ಜಿಲ್ಲೆ

‘ನಮ್ಮೂರು ನಮ್ಮಕೆರೆ’ ಹಸ್ತಾಂತರ ಸೆ. 2ರಂದು

ಕಲಘಟಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್ ಕಲಘಟಗಿ ಹಾಗೂ ಗ್ರಾಮ ಪಂಚಾಯಿತಿ ಮತ್ತು ಕೆರೆ ಅಭಿವೃದ್ಧಿ ಸಮಿತಿ ಬೆಲವಂತರ ಹಾಗೂ ತುಮರಿಕೊಪ್ಪ ಸಹಭಾಗಿತ್ವದಲ್ಲಿ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ ಸಮ್ಮುಖದಲ್ಲಿ ಸೆ. 2ರಂದು ಬೆಳಗ್ಗೆ 10.30ಕ್ಕೆ ‘ನಮ್ಮೂರು ನಮ್ಮಕೆರೆ’ ಹಸ್ತಾಂತರ ಹಾಗೂ ಯೋಜನೆಯ ವಿವಿಧ ಸೌಲಭ್ಯಗಳ ವಿತರಣಾ ಕಾರ್ಯಕ್ರಮ ನಡೆಯಲಿದೆ ಎಂದು ಕಲಘಟಗಿ ಯೋಜನಾಧಿಕಾರಿ ಪ್ರಶಾಂತ ಎಸ್. ತಿಳಿಸಿದರು.

ಪಟ್ಟಣದಲ್ಲಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಸೆ. 2ರಂದು ಬೆಳಗ್ಗೆ 9.30ಕ್ಕೆ ಬೆಲವಂತರ ಬಯಲು ಬಸವೇಶ್ವರ ಕೆರೆಗೆ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಬಾಗಿನ ಅರ್ಪಣೆ ಮಾಡುವ ಮೂಲಕ ಕೆರೆಯನ್ನು ಸ್ಥಳೀಯ ಆಡಳಿತಕ್ಕೆ ಹಸ್ತಾಂತರ ಮಾಡುವರು. ನಂತರ ಪಟ್ಟಣದ ಹನ್ನೆರಡು ಮಠದ ಸಮೀಪದ ಮೈದಾನದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಹನ್ನೆರಡು ಮಠದ ರೇವಣಸಿದ್ಧ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಸಭಾ ಕಾರ್ಯಕ್ರಮ ಉದ್ಘಾಟಿಸುವರು. ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಜಿಲ್ಲಾಧ್ಯಕ್ಷ ರಾಜಣ್ಣ ಕೊರವಿ, ಜಿಲ್ಲಾ ಜನಜಾಗೃತಿ ವೇದಿಕೆ ಉಪಾಧ್ಯಕ್ಷ ಪ್ರಭಾಕರ ನಾಯ್ಕ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಧಾರವಾಡ ಪ್ರಾದೇಶಿಕ ನಿರ್ದೇಶಕ ವಸಂತ ಸಾಲ್ಯಾನ, ಬೇಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರತ್ನವ್ವ ಅಂಗಡಿ, ಬೆಲವಂತರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಬಸನಕೊಪ್ಪ, ಕಲಘಟಗಿ ಯೋಜನಾಧಿಕಾರಿ ಪ್ರಶಾಂತ ನಾಯ್ಕ, ರಾಮಪ್ಪ ಕೌಲಗೇರಿ, ಎಸ್.ವಿ. ಪಾಟೀಲ ಸೇರಿದಂತೆ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಪ್ರಭಾಕರ ನಾಯ್ಕ, ಜಯರಾಮ, ಪ್ರಕಾಶ ಗುಡಿಸಲಮನಿ ಇದ್ದರು.