ಜಿಲ್ಲೆ

ವಿಧಾನಸೌಧದ ಎದಿರು ಕಳೆಗಟ್ಟಿದ ‘ನಮ್ಮ ಜಾತ್ರೆ’ ಕಲಾ ವೈಭವ

ಬೆಂಗಳೂರು: ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣಗೊಂಡ ಐದು ದಶಕ ಸಂದ ಹಿನ್ನೆಲೆಯಲ್ಲಿ ಕನ್ನಡ ಹಾಗೂ ಸಂಸ್ಕೃತಿ ಇಲಾಖೆ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಭಾನುವಾರ ಆಯೋಜಿಸಿದ್ದ ‘ಕರ್ನಾಟಕ ಸಂಭ್ರಮ-50’ ಸಮಾರಂಭದಲ್ಲಿ ಜಾನಪದ ಕಲಾ ಸಿರಿ ಅನಾವರಣಗೊಂಡಿತು.

ನಾಡಿನ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಹತ್ತು ಕಲಾ ಪ್ರಕಾರಗಳ ಮೂಲಕ ನೂರಾರು ಕಲಾವಿದರು ನೀಡಿದ ಪ್ರದರ್ಶನ ಮನಸೂರೆಗೊಂಡಿತು. ವೇದಿಕೆಯ ಮುಂಭಾಗಕ್ಕೆ ಪಲ್ಲಕ್ಕಿಯಲ್ಲಿ ಅಲಂಕರಿಸಿದ್ದ ತಾಯಿ ಭುವನೇಶ್ವರಿ ದೇವಿ ಪ್ರತಿಕೃತಿಗೆ ಮುಖ್ಯಮಂತ್ರಿ ಪುಷ್ಪಾರ್ಚಣೆ ಮಾಡಿ ಎರಡು ದಿನಗಳ ‘ನಮ್ಮ ಜಾತ್ರೆ’ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇದರ ಬೆನ್ನಲ್ಲೇ ಆನೆಯು ತನ್ನ ಸೊಂಡಿಲು ಎತ್ತು ಸಿಎಂರನ್ನು ಗೌರವಿಸಿತು. ಎತ್ತಿನ ಬಂಡಿಯಲ್ಲಿ ಸಾಗಿಬಂದ ಯುವಜನರ ಠೀವಿ ಗ್ರಾಮೀಣ ಸೊಗಡನ್ನು ನೆನಪಿಸಿತು. ನಂತರ ಆಡಳಿತ ಶಕ್ತಿ ಕೇಂದ್ರ ವಿಧಾನಸೌಧದ ಎದಿರು ಕನ್ನಡದ ಕಲಾ ವೈಭವ ಕಳೆಗಟ್ಟಿತು.

ಭಾಷಣ ಇಲ್ಲದ ಕಾರ್ಯಕ್ರಮದಲ್ಲಿ ಕಲಾವಿದರ ವೈವಿಧ್ಯಮಯ ಪ್ರದರ್ಶನ ಕರುನಾಡಿನ ಸಂಸ್ಕೃತಿ ಹಾಗೂ ಜಾನಪದ ಸಿರಿವಂತಿಯನ್ನು ಅನಾವರಣಗೊಳಿಸಿತು. ವೀರಗಾಸೆ, ಕಂಸಾಳೆ, ಪೂಜಾ ಕುಣಿತ, ಪಟ ಕುಣಿತ, ದೊಳ್ಳು ಕುಣಿತ, ಯಕ್ಷಗಾನ ಸೇರಿ ವಿವಿಧ ಕಲೆಗಳ ಪ್ರದರ್ಶನ ಜಾನಪದ ಹಾಗೂ ಸಾಂಸ್ಕೃತಿಕ ಸಂಗಮಕ್ಕೆ ಸಾಕ್ಷಿಯಾಯಿತು. ಇದರ ಜತೆಗೆ ಯುವತಿಯರು ಕಳಸ ಹೊತ್ತು ಬಂದು ಕಾರ್ಯಕ್ರಮಕ್ಕೆ ಮೆರಗು ಹೆಚ್ಚಿಸಿದರು. ದಸರಾ ಮೆರವಣಿಗೆಯಲ್ಲಿ ಕಾಣಸಿಗುವ ಸಂಭ್ರಮದಿಂದ ಅಲ್ಲಿ ನೆರೆದಿದ್ದ ಸಭಿಕರು ಕಲಾವಿದರ ನೈಪುಣ್ಯಕ್ಕೆ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದರು.

ಸಮಾರಂಭದಲ್ಲಿ ಸಚಿವ ಶಿವರಾಜ ತಂಗಡಗಿ, ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ಅಭಿವೃದ್ಧಿ ಆಯುಕ್ತೆ ಶಾಲಿನಿ ರಜನೀಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಧಾನ ಕಾರ್ಯದರ್ಶಿ ಎನ್.ಮಂಜುಳಾ, ಸಂಗೀತ ನಿರ್ದೇಶಕ ಸಾಧು ಕೋಕಿಲ ಹಾಗೂ ಇನ್ನಿತರರಿದ್ದರು.

ಗಮನ ಸೆಳೆದ ಕಲಾ ಮೆರವಣಿಗೆ:

ವಿಧಾನಸೌಧದ ಬಳಿಕ ಕಾರ್ಯಕ್ರಮ ಮುಗಿದ ಬಳಿಕ ಅಲ್ಲಿಂದ ಕಲಾವಿದರು ರವೀಂದ್ರ ಕಲಾಕ್ಷೇತ್ರದ ವರೆಗೆ ಮೆರವಣಿಗೆಯಲ್ಲಿ ಸಾಗಿಬಂದರು. ಮಾರ್ಗದುದ್ದಕ್ಕೂ ಡೊಳ್ಳು ಕುಣಿತ, ಕಂಸಾಳೆ, ಹುಲಿ ವೇಷ, ಲಂಬಾಣಿ ನೃತ್ಯ ಸಹಿತ ಇತರ ಕಲಾ ಪ್ರಕಾರಗಳಲ್ಲಿ ಕಲಾವಿದರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ರವೀಂದ್ರ ಕಲಾಕ್ಷೇತ್ರದ ಬಳಿ ಆಗಮಿಸಿದ ಕಲಾ ಮೆರವಣಿಗೆಯನ್ನು ಸಚಿವ ಶಿವರಾಜ ಗಂಗಡಗಿ ಬರಮಾಡಿಕೊಂಡರು. ಇಲ್ಲೂ ಕೂಡ ಜಾನಪದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ವಿವಿಧ ಕಲಾ ಪ್ರಕಾರಗಳಲ್ಲಿ ಬಳಸುವ ಕಲಾ ಪರಿಕರಗಳು ಹಾಗೂ ವಿವಿಧ ಕಲೆಗಳ ಬಗ್ಗೆ ಜನರಿಗೆ ಮಾಹಿತಿ ನೀಡಲಾಯಿತು. ಸೋಮವಾರವೂ ರವೀಂದ್ರ ಕಲಾಕ್ಷೇತ್ರದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಬೆಂಗಳೂರಿಗರಿಗೆ ಜನಪದ ಕಲೆ ತಲುಪಿಸಬೇಕು: ಸಚಿವ ತಂಗಡಗಿ

ನಗರ ಜೀವನದ ಒತ್ತಡದಲ್ಲಿ ಬದುಕುತ್ತಿರುವ ಬೆಂಗಳೂರಿಗರಿಗೆ ಕರ್ನಾಟಕದ ವೈವಿಧ್ಯಮಯ ಜಾನಪದ ಕಲೆಗಳನ್ನು ತಲುಪಿಸಲು ದೊಡ್ಡ ಮಟ್ಟದಲ್ಲಿ ಪ್ರಯತ್ನ ಆಗಬೇಕಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಹೇಳಿದರು.

ರವೀಂದ್ರ ಕಲಾಕ್ಷೇತ್ರದ ಮುಂಭಾಗ ಆಯೋಜಿಸಿದ್ದ ‘ನಮ್ಮ ಜಾತ್ರೆ, ಜಾನಪದ ಸಂಭ್ರಮ’ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ಭಾಷೆ ಮತ್ತು ಸಂಸ್ಕೃತಿ ಎಲ್ಲರನ್ನೂ ಆಕರ್ಷಿಸುವಂತಹದ್ದು. ನಾವು ಬೆಂಗಳೂರಿನಲ್ಲಿ ಕನ್ನಡ ಭಾಷೆ ಬಳಕೆಯನ್ನು ಕಡಿಮೆ ಮಾಡಿದ್ದೇವೆ. ಅನ್ಯ ಭಾಷೆಯ ವ್ಯಮೋಹದಿಂದ ಹೊರಬಾರದಿದ್ದರೆ ಬೆಂಗಳೂರಿನಲ್ಲಿ ಕನ್ನಡದ ಬೆಳವಣಿಗೆ ಆಗಲಾರದು. ಇಂಗ್ಲಿಸ್ ಭಾಷೆ ಜೀವನಕ್ಕೆ ಬೇಕು, ಅದನ್ನು ಕಲಿಯುವುದರಿಂದ ಯಾವುದೇ ತಪ್ಪಿಲ್ಲ. ಆದರೆ, ನಮ್ಮ ದಿನನಿತ್ಯದ ಭಾಷೆಯಾಗಿ ಕನ್ನಡವನ್ನು ಬಳಸಬೇಕು. ಏಕೆಂದರೆ ಅದು ನಮ್ಮ ಭಾವಭಾಷೆ. ಆದ್ದರಿಂದ ಯುವ ಜನರು ಕನ್ನಡ ಬಳಸಬೇಕು ಎಂದರು.

ಕಂದಾಯ ವಿಭಾಗಗಳಲ್ಲೂ ಕಾರ್ಯಕ್ರಮ:

ಕರ್ನಾಟಕ ನಾಮಕರಣದ ಸುವರ್ಣ ಮಹೋತ್ಸವದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವರ್ಷಪೂರ್ತಿ ಪ್ರತಿ ತಿಂಗಳು ಇಂತಹ ದೊಡ್ಡ ಕಾರ್ಯಕ್ರಮಗಳನ್ನು ಆಯೋಜಿಸಲಿದೆ. ಜತೆಗೆ ರಾಜ್ಯದ ನಾಲ್ಕೂ ಕಂದಾಯ ವಿಭಾಗಗಳಲ್ಲಿಯೂ ಮುಂದಿನ 4 ತಿಂಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಆನಂತರ ಬೆಂಗಳೂರಿನಲ್ಲಿ ಬೃಹತ್ ಮಟ್ಟದಲ್ಲಿ ಮತ್ತೊಂದು ಸುವರ್ಣ ಸಂಭ್ರಮ ಕಾರ್ಯಕ್ರಮ ಏರ್ಪಡಿಸಲಾಗುವುದು ಎಂದು ಸಚಿವರು ತಿಳಿಸಿದರು.

ಇದೇ ವೇಳೆ ವಿವಿಧ ಕಲಾ ಪ್ರಕಾರಗಳಲ್ಲಿ ಕಲಾವಿದರು ತಮ್ಮ ಕಲಾ ಪ್ರದರ್ಶನವನ್ನು ಪ್ರಸ್ತುತಪಡಿಸಿ ಸಭಿಕರ ಮೆಚ್ಚುಗೆ ಗಳಿಸಿದರು.

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಡಾ. ಎನ್ .ಮಂಜುಳಾ, ನಿರ್ದೇಶಕಿ ಡಾ. ಧರಣಿ ದೇವಿ ಮಾಲಗತ್ತಿ, ನಟಿ ಪೂಜಾ ಗಾಂಧಿ, ಐಎಎಸ್ ನಿವೃತ್ತ ಅಧಿಕಾರಿ ಚಿರಂಜೀವಿ ಸಿಂಗ್, ಕಾದಂಬರಿ ಟ್ರಸ್ಟ್ ಸಂಸ್ಥಾಪಕಿ ಚಂದ್ರ ಜೈನ್ ಸೇರಿ ಇನ್ನಿತರರು ಉಪಸ್ಥಿತರಿದ್ದರು.