ಜಿಲ್ಲೆ

ತುಮಕೂರುವರೆಗೂ ಮೆಟ್ರೋ! ರಾ.ಹೆ ಪಕ್ಕ ಹೆಚ್ಚುತ್ತಿದೆ ರಿಯಲ್​ ಎಸ್ಟೇಟ್​ ಚಟುವಟಿಕೆ

ಬೆಂಗಳೂರು: ಬೆಂಗಳೂರು-ತುಮಕೂರು ನಮ್ಮ ಮೆಟ್ರೋ ಮಾರ್ಗಕ್ಕೆ ರಾಜ್ಯ ಸರ್ಕಾರ ಹಸಿರು ನಿಶಾನೆ ತೋರುತ್ತಿದ್ದಂತೆ, ತುಮಕೂರು ರಸ್ತೆಯಲ್ಲಿ ಬಂಡವಾಳ ಹೂಡಿಕೆ ಏರಿಕೆಯಾಗುತ್ತಿದೆ. ದಿನದಿಂದ ದಿನಕ್ಕೆ ಈ ಭಾಗದಲ್ಲಿ ರಿಯಲ್​ ಎಸ್ಟೇಟ್​ ಚಟುವಟಿಕೆಗಳು ಗರಿಗೆದರಿದ್ದು, ಹೊಸ ಬಡಾವಣೆಗಳು ನಿರ್ಮಾಣವಾಗುತ್ತಿವೆ.

ಮೆಟ್ರೋ ಜಾಲವನ್ನು ವಿಸ್ತರಿಸುವ ಕ್ರಮಕ್ಕೆ ಕಳೆದ ರಾಜ್ಯ ಬಜೆಟ್​ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆಗಳನ್ನು ಮಾಡಿದ್ದಾರೆ. ನಂತರದಲ್ಲಿ ಈ ಸಂಬಂಧ ಕಾರ್ಯಸಾಧ್ಯತಾ ವರದಿ ಸಿದ್ಧಪಡೆಸಲು ಬಿಎಂಆರ್​ಸಿಎಲ್​ ಟೆಂಡರ್​ ಆಹ್ವಾನಿಸಿದೆ.

ಪ್ರಸ್ತುತ ತುಮಕೂರು ರಸ್ತೆಯ ನಾಗಸಂದ್ರವರೆಗೆ ಮೆಟ್ರೋ ಸಂಪರ್ಕವಿದ್ದು, ಮಾದಾವರದವರೆಗೆ ವಿಸ್ತರಣೆಯಾಗಲಿದೆ. ಇಲ್ಲಿಂದ ತುಮಕೂರು 52.41 ಕಿ.ಮೀ. ದೂರದಲ್ಲಿದೆ. ಈ ಮಾರ್ಗವನ್ನು ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಿಸಲು ಸರ್ಕಾರ ನಿರ್ಧರಿಸಿದೆ.

ರಾಷ್ಟ್ರೀಯ ಹೆದ್ದಾರಿ 48ರ ಪಕ್ಕದಲ್ಲೆ ಮೆಟ್ರೋ ಮಾರ್ಗ ನಿರ್ಮಾಣ ಯೋಜನೆ ರಿಯಲ್​ ಎಸ್ಟೇಟ್​ ಕ್ಷೇತ್ರಕ್ಕೆ ವರದಾನವಾದಂತಾಗಿದೆ. ಜನರು ಮೆಟ್ರೋ ನಿಲ್ದಾಣದ ಪಕ್ಕದಲ್ಲೆ ಮನೆ ಖರೀದಿ ಹಾಗೂ ಬಾಡಿಗೆ ಮನೆ ಹೊಂದಲು ಸಹಜವಾಗಿಯೇ ಮುಂದಾಗುತ್ತಾರೆ. ಒಂದು ಬಾರಿ ಮೆಟ್ರೋ ಸಂಚಾರ ಆರಂಭವಾದರೆ ಪ್ರಮುಖ ವಸತಿ ಪ್ರದೇಶಗಳ ಸುತ್ತಮುತ್ತಲಿನ ಖಾಲಿ ನಿವೇಶನಗಳಿಗೆ ಬೇಡಿಕೆ ಸಿಗಲಿದೆ ಎಂಬುದು ತಜ್ಞರ ಲೆಕ್ಕಾಚಾರ. ಈಗಾಗಲೇ ತುಮಕೂರು ಮಾರ್ಗದಲ್ಲಿ ಸೈಟ್​, ಫ್ಲ್ಯಾಟ್​​ಗಳನ್ನು ಖರೀದಿಸಲು ಆಸಕ್ತಿ ತೋರುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಹಲವು ರಿಯಲ್​ ಎಸ್ಟೇಟ್​ ಸಂಸ್ಥೆಗಳು ಬಡಾವಣೆಗಳನ್ನು ಅಭಿವೃದ್ಧಿಪಡಿಸುತ್ತಿವೆ.

ತುಮಕೂರಿಗೆ ಮೆಟ್ರೋ ಯೋಜನೆ ಸಾಕಾರವಾದರೆ ಹಲವು ರೆಸಿಡೆನ್ಶಿಯಲ್​ ಯೋಜನೆಗಳು ಆರಂಭವಾಗಲಿದ್ದು, ಶಾಲೆ, ಆಸ್ಪತ್ರೆಗಳು ತಲೆ ಎತ್ತಲಿವೆ. ಜತೆಗೆ ಮಾಲ್​ಗಳೂ ನಿರ್ಮಾಣವಾಗುವುದು ಖಚಿತ. ಅನುಕೂಲತೆಗಳು ಹೆಚ್ಚಾದಂತೆ ಬಂಡವಾಳ ಹೂಡಿಕೆಯೂ ಹೆಚ್ಚಾಗಿ ಹರಿದುಬರಲಿದೆ.

ಸುಗಮ ಸಂಚಾರಕ್ಕೆ ಅಪಾರ ಕಾಣಿಕೆ

ಕಳೆದ ದಶಕದಿಂದ ರಾಜಧಾನಿಯಲ್ಲಿ ಸುಗಮ ಸಂಚಾರ ವ್ಯವಸ್ಥೆಯ ಭಾಗವಾಗಿ ನಮ್ಮ ಮೆಟ್ರೋ ನೀಡಿರುವ ಕಾಣಿಕೆ ಅಪಾರ. ಇದರಿಂದ ಸಂಚಾರದಟ್ಟಣೆ ಹಾಗೂ ಪರಿಸರ ಮಾಲಿನ್ಯ ನಿಯಂತ್ರಣ ಸಾಧ್ಯವಾಗಿದೆ. ಮೆಟ್ರೋದಲ್ಲಿ ನಿತ್ಯ 7 ಲಕ್ಕೂ ಹೆಚ್ಚಿನ ಜನರು ಪ್ರಯಾಣಿಸುತ್ತಿದ್ದು, ದೇಶದ ಅತ್ಯುತ್ತಮ ಮೆಟ್ರೋ ಸೇವೆಗಳಲ್ಲಿ ಮುಂಚೂಣಿಯಲ್ಲಿದೆ. ಪ್ರಸ್ತುತ 74 ಕಿ.ಮೀ. ಮಾರ್ಗದಲ್ಲಿ ಮೆಟ್ರೋ ಕಾರ್ಯಾಚರಿಸುತ್ತಿದ್ದು, 2025ರ ಮಾರ್ಚ್​ ವೇಳೆಗೆ ಹೆಚ್ಚುವರಿಯಾಗಿ 44 ಕಿ.ಮೀ. ಮಾರ್ಗ ಸೇರ್ಪಡೆಯಾಗಲಿದೆ.