ಬೆಂಗಳೂರು: ವಾರದ ದಿನಗಳಲ್ಲಿ ಪ್ರಾಯೋಗಿಕವಾಗಿ ನಾಡಪ್ರಭು ಕೆಂಪೇಗೌಡ ನಿಲ್ದಾಣ ಮೆಜೆಸ್ಟಿಕ್ ಮತ್ತು ಮಹಾತ್ಮಗಾಂಧಿ ರಸ್ತೆ ಮೆಟ್ರೋ ನಿಲ್ದಾಣಗಳ ನಡುವೆ ಶುಕ್ರವಾರದಿಂದ(ಸೆಪ್ಟೆಂಬರ್ 1) ರೈಲುಗಳು ಹೆಚ್ಚುವರಿ ಟ್ರಿಪ್ ನಡೆಸಲಿವೆ ಎಂದು ಬಿಎಂಆರ್ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.
ಜನ ದಟ್ಟಣೆಯ ಸಮಯದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಸೋಮವಾರದಿಂದ ಶುಕ್ರವಾರದವರೆಗೆ ನೇರಳೆ ಮಾರ್ಗದ ನಾಡಪ್ರಭು ಕೆಂಪೇಗೌಡ ನಿಲ್ದಾಣ ಮೆಜೆಸ್ಟಿಕ್ ಮತ್ತು ಮಹಾತ್ಮಗಾಂಧಿ ರಸ್ತೆ ಮೆಟ್ರೋ ನಿಲ್ದಾಣಗಳ ನಡುವೆ ಹೆಚ್ಚುವರಿ ಟ್ರಪ್ ಇರಲಿದೆ.
ಮಹಾತ್ಮಗಾಂಧಿ ರಸ್ತೆಯಿಂದ ಬೈಯಪ್ಪನಹಳ್ಳಿ ಕಡೆಗೆ ಹೋಗುವ ಪ್ರಯಾಣಿಕರು ಮಹಾತ್ಮಗಾಂಧಿ ರಸ್ತೆಯ ಮೆಟ್ರೋ ನಿಲ್ದಾಣದಲ್ಲಿ ಇಳಿದು ಬೈಯಪ್ಪನಹಳ್ಳಿ ಕಡೆಗೆ ಹೋಗುವ ರೈಲಿನಲ್ಲಿ ಪ್ರಯಾಣಿಸಬಹುದು ಎಂದು ಬಿಎಂಆರ್ಸಿಎಲ್ ತಿಳಿಸಿದೆ.
ನಗರದಲ್ಲಿ ನಮ್ಮ ಮೆಟ್ರೋ ‘ಪಿಂಕ್ ಮಾರ್ಗ’ದ ಕಾಮಗಾರಿ ಭರದಿಂದ ಸಾಗಿದೆ. ಲಕ್ಕಸಂದ್ರ ಮೆಟ್ರೋ ನಿಲ್ದಾಣದಿಂದ ಸುರಂಗ ಮಾರ್ಗ ಕೊರೆಯುವ ಕೆಲಸ ಆರಂಭಿಸಿದ್ದ “ವಮಿಕ’ ಟಿಬಿಎಂ ಯಂತ್ರ 721 ಮೀ. ಸುರಂಗ ಕೊರೆಯುವುದರೊಂದಿಗೆ ಲ್ಯಾಂಗೊರ್ಡ್ ಟೌನ್ ನಿಲ್ದಾಣದಿಂದ ಬುಧವಾರ ಯಶಸ್ವಿಯಾಗಿ ಹೊರ ಬಂದಿದೆ.
ಸುರಂಗ ಕೊರೆಯುವ ಯಂತ್ರವು ಕಳೆದ ಏಪ್ರಿಲ್ 21ರಂದು ಲಕ್ಕಸಂದ್ರ ನಿಲ್ದಾಣದಿಂದ ಕಾಮಗಾರಿ ಆರಂಭಿಸಿತ್ತು. ಇದರೊಂದಿಗೆ ಹಂತ-2 ರೀಚ್-6ರ 20.991 ಕಿ.ಮೀ ಸುರಂಗ ಮಾರ್ಗದಲ್ಲಿ, ಒಟ್ಟು 17.62 ಕಿ.ಮೀ ಕಾಮಗಾರಿ ಮುಕ್ತಾಯವಾಗಿದೆ. ರೀಚ್-6 ಸುರಂಗ ಮಾರ್ಗದಲ್ಲಿ ನಿಯೋಜಿಸಲಾದ 9 ಟನಲ್ ಬೋರಿಂಗ್ ಮಷಿನ್ (ಟಿಬಿಎಂ)ಗಳಲ್ಲಿ ಆರು ಟಿಬಿಎಂಗಳು ಸುರಂಗ ಕಾಮಗಾರಿಯನ್ನು ಪೂರ್ಣಗೊಳಿಸಿದೆ ಎಂದು ಬಿಎಂಆರ್ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.
ಈಗಾಗಲೇ ವಮಿಕ ಸುರಂಗ ಕೊರೆಯುವ ಯಂತ್ರ ಸೌತ್ ರಾಂಪ್ ಮತ್ತು ಡೈರಿ ಸರ್ಕಲ್ ಸುರಂಗ ನಿಲ್ದಾಣಗಳ ನಡುವೆ 613.2 ಮೀ. ಹಾಗೂ ಡೈರಿ ಸರ್ಕಲ್ ನಿಲ್ದಾಣದಿಂದ ಲಕ್ಕಸಂದ್ರ ನಿಲ್ದಾಣದ ನಡುವೆ 743.4 ಮೀ. ಸುರಂಗ ಕಾಮಗಾರಿ ಮುಕ್ತಾಯವಾಗಿದೆ.