ಜಿಲ್ಲೆ

ಜನಸಾಮಾನ್ಯರಿಗಾಗಿ ಆರೋಗ್ಯ ಉಚಿತ ಸೇವೆ...

ಶಾಸಕ ಯಶ್​ಪಾಲ್​ ಸುವರ್ಣ ಮಾಹಿತಿ

ಉಡುಪಿಯಲ್ಲಿ ನಮ್ಮ ಕ್ಲಿನಿಕ್​ ಉದ್ಘಾಟನೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಪ್ರಮುಖ ಮೂಲ ಸೌಕರ್ಯವಾದ ಆರೋಗ್ಯ ಸೇವೆಗಾಗಿ ಜನಸಾಮಾನ್ಯರಿಗೆ ದೂರ ಪ್ರಯಾಣ ತಪ್ಪಿಸುವ ಹಿನ್ನೆಲೆಯಲ್ಲಿ ಜನವಸತಿ ಪ್ರದೇಶಗಳಲ್ಲಿಯೇ "ನಮ್ಮ ಕ್ಲಿನಿಕ್​' ಎಂಬ ಆರೋಗ್ಯ ಟಕ ತೆರಯಲಾಗುತ್ತಿದೆ. ಇಲ್ಲಿಯೇ ಜನರು ಸುಲಭವಾಗಿ ಹಾಗೂ ಉಚಿತವಾಗಿ ಆರೋಗ್ಯ ಸೇವೆ ಪಡೆದುಕೊಳ್ಳಬಹುದಾಗಿದೆ ಎಂದು ಶಾಸಕ ಯಶ್​ಪಾಲ್​ ಸುವರ್ಣ ತಿಳಿಸಿದರು.

ಉಡುಪಿಯ ಗುಂಡಿಬೈಲು ಸಮೀಪದ ದೊಡ್ಡನಗುಡ್ಡೆಯಲ್ಲಿ ಇತ್ತೀಚೆಗೆ ನಮ್ಮ ಕ್ಲಿನಿಕ್​ ಘಟಕ ಉದ್ಘಾಟಿಸಿ ಮಾತನಾಡಿದರು. ನಗರ ಪ್ರದೇಶಗಳಲ್ಲಿ ವಾಸಿಸುವ ಬಡ ಜನರಿಗೆ ಅನುಕೂಲಾವಗಲೆಂದು ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಯೋಗದಲ್ಲಿ ನಮ್ಮ ಕ್ಲಿನಿಕ್​ ಎಂಬ ಆರೋಗ್ಯ ಉಚಿತ ಸೇವಾ ವ್ಯವಸ್ಥೆ ಆರಂಭಿಸಲಾಗಿದೆ. ಈ ಘಟಕ ಸ್ಥಾಪನೆಯಿಂದ ಜಿಲ್ಲಾ ಹಾಗೂ ತಾಲೂಕು ಸರ್ಕಾರಿ ಆಸ್ಪತ್ರೆಗಳ ಮೇಲಿನ ಒತ್ತಡವೂ ಕಡಿಮೆಯಾಗಲಿದೆ ಎಂದರು.

ಹನ್ನೆರಡು ಬಗೆಯ ಸೇವೆ

ಉಡುಪಿ ತಾಲೂಕು ಆರೋಗ್ಯ ಅಧಿಕಾರಿ ಡಾ.ವಾಸುದೇವ ಉಪಾಧ್ಯಾಯ ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮ ಕ್ಲಿನಿಕ್​ನಲ್ಲಿ ಒಟ್ಟು 12 ಆರೋಗ್ಯ ಸೇವೆ ಒದಗಿಸಲಾಗುತ್ತದೆ. ಅದರಲ್ಲಿ ವೈದ್ಯಾಧಿಕಾರಿಗಳು, ಪ್ರಯೋಗ ಶಾಲಾ ತಂತ್ರಜ್ಞರು, ಶುಶ್ರೂಷಣಾಧಿಕಾರಿ, ಗ್ರೂಪ್​ ಡಿ ನೌಕರರು ತಲಾ ಒಬ್ಬರಂತೆ ಬೆಳಗ್ಗೆ 9ರಿಂದ ಸಂಜೆ 4:30ರ ವರೆಗೆ ಕಾರ್ಯನಿರ್ವಹಿಸಲಿದ್ದಾರೆ ಎಂದರು.

ನಗರಸಭಾ ಅಧ್ಯಕ್ಷ ಪ್ರಭಾಕರ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ನಗಾರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಉಡುಪಿ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ರಮೇಶ ಕಾಂಚನ್​, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಬಸವರಾಜ ಜಿ. ಹುಬ್ಬಳ್ಳಿ, ಕರ್ನಾಟಕ ರಾಜ್ಯ ವಾಣಿಜ್ಯ ಮತ್ತು ಕೈಗಾರಿಕಾ ಮಹಾ ಸಂಸ್ಥೆಯ ನಿರ್ದೇಶಕ ದೇವಿಪ್ರಸಾದ್​ ಶೆಟ್ಟಿ, ನಮ್ಮ ಕ್ಲಿನಿಕ್​ನ ವೈದ್ಯಾಧಿಕಾರಿಗಳು, ಸ್ಥಳಿಯ ಜನಪ್ರತಿನಿಧಿಗಳು, ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ಇಲಾಖಾ ಅಧಿಕಾರಿ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ಆರೋಗ್ಯ ಶಿಕ್ಷಣಾಧಿಕಾರಿ ಚಂದ್ರಕಲಾ ಕಾರ್ಯಕ್ರಮ ನಿರ್ವಹಿಸಿದರು.