ಹುಬ್ಬಳ್ಳಿ : ದೇಶದಾದ್ಯಂತ ಕಡಿಮೆ ಅಂತರ ಹೊಂದಿರುವ ರೈಲು ನಿಲ್ದಾಣಗಳ ಮಧ್ಯೆ ನಮೋ ರೈಲು ಓಡಿಸಲಾಗುತ್ತದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದರು.
ಸೋಮವಾರ ವಿಡಿಯೋ ಕಾನ್ಪರೆನ್ಸ್ ಮೂಲಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 100, 150, 200 ಕಿಮೀ ಅಂತರಗಳ ರೈಲು ನಿಲ್ದಾಣಗಳ ಮಧ್ಯೆ ನಮೋ ರೈಲು ಸಂಚರಿಸಲಿದೆ. ಕರ್ನಾಟಕದಲ್ಲಿ ಬೆಂಗಳೂರು-ಮೈಸೂರು ಸೇರಿ ವಿವಿಧ ಕಡಿಮೆ ಅಂತರದ ನಿಲ್ದಾಣಗಳ ಮಧ್ಯೆ ನಮೋ ರೈಲು ಓಡಿಸುವ ಉದ್ದೇಶ ಇದೆ ಎಂದು ಹೇಳಿದರು.
ಈ ಬಾರಿಯ ಕೇಂದ್ರ ಬಜೆಟ್ನಲ್ಲಿ ಕರ್ನಾಟಕಕ್ಕೆ ರೈಲ್ವೆಗಾಗಿ 7,564 ಕೋಟಿ ರೂ. ಮೀಸಲಿರಿಸಲಾಗಿದೆ. ಕಳೆದ ಬಾರಿಗಿಂತ 5 ಕೋಟಿ ರೂ.ಗಳನ್ನು ಹೆಚ್ಚು ನೀಡಲಾಗಿದೆ. ಈ ಹಿಂದಿನ ಯುಪಿಎ ಸರ್ಕಾರದ ಅವಧಿಯ ಕೊನೇ ವರ್ಷದಲ್ಲಿ ನೀಡಿದ್ದಕ್ಕೆ ಹೋಲಿಸಿದರೆ ರಾಜ್ಯಕ್ಕೆ ಈ ಬಾರಿ ನೀಡಿರುವ ಅನುದಾನ 9 ಪಟ್ಟು ಹೆಚ್ಚು ಇದೆ ಎಂದರು.
ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ. ಸಾಮರ್ಥ್ಯ ದುರ್ಬಲಗೊಂಡಿರುವ ರೈಲು ಹಳಿಗಳನ್ನು ಹಂತ ಹಂತವಾಗಿ ಬದಲಾಯಿಸಲಾಗುತ್ತಿದ್ದು, 4-5 ವರ್ಷಗಳಲ್ಲಿ ಎಲ್ಲೆಡೆ ಹೊಸ ಹಳಿಗಳನ್ನು ಅಳವಡಿಸಲಾಗುವುದು. ವಿದ್ಯುದೀಕರಣಕ್ಕೆ ಆದ್ಯತೆ ನೀಡಲಾಗುತ್ತಿದೆ. ಯುಪಿಎ ಸರ್ಕಾರದ ಅವಧಿಯಲ್ಲಿ ಪ್ರತಿ ವರ್ಷ 15 ಕಿಮೀ ಮಾತ್ರ ವಿದ್ಯುದೀಕರಣ ಕಾಮಗಾರಿ ನಡೆಯುತ್ತಿತ್ತು. ಎನ್ಡಿಎ ಸರ್ಕಾರದ ಅವಧಿಯಲ್ಲಿ ಪ್ರತಿ ವರ್ಷ 300 ಕಿಮೀಗೂ ಹೆಚ್ಚು ವಿದ್ಯುದೀಕರಣ ಮಾಡಲಾಗುತ್ತಿದೆ ಎಂದು ತಿಳಿಸಿದರು.
2014ರ ನಂತರ ಕರ್ನಾಟಕದಲ್ಲಿ 1,652 ಕಿಮೀ ಹೊಸ ರೈಲ್ವೆ ಮಾರ್ಗಗಳನ್ನು ಅಳವಡಿಸಲಾಗಿದೆ. ಇಡೀ ಶ್ರೀಲಂಕಾದ ವಿಸ್ತೀರ್ಣದಷ್ಟು ರೈಲ್ವೆ ಮಾರ್ಗ ಕರ್ನಾಟಕದಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರದ ಅವಧಿಯಲ್ಲಿ ಆಗಿದೆ. ಹಲವಾರು ಹೊಸ ಮಾರ್ಗ ಸೇರಿದಂತೆ ನೂತನ ಯೋಜನೆಗಳನ್ನು ಕೈಗೊಳ್ಳಲಾಗುವುದು. ಇದಕ್ಕೆ ಬಜೆಟ್ನಲ್ಲಿಯೇ ಹಣ ಮೀಸಲಿಡಬೇಕೆಂದೇನೂ ಇಲ್ಲ. ರೈಲ್ವೆ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಸದಾ ಬದ್ಧವಾಗಿದೆ ಎಂದು ಹೇಳಿದರು.
ದೇಶದಾದ್ಯಂತ ಹೊಸ ಮಾರ್ಗ, ಡಬಲಿಂಗ್, ವರ್ಕ್ಶಾಪ್ಗಳ ಅಭಿವೃದ್ಧಿ ಸೇರಿದಂತೆ ಇನ್ನಿತರ ರೈಲ್ವೆ ಅಭಿವೃದ್ಧಿ ಕಾಮಗಾರಿಗಳಿಗೆ 51,479 ಕೋಟಿ ರೂ.ಗಳನ್ನು ಮೀಸಲಿರಿಸಲಾಗಿದ್ದು, ಕರ್ನಾಟಕದಲ್ಲಿರುವ ರೈಲ್ವೆ ಸೌಲಭ್ಯಗಳೂ ಅಭಿವೃದ್ಧಿಗೊಳ್ಳಲಿವೆ. ಈಗಾಗಲೇ ಕರ್ನಾಟಕದಲ್ಲಿ 10 ವಂದೇ ಭಾರತ್ ರೈಲುಗಳು ಸಂಚರಿಸುತ್ತಿವೆ. ಮುಂದಿನ ದಿನಗಳಲ್ಲಿ ದೇಶದಾದ್ಯಂತ 100 ಹೊಸ ಅಮೃತ ಭಾರತ ಹಾಗೂ 200 ಹೊಸ ವಂದೇ ಭಾರತ್ ರೈಲುಗಳು ಸಂಚರಿಸಲಿವೆ ಎಂದರು.
ಭೂಮಿ ಹಸ್ತಾಂತರಿಸಿಲ್ಲ: ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನೈಋತ್ಯ ರೈಲ್ವೆ ವಲಯದ ಅಪರ ಪ್ರಧಾನ ವ್ಯವಸ್ಥಾಪಕ ಕೆ.ಎಸ್. ಜೈನ್, ಧಾರವಾಡ-ಬೆಳಗಾವಿ ನೂತನ ರೈಲು ಮಾರ್ಗಕ್ಕೆ ರಾಜ್ಯ ಸರ್ಕಾರ ಇನ್ನೂ ಭೂಮಿ ಹಸ್ತಾಂತರ ಮಾಡಿಲ್ಲ. ಭೂಮಿ ವಶಪಡಿಸಿಕೊಳ್ಳುವ ಕಾರ್ಯ ಇನ್ನೂ ನಡೆದಿದೆ ಎಂದು ತಿಳಿಸಿದರು.
ರಾಜ್ಯದ 10 ಮಾರ್ಗಗಳಲ್ಲಿ ಮೆಮು ರೈಲುಗಳನ್ನು ಓಡಿಸಲು ರೈಲ್ವೆ ಮಂಡಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಹುಬ್ಬಳ್ಳಿ-ಗೋವಾ ಮಧ್ಯದ ಘಟ್ಟ ಪ್ರದೇಶದಲ್ಲಿ ಡಬಲಿಂಗ್ ಕಾಮಗಾರಿ ಇನ್ನೂ ಆಗಿಲ್ಲ. ಪಿಂಕ್ ಬುಕ್ (ವಿವರ ಮಾಹಿತಿ ಪುಸ್ತಕ) ಕೈ ಸೇರಿದ ನಂತರ ಈ ಬಾರಿಯ ಬಜೆಟ್ನಲ್ಲಿ ನೈಋತ್ಯ ರೈಲ್ವೆಗೆ ನೀಡಿದ ಕೊಡುಗೆಗಳ ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ ಎಂದರು.
ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ. ಮಂಜುನಾಥ ಕನಮಡಿ ಹಾಗೂ ಇತರ ಹಿರಿಯ ಅಧಿಕಾರಿಗಳು ಇದ್ದರು.