ಜಿಲ್ಲೆ

‘ನಮ್ಮ ಕ್ಲಿನಿಕ್’ನಿಂದ ಆರೋಗ್ಯ ಕ್ಷೇತ್ರಕ್ಕೆ ಬಲ

reporterctd

ದಾವಣಗೆರೆ : ಆರೋಗ್ಯ ಕ್ಷೇತ್ರವನ್ನು ತಳಮಟ್ಟದಿಂದ ಬಲಪಡಿಸುವ ಮತ್ತು ಸುಧಾರಣೆ ತರುವ ಉದ್ದೇಶದಿಂದ ‘ನಮ್ಮ ಕ್ಲಿನಿಕ್’ ಸ್ಥಾಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ಪಾಲಿಕೆ ವ್ಯಾಪ್ತಿಯ ಆವರಗೆರೆ ಗ್ರಾಮದಲ್ಲಿ ಬುಧವಾರ ‘ನಮ್ಮ ಕ್ಲಿನಿಕ್’ಗೆ ಚಾಲನೆ ನೀಡಿ ಮಾತನಾಡಿದರು.
ಮೊದಲ ಹಂತದಲ್ಲಿ ಒಂದು ಕ್ಲಿನಿಕ್ ಆಗಿದೆ. ಮುಂದೆ ಅಗತ್ಯ ಇರುವಲ್ಲಿ ಕ್ಲಿನಿಕ್ ತೆರೆಯಲಾಗುವುದು ಎಂದು ಹೇಳಿದರು.
ಆವರಗೆರೆಯಲ್ಲಿ ಜನಸಾಮಾನ್ಯರಿಗೆ ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ನಮ್ಮ ಕ್ಲಿನಿಕ್ ಉಪಯೋಗವಾಗಲಿದೆ. ಜ್ವರ, ಶೀತ, ಕೆಮ್ಮು ಇನ್ನಿತರ ಸಣ್ಣಪುಟ್ಟ ಕಾಯಿಲೆಯ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಅಥವಾ ದೊಡ್ಡ ಆಸ್ಪತ್ರೆಗೆ ಹೋಗಬೇಕಾಗಿಲ್ಲ. ಆಧಾರ್ ಕಾರ್ಡ್ ಇನ್ನಿತರ ಯಾವುದೇ ಕಾರ್ಡ್‌ಗಳೂ ಬೇಡ. ಉಚಿತವಾಗಿ ಪರೀಕ್ಷೆ ನಡೆಸಿ ಔಷಧ ನೀಡಲಾಗುತ್ತದೆ ಎಂದರು.
ಒಬ್ಬ ವೈದ್ಯ, ಒಬ್ಬರು ಶುಶ್ರೂಷಕರು, ಒಬ್ಬರು ಲ್ಯಾಬ್ ಟೆಕ್ನಿಷಿಯನ್, ಒಬ್ಬರು ಡಿ ಗ್ರೂಪ್ ನೌಕರ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗರಾಜ ಮಾತನಾಡಿ, 30 ಸಾವಿರ ಜನಸಂಖ್ಯೆ ಇರುವ ನಗರದ ಹಿಂದುಳಿದ ಪ್ರದೇಶದಲ್ಲಿ ನಮ್ಮ ಕ್ಲಿನಿಕ್ ತೆರೆಯಲಾಗುತ್ತದೆ. 15ನೇ ಹಣಕಾಸು ಆಯೋಗವು ರಾಜ್ಯದಲ್ಲಿನ ಸ್ಥಳೀಯ
ಸಂಸ್ಥೆಗಳ ಮೂಲಕ ಆರೋಗ್ಯ ಕ್ಷೇತ್ರದ ನಿರ್ದಿಷ್ಟ ಚಟುವಟಿಕೆಗಳಿಗಾಗಿ ಅನುದಾನವನ್ನು ಶಿಫಾರಸು ಮಾಡಿದೆ ಎಂದು ವಿವರಿಸಿದರು.
ಗಂಭೀರ ಕಾಯಿಲೆಗಳು ಕಂಡುಬಂದರೆ ಜಿಲ್ಲಾಸ್ಪತ್ರೆಗೆ ಶಿಫಾರಸು ಮಾಡಬೇಕು. ಮೂಲ 12 ಚಿಕಿತ್ಸೆಗಳೂ ಸೇರಿ ಹಲವು ಆರೋಗ್ಯ ಸೇವೆಗಳು ಈ ಕ್ಲಿನಿಕ್ ಮೂಲಕ ದೊರೆಯಲಿವೆ ಎಂದು ಹೇಳಿದರು.
ರಾಜ್ಯದ 114 ಕಡೆಗಳಲ್ಲಿ ನಮ್ಮ ಕ್ಲಿನಿಕ್ ಬುಧವಾರ ಆರಂಭಗೊಂಡಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವರ್ಚುವಲ್ ಮೂಲಕ ಎಲ್ಲ ಕ್ಲಿನಿಕ್‌ಗಳಿಗೆ ಚಾಲನೆ ನೀಡಿದರು.
ಮೇಯರ್ ಆರ್. ಜಯಮ್ಮ, ದೂಡಾ ಅಧ್ಯಕ್ಷ ಎ.ವೈ. ಪ್ರಕಾಶ್, ಜಿಲ್ಲಾ ಪಂಚಾಯಿತಿ ಸಿಇಒ ಡಾ. ಎ. ಚನ್ನಪ್ಪ, ಯೋಜನಾ ಅಭಿವೃದ್ಧಿ ಅಧಿಕಾರಿ ಮಹಾಂತೇಶ್, ಸ್ಥಳೀಯ ಮುಖಂಡರಾದ ಆವರಗೆರೆ ಉಮೇಶ್, ಆವರಗೆರೆ ವಾಸು, ಆರ್.ಸಿ.ಎಚ್ ಅಧಿಕಾರಿ ಡಾ. ಕೆ.ಎಸ್. ಮೀನಾಕ್ಷಿ, ತಾಲೂಕು ಆರೋಗ್ಯ ಅಧಿಕಾರಿ ಡಾ. ದೇವರಾಜ್ ಇದ್ದರು.