ಜಿಲ್ಲೆ

ಅಮರನಾಥಕ್ಕೂ ಮೈಸೂರಿನ ನಂಟು : ಮೈಸೂರಿನ ಶಿಲ್ಪಿ ಯೋಗಿರಾಜ್ ರಿಂದ ನಂದಿ ವಿಗ್ರಹ ಕೆತ್ತನೆ

ಮೈಸೂರು: ಅಯೋಧ್ಯೆಯ ರಾಮಲಲ್ಲಾ ಮೂರ್ತಿಯ ಕೆತ್ತನೆಯ ಮೂಲಕ ದೇಶದ ಗಮನ ಸೆಳೆದ ನಗರದ ಶಿಲ್ಪಿ ಅರುಣ್ ಯೋಗಿರಾಜ್ ಇದೀಗ ಜಮ್ಮು ಮತ್ತು ಕಾಶ್ಮೀರದ ಅಮರನಾಥ ದೇವಾಲಯಕ್ಕೆ ಮೈಸೂರು ಶೈಲಿಯ ನಂದಿ ನಿರ್ಮಾಣ ಮಾಡಿಕೊಟ್ಟು ಮತ್ತೊಮ್ಮೆ ದೇಶದ ಗಮನ ಸೆಳೆದಿದ್ದಾರೆ.

ನಂದಿ ವಿಗ್ರಹ ಕೆತ್ತನೆ ಮಾಡಿಕೊಡುವಂತೆ ಅಮರನಾಥ ದೇವಾಲಯ ಮಂಡಳಿ ಅರುಣ್ ಯೋಗಿರಾಜ್ ಅವರಲ್ಲಿ ಮನವಿ ಮಾಡಿಕೊಂಡಿತ್ತು. ಅಮರನಾಥ ದೇವಾಲಯ ಮಂಡಳಿ ಕೋರಿಕೆಯ ಪ್ರಕಾರ ಎರಡೂವರೆ ತಿಂಗಳ ಪರಿಶ್ರಮದ ಬಳಿಕ ಸುಂದರವಾದ ನಂದಿ ವಿಗ್ರಹ ಕೆತ್ತನೆ ಕಾರ್ಯ ಪೂರ್ಣಗೊಂಡಿದ್ದು, ಬುಧವಾರ ನಂದಿ ವಿಗ್ರಹವನ್ನು ಅಮರನಾಥಕ್ಕೆ ಕಳುಹಿಸಿಕೊಡಲಾಗಿದ್ದು, ಜೂನ್ ಅಂತ್ಯದಲ್ಲಿ ಅಮರನಾಥ ದೇವಾಲಯದ ಹಿಮದ ಉದ್ಭವ ಲಿಂಗದ ಮುಂದೆ ವಿಗ್ರಹ ಪ್ರತಿಷ್ಠಾಪನೆಯಾಗುವ ನಿರೀಕ್ಷೆ ಇದೆ.

ಕೃಷ್ಣಶಿಲೆ ಬಳಕೆ:

ಅಯೋಧ್ಯೆಯ ರಾಮಲಲ್ಲಾ ಮೂರ್ತಿ ಕೆತ್ತನೆಗೆ ಮೈಸೂರು ಸಮೀಪದ ಗುಜ್ಜೇಗೌಡನಪುರದ ರಾಮದಾಸ್ ಅವರ ಜಮೀನಿನಲ್ಲಿ ದೊರೆತ ಕೃಷ್ಣಶಿಲೆಯನ್ನು ಬಳಕೆ ಮಾಡಲಾಗಿತ್ತು. ಇದೇ ಕೃಷ್ಣಶಿಲೆಯನ್ನು ಅಮರನಾಥ ದೇವಾಲಯದ ನಂದಿ ವಿಗ್ರಹ ತಯಾರಿಕೆಗೂ ಬಳಕೆ ಮಾಡಲಾಗಿದೆ. ಮಂಜು ಹಾಗೂ ಶೀತಮಾರುತದ ಹೊಡೆತಕ್ಕೆ ವಿಗ್ರಹ ನಾಶವಾಗದೆ ಇರಲಿ ಎಂಬ ಕಾರಣಕ್ಕೆ ಕೃಷ್ಣಶಿಲೆಯನ್ನು ಬಳಕೆ ಮಾಡಲಾಗಿದೆ. ವಿಗ್ರಹವು ಮೂರು ಅಡಿ ಎತ್ತರವನ್ನು ಹೊಂದಿದೆ.

ಪ್ರತಿ ವರ್ಷ ಅಮರನಾಥ ಯಾತ್ರೆಗೆ ಲಕ್ಷಾಂತರ ಜನರು ಭೇಟಿ ನೀಡುತ್ತಾರೆ. ಇಂತಹ ಪುಣ್ಯ ಕ್ಷೇತ್ರದಲ್ಲಿ ಮೈಸೂರಿನ ಶಿಲ್ಪಿ ಕೆತ್ತನೆ ಮಾಡಿದ ಹಾಗೂ ಮೈಸೂರಿನಲ್ಲಿ ದೊರೆತ ಕೃಷ್ಣಶಿಲೆಯಲ್ಲಿ ಅರಳಿದ ನಂದಿ ವಿಗ್ರಹ ಪ್ರತಿಷ್ಠಾಪನೆಯಾಗುತ್ತಿರುವುದು ಹೆಮ್ಮೆಯ ವಿಚಾರ.

ಅಯೋಧ್ಯೆಯ ಶ್ರೀ ರಾಮಲಲ್ಲಾ ಮೂರ್ತಿ, ಕೇದಾರನಾಥದಲ್ಲಿ ಪ್ರತಿಷ್ಠಾಪಿಸಿರುವ ಶಂಕರಾಚಾರ್ಯರ ಪ್ರತಿಮೆ ಹಾಗೂ ದೆಹಲಿಯ ಇಂಡಿಯಾ ಗೇಟ್‌ನಲ್ಲಿ ಸುಭಾಷ್‌ಚಂದ್ರ ಬೋಸ್ ಪ್ರತಿಮೆಯನ್ನು ಕೆತ್ತನೆ ಮಾಡುವ ಮೂಲಕ ಶಿಲ್ಪಿ ಅರುಣ್ ಯೋಗಿರಾಜ್ ದೇಶದ ಗಮನ ಸೆಳೆದಿದ್ದರು. ಅರುಣ್ ಯೋಗಿರಾಜ್ ಕುಟುಂಬ 250 ವರ್ಷಗಳಿಂದ ವಿಗ್ರಹ ಕೆತ್ತನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇವರ ತಾತ ಬಿ.ಬಸವಣ್ಣ ಶಿಲ್ಪಕಲೆಯಲ್ಲಿ ರಾಷ್ಟ್ರ ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತರು. ಇವರ ತಂದೆ ಬಿ.ಎಸ್.ಯೋಗಿರಾಜ್ ಶಿಲ್ಪ ಕೆತ್ತನೆಯಲ್ಲಿ ಸಾಕಷ್ಟು ಹೆಸರು ಮಾಡಿದವರು. ಅರುಣ್ ಯೋಗಿರಾಜ್ 11 ವರ್ಷದಲ್ಲಿದ್ದಾಗಲೇ ಶಿಲ್ಪಕೆತ್ತನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಎಂಬಿಎ ವಿದ್ಯಾಭ್ಯಾಸ ಪೂರ್ಣಗೊಳಿಸಿದ ನಂತರ 2008ರಿಂದ ಪೂರ್ಣಾವಧಿ ಶಿಲ್ಪಿಯಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.