲಿ ಅಂಬಿಕಾ, ಗಣಪತಿ, ದೊಡ್ಡ ರಥದಲ್ಲಿ ಗಿರಿಜಾಂಬಾ ಸಮೇತ ಭೋಗನಂದೀಶ್ವರಸ್ವಾಮಿ ಉತ್ಸವ ಮೂರ್ತಿಯನ್ನಿರಿಸಿ, ದೇವಾಲಯ ಸುತ್ತ ಮೆರವಣಿಗೆ ಮಾಡಲಾಯಿತು. ದೇವಾಲಯದ ಆವರಣದಿಂದಲೇ ಗೋವಿಂದ, ಗೋವಿಂದ ನಾಮಸ್ಮರಣೆಯೊಂದಿಗೆ ಭಕ್ತರು ರಥ ಎಳೆಯಲಾರಂಭಿಸಿದರು.
ಬ್ರಹ್ಮರಥೋತ್ಸವ ಆರಂಭಕ್ಕೂ ಮುನ್ನ ದೇವಾಲಯದಲ್ಲಿ ಪೂಜಾ ಕೈಂಕರ್ಯಗಳು ನೆರವೇರಿದವು. ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.
ದೇವರಿಗೆ ಸಮರ್ಪಣೆ: ಹರಕೆ ಹೊತ್ತ ಭಕ್ತರು ರಥ ಸಾಗಿದ ಮಾರ್ಗದುದ್ದಕ್ಕೂ ಬಾಳೆಹಣ್ಣು ಮತ್ತು ದವನ ತೂರಿ ಪ್ರಾರ್ಥಿಸಿದರು. ನಂದಿ ದೇವಾಲಯ ಮುಂಭಾಗದ ರಸ್ತೆ, ನಂದಿ ಕ್ರಾಸ್, ಸುಲ್ತಾನಪೇಟೆ, ಮುದ್ದೇನಹಳ್ಳಿ ರಸ್ತೆಯ ಬಳಿ ಸ್ಥಳೀಯರು ಭಕ್ತರಿಗೆ ಮಜ್ಜಿಗೆ, ಪಾನಕ, ಹೆಸರು ಬೇಳೆ ವಿತರಿಸಿದರು. ಅಲ್ಲಲ್ಲಿ ಸಂಘ-ಸಂಸ್ಥೆಗಳ ಮುಖಂಡರು, ನಂದಿ ದೇವಾಲಯ ಅನ್ನಸಂತರ್ಪಣಾ ಸಮಿತಿ ಸೇರಿ ವಿವಿಧ ಸೇವಾ ಸಮಿತಿಗಳ ಪದಾಧಿಕಾರಿಗಳು ನೀರಿನ ಪ್ಯಾಕೆಟ್‌ಗಳನ್ನು ಉಚಿತವಾಗಿ ವಿತರಿಸಿದರು. ಇದರ ಜತೆಗೆ ಸಿಹಿ ಪೊಂಗಲ್, ಬಿಸಿಬೇಳೆ ಬಾತ್, ಟೊಮ್ಯಾಟೊ ಬಾತ್, ತರಕಾರಿ ಬಾತ್, ಮೊಸರನ್ನ ವಿತರಿಸಲಾಯಿತು.
ಹೊರರಾಜ್ಯಗಳಿಂದಲೂ ಬಂದಿದ್ದ ಜನ : ಬ್ರಹ್ಮ ರಥೋತ್ಸವಕ್ಕೆ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ ಮತ್ತು ಗ್ರಾಮಾಂತರ, ರಾಮನಗರ ಜಿಲ್ಲೆ ಸೇರಿ ರಾಜ್ಯ ಮಾತ್ರವಲ್ಲದೆ ಆಂಧ್ರದಿಂದಲೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಕಳೆದ ವರ್ಷಕ್ಕೆ ಹೋಲಿಸಿದರೆ ಭಾಗವಹಿಸಿದ್ದವರ ಸಂಖ್ಯೆ ಏರಿಕೆಯಾಗಿದೆ ಎಂಬ ಮಾತೂ ಕೇಳಿಬಂತು. ದೇವಾಲಯದ ಆವರಣ, ವಿವಿಧ ಮಾರ್ಗದ ರಸ್ತೆಗಳಲ್ಲಿ ಜನರು ಆಟಿಕೆ, ಪುರಿ, ಬತಾಸು, ತುಂಪು ಪಾನಿಯ ಮತ್ತಿತರ ವಸ್ತುಗಳ ಖರೀದಿಯಲ್ಲಿ ನಿರತರಾಗಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಮುಂಜಾಗ್ರತಾ ಕ್ರಮ: ಬೈರನಾಯಕನಹಳ್ಳಿ, ಕುಪ್ಪಳ್ಳಿ ಮಾರ್ಗದಲ್ಲಿ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿತ್ತು. ಲಕ್ಷಾಂತರ ಮಂದಿ ಸೇರಿರುವ ಹಿನ್ನೆಲೆಯಲ್ಲಿ ದೇವಾಲಯದ ಸುತ್ತಮುತ್ತಲ ಪ್ರದೇಶದಲ್ಲಿ ಮುಂಜಾಗ್ರತಾ ಕ್ರಮವಾಗಿ ವಾಹನ ಸಂಚಾರ ನಿಷೇಧಿಸಲಾಗಿತ್ತು. ಜಾತ್ರೆಗೆ ಬಂದು ತಪ್ಪಿ ಹೋದವರ ಮಾಹಿತಿ, ಕಳ್ಳರ ಬಗ್ಗೆ ಎಚ್ಚರಿಕೆ ಇರಲು ಪೊಲೀಸರು ಧ್ವನಿವರ್ಧಕದ ಮೂಲಕ ನಿರಂತರವಾಗಿ ತಿಳಿಸಿದರು. ಮೊಬೈಲ್ ಟಾಯ್ಲೆಟ್‌ಗಳ ಅವ್ಯವಸ್ಥೆಯಿಂದ ಸಾರ್ವಜನಿಕರು ಶೌಚಕ್ಕೆ ಬಯಲನ್ನೆ ಆಶ್ರಯಿಸಬೇಕಾಯಿತು.
ಇಂದು ರಾಸುಗಳಿಗೆ ಬಹುಮಾನ ವಿತರಣೆ: ದೇವಾಲಯ ಆಡಳಿತ ಮಂಡಳಿಯಿಂದ ಬ್ರಹ್ಮರಥೋತ್ಸವದ ಅಂಗವಾಗಿ ಫೆ.23 ರಂದು ಸಂಜೆ 4.30 ಕ್ಕೆ ಉತ್ತಮ ರಾಸುಗಳಿಗೆ ಬಹುಮಾನ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ರಾತ್ರಿ 7.30 ಕ್ಕೆ ಧೂಳೋತ್ಸವ, ಫೆ.24 ರಂದು ವಸಂತೋತ್ಸವ, ಉಯ್ಯಲೋತ್ಸವ, ಧ್ವಜಾರೋಹಣ, ಫೆ.25 ಗಜವಾಹನೋತ್ಸವ, ಫೆ.26 ನಂದಿ ವಾಹನೋತ್ಸವ, ಫೆ.27 ಕೈಲಾಸ ವಾಹನೋತ್ಸವ, ಫೆ.28 ಶಯನೋತ್ಸವ ನಡೆಯಲಿದೆ.