ಬೆಳಗಾವಿ: ಖಾನಾಪುರ ತಾಲೂಕಿನ ನಂದಗಡದಲ್ಲಿ ನಿರ್ಮಿಸಲಾಗುತ್ತಿರುವ ವೀರಭೂಮಿ ಸಂಗೊಳ್ಳಿ ರಾಯಣ್ಣ ಮ್ಯೂಸಿಯಂನ್ನು ಶೀಘ್ರವೇ ಉದ್ಘಾಟಿಸಲಾಗುವುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಭರವಸೆ ನೀಡಿದರು.
ನಂದಗಡಕ್ಕೆ ಮಂಗಳವಾರ ಭೇಟಿ ನೀಡಿದ್ದ ಅವರು ವೀರಭೂಮಿ ಮ್ಯೂಸಿಯಂ, ವಸ್ತು ಸಂಗ್ರಹಾಲಯ, ಮ್ಯೂಸಿಯಂ ಮುಖ್ಯ ದ್ವಾರ, ಸಂಗೊಳ್ಳಿ ರಾಯಣ್ಣ ಸ್ಮರಣೀಯ ಪ್ರತಿಮೆಗಳು, ಸಾರ್ವಜನಿಕ ಪ್ರವೇಶದ ಟಿಕೆಟ್ ಕೌಂಟರ್, ಅಲ್ಪೋಪಹಾರ ಗೃಹ, ವಾಹನಗಳ ಪಾರ್ಕಿಂಗ್ ವ್ಯವಸ್ಥೆ, ಶೌಚಾಲಯ, ಕಂಪೌಂಡ್, ದೀಪಾಲಂಕಾರ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿದ ಅವರು, ಕಾಲಮಿತಿಯೊಳಗೆ ಉಳಿದ ಕಾಮಗಾರಿ ಪೂರ್ಣಗೊಳಿಸಲು ಸಂಬಂಧಿಸಿದವರಿಗೆ ಸೂಚಿಸಿದರು.
ಇಲ್ಲಿಯವರೆಗೆ ಆಗಿರುವ ಕಾಮಗಾರಿಗಳನ್ನು ಆಧರಿಸಿ ಶೀಘ್ರವೇ ಉದ್ಘಾಟಿಸುತ್ತೇವೆ. ಮುಂದೆ 28 ಕೋಟಿ ರೂ. ಅನುದಾನದಲ್ಲಿ ಇನ್ನೂ ಹೆಚ್ಚಿನ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು. ಈ ಸಂಬಂಧ ಪ್ರಸ್ತಾವನೆ ಸಿದ್ಧವಿದ್ದು, ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಅನುಮೋದನೆ ಪಡೆದು ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು. ಯೋಜನೆಗಳಲ್ಲಿ ಕೆಲವು ಬದಲಾವಣೆಯಾಗುವ ಸಾಧ್ಯತೆಯಿದ್ದು, ಅ.29ರಂದು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಕರೆಯಲಾಗಿರುವ ಸಭೆಯಲ್ಲಿ ಚರ್ಚಿಸಿ ಅಂತಿಮ ತೀರ್ಮಾನ ತೆಗೆದುಕೊಳ್ಳುವುದು. ರಾಯಣ್ಣ ಮೂರ್ತಿ ಸಮೀಪದಲ್ಲಿನ ಕೆರೆಗೆ ಊರಿನ ಚರಂಡಿ ನೀರು ಸೇರುತ್ತಿದ್ದು, ತಡೆಗೋಡೆ ನಿರ್ಮಿಸಲು ಜಿಪಂ ಅನುದಾನದಲ್ಲಿ 2 ಕೋಟಿ ರೂ. ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈಗಾಗಲೇ 50 ಲಕ್ಷ ರೂ. ಅನುದಾನ ಜಿಪಂ ಸಿಇಒ ಕಾಯ್ದಿರಿಸಿದ್ದಾರೆ ಎಂದು ಮಾಹಿತಿ ನೀಡಿದರು.
ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಎಚ್.ಎಂ.ರೇವಣ್ಣ, ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಅಶೋಕ ದಳವಾಯಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ತುಳಸಿ ಮದ್ದಿನೇನಿ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಹರ್ಷ, ಖಾನಾಪೂರ ತಹಶೀಲ್ದಾರ್ ದುಂಡಪ್ಪ ಕೋಮಾರ ಇತರರಿದ್ದರು.