ಬೆಂಗಳೂರು: ಕೌಶಲಾಭಿವೃದ್ಧಿ ಇಲಾಖೆಯು ರಾಷ್ಟ್ರೀಯ ಜೀವನೋಪಾಯ ಅಭಿಯಾನದಡಿ ಮಹಿಳೆಯರು ತಯಾರಿಸಿರುವ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟಕ್ಕಾಗಿ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಆಯೋಜನೆಗೊಂಡಿರುವ "ನಮ್ಮ ಸರಸ್' ಮೇಳಕ್ಕೆ ಶನಿವಾರ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.
ವಾರಾಂತ್ಯವಾದ್ದರಿಂದ ನಗರದ ಮಂದಿ ಸಾಕಷ್ಟು ಸಂಖ್ಯೆಯಲ್ಲಿ ಆಗಮಿಸಿ, ಭರ್ಜರಿ ಶಾಪಿಂಗ್ ನಡೆಸಿದ್ದಾರೆ. ಈ ಮೂಲಕ ಗ್ರಾಮೀಣ ಭಾಗದ ಮಹಿಳೆಯರು ಸ್ವಾವಲಂಬಿಯಾಗಿ ತಯಾರಿಸಿರುವ ವಸ್ತುಗಳನ್ನು ನಗರದ ಮಂದಿ ಖರೀದಿಸಿ ಪ್ರೋತ್ಸಾಹಿಸಿದ್ದಾರೆ. ಮೇಳದಲ್ಲಿ 250 ಮಳಿಗೆಗಳಿದ್ದು, ವಿವಿಧ ಕರಕುಶಲ ವಸ್ತುಗಳು ಲಭ್ಯವಿವೆ. ಜತೆಗೆ ಇದೇ ಮೊದಲ ಬಾರಿಗೆ ಸ್ವ&ಸಹಾಯ ಗುಂಪಿನ ಮಹಿಳೆಯರು ವಿವಿಧ ಖಾದ್ಯಗಳನ್ನು ತಯಾರಿಸಲು ಲೈವ್ ುಡ್ಕೋರ್ಟ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಸರಸ್ ಮೇಳದಲ್ಲಿ ತಮಿಳುನಾಡು, ಪಶ್ಚಿಮ ಬಂಗಾಳ, ಆಂಧ್ರಪ್ರದೇಶ, ಛತ್ತೀಸ್ಗಢ, ಹಿಮಾಚಲ ಪ್ರದೇಶ, ತೆಲಂಗಾಣ ಸೇರಿ ರಾಜ್ಯದ ವಿವಿಧ ಜಿಲ್ಲೆಗಳ ಮಳಿಗೆಗೆಳಿವೆ. ಅದರಲ್ಲೂ ಕರಕುಶಲ ಉದ್ಯಮದ ವಿವಿಧ ವಸ್ತುಗಳ ಮಳಿಗೆಗಳು, ಖಾದ್ಯ ಮಳಿಗೆಗಳು, ಖಾದಿ ಬಟ್ಟೆ ಹಾಗೂ ಆಕರ್ಷಕ ಚಪ್ಪಲಿ ಮಳಿಗೆಗಳು ಹೆಚ್ಚಿನ ಜನರಿಂದ ಆಕರ್ಷಣೆ ಪಡೆದುಕೊಂಡಿವೆ. ಸಾಂಪ್ರದಾಯಿಕ ಕಲೆಗಳಾದ ಕಸೂತಿ, ಮೇಕೆ ಚರ್ಮದ ಮೇಲಿನ ಆಕರ್ಷಕ ಬಣ್ಣದ ಚಿತ್ತಾರಗಳು, ಬಿದಿರಿನಿಂದ ಮೂಡಿಬಂದ ಕಲಾಕೃತಿಗಳು, ಇಳಕಲ್ ಸೀರೆ, ರೇಷ್ಮೆ ಸೀರೆ, ಉಣ್ಣೆ ಉತ್ಪನ್ನ ಮಳಿಗೆಗಳು ಮೇಳದಲ್ಲಿವೆ.
ಹೊರರಾಜ್ಯ ಸೇರಿ ಕರ್ನಾಟಕದ ವಿವಿಧ ಜಿಲ್ಲೆಗಳ ಬಗೆಬಗೆಯ ಖಾದ್ಯಗಳ ವಿಶೇಷ "ಲೈವ್ ಫುಡ್ ಕೋರ್ಟ್' ಸರಸ್ ಮೇಳದ ಮತ್ತೊಂದು ಆಕರ್ಷಣೆ. ಇಲ್ಲಿ ವಿವಿಧ ರುಚಿಯ ಖಾದ್ಯಗಳನ್ನು ಸವಿಯಬಹುದಾಗಿದೆ. ಇದು ಬಜೆಟ್ನಲ್ಲಿ ಘೋಷಣೆಯಾದ "ಅಕ್ಕ ಕೆಫೆ'ಯ ಪ್ರಾಯೋಗಿಕ ಪ್ರದರ್ಶನವೂ ಆಗಿದೆ. ಮಹಾರಾಷ್ಟ್ರ, ತೆಲಂಗಾಣ, ಗೋವಾ, ಪುದುಚೇರಿ, ರಾಜಸ್ಥಾನ, ಕೇರಳ ಸೇರಿ ವಿವಿಧ ಭಾಗದ ವಿಶೇಷ ರುಚಿಯನ್ನು ಸವಿಯಬಹುದಾಗಿದೆ.
ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸರಸ್ ಮೇಳವನ್ನು ಮಾ.9ರವರೆಗೆ ಹತ್ತು ದಿನಗಳ ಕಾಲ ಆಯೋಜಿಸಲಾಗಿದೆ. ಪ್ರತಿದಿನ ಸಂಜೆ 6ರಿಂದ ಸಾಂಪ್ರದಾಯಿಕ, ಶಾಸ್ತ್ರೀಯ ಹಾಗೂ ಜನಪದ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ಇರಲಿದೆ.