ಜಿಲ್ಲೆ

ನಮ್ಮ ಮೆಟ್ರೋ ಪ್ರಯಾಣಿಕರ ಫೀಡ್​ಬ್ಯಾಕ್​ ಸಂಗ್ರಹ; ಮೇ.6ರವರೆಗೆ ಪ್ರತಿಕ್ರಿಯೆ ನೀಡಲು ಅವಕಾಶ

Bengaluru - General - Rama Kishan K V

ಬೆಂಗಳೂರು: ನಮ್ಮ ಮೆಟ್ರೋ ಸೇವೆ ಬಗ್ಗೆ ಪ್ರಯಾಣಿಕರ ಅನುಭವ ಸಂಗ್ರಹಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್​ಸಿಎಲ್​) ಮುಂದಾಗಿದೆ. ಈ ಸಂಬಂಧ ಏ.8 ರಿಂದ ಮೇ 6ರ ವರೆಗೆ ಸಮೀೆ ನಡೆಸಲಿದೆ.

ಕನ್ನಡ ಹಾಗೂ ಇಂಗ್ಲೀಷ್​ ಭಾಷೆಯಲ್ಲಿ ಸಮೀಕ್ಷೆ ನಡೆಸಲಾಗುತ್ತಿದ್ದು, ಇದರಿಂದ ಗುಣಮಟ್ಟದ ಸೇವೆ ನೀಡಲು ಹಾಗೂ ಲಂಡನ್​ ಇಂಪೀರಿಯಲ್​ ಕಾಲೇಜ್​ ನಮ್ಮ ಮೆಟ್ರೋಗಾಗಿ ಕಾರ್ಯಕ್ಷಮತೆ ಸೂಚಕಗಳನ್ನು ರೂಪಿಸಲು ಬೇಕಿರುವ ಅಧ್ಯಯನ ನಡೆಸಲು ಸಹಕಾರಿಯಾಗಲಿದೆ ಎಂದು ಬಿಎಂಆರ್​ಸಿಎಲ್​ ತಿಳಿಸಿದೆ.

ಪ್ರಯಾಣಿಕರು ನಿಗಮದ ವೆಬ್​ಸೈಟ್​ನಲ್ಲಿ ಪ್ರತಿಕ್ರಿಯೆ ಪುಟಗಳಲ್ಲಿ ಭಾಗವಹಿಸಬಹುದು. ಜತೆಗೆ ನಿಲ್ದಾಣಗಳಲ್ಲಿ ಪ್ರದರ್ಶಿಸಲಾಗುವ ಕ್ಯೂಆರ್​ ಕೋಡ್​ ಸ್ಕ್ಯಾನ್ ಮಾಡುವ ಮೂಲಕ ಅಧಿಕೃತ ಮೊಬೈಲ್​ ಅಪ್ಲಿಕೇಶನ್​ ಮೂಲಕ ಸಮೀಕ್ಷೆಯಲ್ಲಿ ಕೇಳಿರುವ ಪ್ರಶ್ನೆಗಳಿಗೆ ಉತ್ತರಿಸಬಹುದಾಗಿದೆ. ನಮ್ಮ ಮೆಟ್ರೋ ಲಭ್ಯತೆ, ನಿಲ್ದಾಣ ಪ್ರವೇಶಿಸುವಿಕೆ, ಸುಗಮ ಸಂಚಾರ, ಪ್ರಯಾಣಕ್ಕೆ ಮುನ್ನ ಮಾಹಿತಿ ಹಾಗೂ ಪ್ರಯಾಣದ ವೇಳೆ ನೀಡುವ ಮಾಹಿತಿಗೆ ಸಂಬಂಧಿಸಿ 11 ಪ್ರಶ್ನೆಗಳನ್ನು ಕೇಳಲಾಗಿದೆ.

ಏನೆಲ್ಲ ಪ್ರಶ್ನೆಗಳಿವೆ?

  1. ರೈಲಿನಲ್ಲಿ ಸಂಚರಿಸುವಾಗ ಆಗಿಂದಾಗ್ಗೆ ನೀಡಲಾಗುವ ಮಾಹಿತಿ ಬಹು ಉಪಯುಕ್ತವೇ?
  2. ಟಿಕೆಟ್​ ಖರೀದಿ, ಪಾವತಿ ಹಾಗೂ ರೀಚಾರ್ಜ್​ ಸುಲಭವಾಗಿದೆಯೇ?
  3. ಒಂದು ಮಾರ್ಗದಿಂದ ಮತ್ತೊಂದು ಮಾರ್ಗದ ರೈಲು ಬದಲಾವಣೆ ಸುಲಭವೇ?
  4. ನಿಲ್ದಾಣ ಪ್ರವೇಶಿಸಿ ಫ್ಲಾಟ್​ಫಾರಂ ತಲುಪುವುದು ಸುಲಭವೇ?
  5. ರೈಲುಗಳ ನಡುವಿನ ಸಮಯದ ಅಂತರ ಅನುಕೂಲಕರವಾಗಿದೆಯೇ ಸೇರಿದಂತೆ ಹಲವು ಪ್ರಶ್ನೆಗಳಿವೆ.
    ಪ್ರಶ್ನೆಗಳಿಗೆ 'ಒಪ್ಪಿಗೆ ಇದೆ, ತಟಸ್ಥ, ಒಪ್ಪಿಗೆ ಇಲ್ಲ, ಗೊತ್ತಿಲ್ಲ' ಆಯ್ಕೆಗಳ ಮೂಲಕ ಉತ್ತರಿಸಬಹುದು.