ಜಿಲ್ಲೆ

ನಮ್ಮ ಮೆಟ್ರೋ 3ನೇ ಹಂತ ವಿಸ್ತರಣೆ; ಸದ್ಯದಲ್ಲೇ ಜಿಯೋಟೆಕ್ನಿಕಲ್​ ಇನ್​ವೆಸ್ಟಿಗೇಶನ್​ ಆರಂಭ

ಬೆಂಗಳೂರು: ನಮ್ಮ ಮೆಟ್ರೋ ಮೂರನೇ ಹಂತದ ಯೋಜನೆ ಕಾಮಗಾರಿಗಾಗಿ ಭೂಸ್ವರೂಪದ ಅಧ್ಯಯನದ ವರದಿ ಪಡೆಯಲು ಬೆಂಗಳೂರು ಮೆಟ್ರೋ ರೈಲು ನಿಗಮ ಸದ್ಯದಲ್ಲೇ ಜಿಯೋಟೆಕ್ನಿಕಲ್​ ಇನ್​ವೆಸ್ಟಿಗೇಶನ್​ ಆರಂಭಿಸಲಿದೆ.

ಯೋಜನೆಗೆ ಈಗಾಗಲೇ ಡಿಪಿಆರ್​ ಆಗಿದ್ದು, ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. ಪ್ರಧಾನಮಂತ್ರಿ ಗತಿಶಕ್ತಿ ಯೋಜನೆಯಡಿ ಅನುಮೋದನೆ ನೀಡಲು ಕೇಂದ್ರಕ್ಕೆ ಶಿಫಾರಸು ಮಾಡಲಾಗಿದೆ. ರಾಜ್ಯ ಸರ್ಕಾರದ ಅನುಮತಿ ಲಭಿಸಿರುವುದರಿಂದ ಬಿಎಂಆರ್​ಸಿಎಲ್​ ಕಾಮಗಾರಿ ನಡೆಸಲು ಬೇಕಾಗಿರುವ ಭೂಸ್ವಾಧಿನ, ಪರಿಹಾರ ವಿತರಣೆಯ ಕ್ರಮ ಸೇರಿ ಇತರ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಕಳೆದ ತಿಂಗಳು ಬಿಎಂಆರ್​ಸಿಎಲ್​ ಕರೆದಿದ್ದ ಜಿಯೋಟೆಕ್ನಿಕಲ್​ ಇನ್ವೆಸ್ಟಿಗೇಶನ್​ ಟೆಂಡರ್​ ಮಂಗಳವಾರದಿಂದ (ಮೇ 7) ತೆರೆಯಲಿದೆ. ಟೆಂಡರ್​ ಪಡೆದುಕೊಂಡ ಸಂಸ್ಥೆ ಐದು ತಿಂಗಳಲ್ಲಿ ವರದಿ ನೀಡಬೇಕಿದ್ದು, 6 ಕೋಟಿ ರೂ. ಮೊತ್ತದಲ್ಲಿ ಈ ತಪಾಸಣೆ ನಡೆಯಲಿದೆ ಎನ್ನಲಾಗಿದೆ.

44.65 ಕಿ.ಮೀ. ಉದ್ದದ ಮಾರ್ಗ

ಮೂರನೇ ಹಂತ ಒಟ್ಟು 44.65 ಕಿ.ಮೀ. ಉದ್ದದ ಯೋಜನೆಯಾಗಿದ್ದು, ಎರಡು ಮಾರ್ಗಗಳನ್ನು ಒಳಗೊಂಡಿದೆ. ಜೆ.ಪಿ.ನಗರ 4ನೇ ಹಂತದಿಂದ ಕೆಂಪಾಪುರ (32.5 ಕಿ.ಮೀ.) ಹಾಗೂ ಹೊಸಹಳ್ಳಿಯಿಂದ ಮಾಗಡಿ ರಸ್ತೆಯ ಕಡಬಗೆರೆವರೆಗೆ (12.5 ಕಿ.ಮೀ.) ಸಂಪರ್ಕ ಕಲ್ಪಿಸಲಿದೆ. ಈ ಮಾರ್ಗದ ಕಾಮಾಗಾರಿ ಮುಂದಿನ ವರ್ಷಾರಂಭದಿಂದ ಆರಂಭವಾಗುವ ನಿರೀಕ್ಷೆಯಿದೆ.

ನಾಲ್ಕು ಹಂತಗಳಲ್ಲಿ ಕಾಮಗಾರಿ?

ಜಿಯೋಟೆಕ್ನಿಕಲ್​ ಇನ್​ವೆಸ್ಟಿಗೇಶನ್​ನ್ನು ಬಿಎಂಆರ್​ಸಿಎಲ್​ 4 ಪ್ಯಾಕೇಜ್​ಗಳಲ್ಲಿ ನಡೆಸಲು ನಿರ್ಧರಿಸಿದೆ. 1ನೇ ಹಂತ ಜೆ.ಪಿ.ನಗರ ನಾಲ್ಕನೇ ಹಂತದಿಂದ ಮೈಸೂರು ರೋಡ್​ ನಿಲ್ದಾಣದವರೆಗೆ, 2ನೇ ಹಂತ ಮೈಸೂರು ರೋಡ್​ ನಿಲ್ದಾಣದಿಂದ ಕಂಠೀರವ ಸ್ಟೂಡಿಯೋ ನಿಲ್ದಾಣ, 3ನೇ ಹಂತ ಕಂಠೀರವ ಸ್ಟುಡಿಯೋದಿಂದ ಕೆಂಪಾಪುರ ನಿಲ್ದಾಣದವರೆಗೆ ನಡೆಯಲಿದೆ. 4ನೇ ಹಂತ ಹೊಸಹಳ್ಳಿ ನಿಲ್ದಾಣದಿಂದ ಕಡಬಗೆರೆ ಹಾಗೂ ಮುಂದುವರಿದು ಸುಂಕದಕಟ್ಟೆ ಡಿಪೋವರೆಗೆ ನಡೆಯಲಿದೆ.