ಜಿಲ್ಲೆ

ನಂದಳಿಕೆ ಸಿರಿಜಾತ್ರೆ ಪ್ರಚಾರಕ್ಕೆ ಮಾಸ್ಕ್!

Udupi

ಬೆಳ್ಮಣ್: ನಂದಳಿಕೆ ಸಿರಿಜಾತ್ರೆ ಈ ಬಾರಿ ಮಾಸ್ಕ್ ಮೂಲಕ ಪ್ರಚಾರಕ್ಕೆ ಇಳಿದಿದೆ. ವಿಶ್ವದೆಲ್ಲೆಡೆ ಕರೊನಾ ಮಹಾಮಾರಿಯಿಂದ ಜನ ಹೈರಾಣಾಗಿದ್ದು, ಈ ಹಿನ್ನೆಲೆಯಲ್ಲಿ ಕರೊನಾದ ಬಗ್ಗೆಯೂ ಜಾಗೃತರಾಗುವಂತೆ ನಂದಳಿಕೆ ಚಾವಡಿ ಅರಮನೆ ನಂದಳಿಕೆ ಸುಹಾಸ್ ಹೆಗ್ಡೆ ನೇತೃತ್ವದಲ್ಲಿ ವಿಶೇಷ ಪರಿಕಲ್ಪನೆ ರೂಪಿಸಲಾಗಿದೆ.

ಮಾರ್ಚ್ 28ರಂದು ನಂದಳಿಕೆ ಮಹಾಲಿಂಗೇಶ್ವರನ ದೇವಾಲಯದ ಜಾತ್ರೆ ನಡೆಯಲಿದ್ದು, ಕ್ಷೇತ್ರದಲ್ಲಿ ಪೂರ್ವ ತಯಾರಿಗಳು ನಡೆಯುತ್ತಿದೆ. ಈ ಹಿಂದೆ ಅಂಚೆ ಕಾರ್ಡ್, ಮಾವಿನ ಎಲೆ, ಛತ್ರಿ, ಗೋಣಿಚೀಲ ಹಾಗೂ ಮೈಲಿಗಲ್ಲಿನ ಪ್ರಚಾರದ ಮೂಲಕ ಜಾತ್ರೆಯ ಪ್ರಚಾರ ಕೈಗೊಳ್ಳಲಾಗಿತ್ತು. ಈ ಬಾರಿ ಮಾಸ್ಕ್ ಜತೆ ಅಲ್ಲಲ್ಲಿ ಮೈಲಿಗಲ್ಲುಗಳು ಕೂಡ ಪ್ರಚಾರಕ್ಕೆ ಬಳಕೆಯಾಗಲಿವೆ. ಮೈಲಿಗಲ್ಲುಗಳು ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯೆಲ್ಲೆಡೆ ರಸ್ತೆಯ ಬದಿಯಲ್ಲಿ ಪ್ರಯಾಣಿಕರ ಮನ ಸೆಳೆಯಲಿವೆ.

ಮಾಸ್ಕ್‌ನ ಒಂದು ಬದಿಯಲ್ಲಿ ನಂದಳಿಕೆ ಸಿರಿಜಾತ್ರೆ ಎಂದು ಬರೆದಿದ್ದು, ಇನ್ನೊಂದು ಬದಿಯಲ್ಲಿ ಜಾತ್ರೆಯ ದಿನಾಂಕ ನಮೂದಿಸಲಾಗಿದೆ. ಕ್ಷೇತ್ರದಲ್ಲಿ ಸೇವೆ ನೀಡುವ ಎಲ್ಲ ಸ್ವಯಂಸೇವಕರ ಮುಖದಲ್ಲಿ ಈ ಬಾರಿ ಸಿರಿಜಾತ್ರೆಯ ಮಾಸ್ಕ್ ಇರಲಿದ್ದು, 1000 ಸಾವಿರ ಮಾಸ್ಕ್ ಸಿದ್ಧಪಡಿಸಲಾಗಿದೆ.

ಕಳೆದ ಬಾರಿ ಕರೊನಾದಿಂದ ಸಿರಿ ಜಾತ್ರೆ ರದ್ದುಗೊಂಡಿದ್ದು, ಈ ಬಾರಿ ಹೆಚ್ಚಿನ ಸಂಖ್ಯೆಯ ಭಕ್ತರು ಆಗಮಿಸುವ ನಿರೀಕ್ಷೆ ಇದೆ. ಜಾತ್ರೆಯಲ್ಲಿ ಶಿಸ್ತು ಪಾಲನೆಗಾಗಿ 1000ಕ್ಕೂ ಅಧಿಕ ಸ್ವಯಂಸೇವಕರ ತಂಡ ಸಿದ್ಧಗೊಂಡಿದೆ. ಕೋವಿಡ್ ನಿಯಮಾವಳಿಗಳನ್ನು ಪಾಲಿಸಿಕೊಂಡು ಈ ಬಾರಿಯ ಸಿರಿ ಜಾತ್ರೆ ನಡೆಯಲಿದೆ. ಭಕ್ತರು ಗುಂಪುಗೂಡುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಅಲ್ಲಲ್ಲಿ ಕಲಾತಂಡಗಳ ಸಾಂಸ್ಕೃತಿಕ ಮೆರುಗು ನೀಡಲಿದೆ.

ಪ್ರಚಾರ ಫಲಕದ ಬಿಡುಗಡೆ ಕಾರ್ಯಕ್ರಮ ಗುರುವಾರ ಕ್ಷೇತ್ರದಲ್ಲಿ ನಡೆಯಿತು. ಕ್ಷೇತ್ರದ ಪ್ರಧಾನ ಅರ್ಚಕ ಹರೀಶ್ ತಂತ್ರಿ, ವ್ಯವಸ್ಥಾಪಕ ರವಿರಾಜ್ ಭಟ್, ಉದಯ್ ಕುಮಾರ್, ಅರುಣ್ ಭಂಡಾರಿ ಮತ್ತಿತರಿದ್ದರು.

ಆರೋಗ್ಯದ ಬಗ್ಗೆ ಕಾಳಜಿ ಮೂಡಿಸುವ ನಿಟ್ಟಿನಲ್ಲಿ ಈ ಬಾರಿಯ ಪ್ರಚಾರಕ್ಕೆ ಮಾಸ್ಕ್ ಸಿದ್ಧಪಡಿಸಲಾಗಿದೆ. ಕೋವಿಡ್ ನಿಯಾಮಾವಳಿ ಅನುಸರಿಸಿ ಸಿರಿಜಾತ್ರೆ ನಡೆಯಲಿದೆ. ಮಾಸ್ಕ್ ಪ್ರಚಾರದ ಜೊತೆಗೆ ಮೈಲಿಗಲ್ಲುಗಳು ಕೂಡ ಸಿರಿಜಾತ್ರೆಗೆ ಪ್ರಚಾರವನ್ನು ನೀಡಲಿವೆ.

- ಎನ್.ಸುಹಾಸ್ ಹೆಗ್ಡೆ, ನಂದಳಿಕೆ ಚಾವಡಿ ಅರಮನೆ