ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಸರ್ಕಾರ ಪ್ರಮುಖ ಯೋಜನೆಗಳಲ್ಲೊಂದಾದ ‘ನಮ್ಮ ಕ್ಲಿನಿಕ್’ಗಳಲ್ಲಿ ತಲೆದೂರಿರುವ ಸಿಬ್ಬಂದಿ ಕೊರತೆ ನೀಗಿಸಲು ಜಿಲ್ಲಾಡಳಿತ ಸಾಕಷ್ಟು ಶ್ರಮಿಸುತ್ತಿದ್ದು, ಶೀಘ್ರದಲ್ಲೇ ಅಗತ್ಯ ಸಿಬ್ಬಂದಿ ನೇಮಕಾತಿ ನಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದೆ.
ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ ಒಟ್ಟು 17 ನಮ್ಮ ಕ್ಲಿನಿಕ್‌ಗಳ ಪೈಕಿ ಈಗಾಗಲೇ 15 ನಮ್ಮ ಕ್ಲಿನಿಕ್‌ಗಳೂ ಕಾರ್ಯನಿರ್ವಹಿಸುತ್ತಿವೆ. ಹಲವು ಕಡೆಗಳಲ್ಲಿ ಸ್ಟ್ಾ ರ್ಸ್, ಔಷಧಿಕಾರರು, ಲ್ಯಾಬ್ ಟೆಕ್ನಿಷಿಯನ್ಸ್, ಎಚ್‌ಐಓ ಸೇರಿ ಕೆಲವಷ್ಟು ಸಿಬ್ಬಂದಿ ಕೊರತೆ ಎದುರಾಗಿದೆ. ಈ ಸಂಬಂಧ ಜಿಲ್ಲಾಡಳಿತ ಸರ್ಕಾರಕ್ಕೆ ಮನವಿ ಮಾಡಿದ್ದು ಅಗತ್ಯ ಸಿಬ್ಬಂದಿ ನೇಮಕಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉಚಿತ ವೈದ್ಯಕೀಯ ಸೇವೆ: ಬಡವರು, ದಿನಗೂಲಿ ಕಾರ್ಮಿಕರು ಮತ್ತು ಇತರ ದುರ್ಬಲ ವರ್ಗದ ಜನರಿಗೆ ಉಚಿತ ವೈದ್ಯಕೀಯ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ಪ್ರಾರಂಭಿಸಿದ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಒಂದು ಜಾಲವೇ ನಮ್ಮ ಕ್ಲಿನಿಕ್ ಆಗಿದ್ದು, ಗ್ರಾಮಾಂತರ ಜಿಲ್ಲೆಯಲ್ಲಿ ನಮ್ಮ ಕ್ಲಿನಿಕ್‌ಗಳಲ್ಲಿ ಉತ್ತಮ ಸೇವೆ ದೊರಕಿಸಿಕೊಡುವ ನಿಟ್ಟಿನಲ್ಲಿ ಜಿಲ್ಲಾ ಆರೋಗ್ಯ ಇಲಾಖೆ ಸಾಕಷ್ಟು ಶ್ರಮಿಸುತ್ತಿದೆ.
ಬಾಡಿಗೆ ದುಬಾರಿ: ನಮ್ಮ ಕ್ಲಿನಿಕ್‌ಗಳನ್ನು ಆರಂಭಿಸಲು ಸೂಕ್ತ ಕಟ್ಟಡದ ಅವಶ್ಯಕತೆ ಇದೆ, ಸೂಕ್ತ ಸರ್ಕಾರಿ ಕಟ್ಟಡಗಳು ಸಿಗದ ಕಡೆಗಳಲ್ಲಿ ಖಾಸಗಿಯಾಗಿ ಕಟ್ಟಡಗಳನ್ನು ಬಾಡಿಗೆ ಪಡೆಯಬೇಕಿದೆ, ಆದರೆ ಸರ್ಕಾರ ನಿಗಧಿಪಡಿಸಿರುವ ದರಕ್ಕೆ ಗ್ರಾಮಾಂತರ ಜಿಲ್ಲೆಯಲ್ಲಿ ಅಂಥ ಕಟ್ಟಡಗಳು ಸಿಗುವುದು ಕಷ್ಟಸಾಧ್ಯ ಎಂಬಂತ ಪರಿಸ್ಥಿತಿ ಇದೆ, ರಾಜಧಾನಿ ಬೆಂಗಳೂರಿನಲ್ಲಿರುವಂತೆ ನೆಲಮಂಗಲ, ಹೊಸಕೋಟೆ ಕಡೆಗಳಲ್ಲಿ ದುಬಾರಿ ಬಾಡಿಗೆ ದರ ಇರುವುದು ಖಾಸಗಿ ಕಟ್ಟಡ ಪಡೆಯಲು ತೊಡಕಾಗಿದೆ. ನೆಲಮಂಗದಲ್ಲಿ 2 ನಮ್ಮ ಕ್ಲಿನಿಕ್ ಆರಂಭಿಸಬೇಕಿದ್ದು, ಖಾಸಗಿ ಕಟ್ಟಡ ತಲಾಶ್ ನಡೆಯುತ್ತಿದೆ. ಸರ್ಕಾರ ನಿಗಧಿಪಡಿಸಿರುವ ದರಕ್ಕೆ ಬಾಡಿಗೆ ಸಿಗದಿರುವ ಬಗ್ಗೆ ಜಿಲ್ಲಾಡಳಿತದಿಂದ ಸರ್ಕಾರಕ್ಕೆ ಪತ್ರ ಬರೆಯಲಾಗಿದ್ದು, ಹೆಚ್ಚಿನ ಅನುದಾನಕ್ಕೆ ಬೇಡಿಕೆ ಇಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವೈದ್ಯರ ಕೊರತೆ ಇಲ್ಲ: ಆರಂಭದಲ್ಲಿ ಜಿಲ್ಲೆಯಲ್ಲಿ ಆರಂಭವಾದ ನಮ್ಮ ಕ್ಲಿನಿಕ್‌ಗಳಲ್ಲಿ ವೈದ್ಯರ ಕೊರತೆ ಎದುರಾಗಿತ್ತು, ಆದರೆ ಪ್ರಸ್ತುತ ಅಂಥ ಪರಿಸ್ಥಿತಿ ಇಲ್ಲ, ಸರ್ಕಾರದ ಕಡ್ಡಾಯ ಗ್ರಾಮೀಣ ಸೇವೆ ನಿಯಮದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ನಮ್ಮ ಕ್ಲಿನಿಕ್‌ಗಳಲ್ಲೂ ಖಾಯಂ ವೈದ್ಯರಿದ್ದು ವೈದ್ಯಕೀಯ ಸೇವೆಗೆ ಯಾವುದೇ ತೊಂದರೆ ಎದುರಾಗಿಲ್ಲ.
ಯಾವ್ಯಾವ ಸೇವೆ: ಗರ್ಭಿಣಿಯರ ತಪಾಸಣೆ, ಶಿಶುಗಳ ಆರೈಕೆ, ನೆಗಡಿ, ಕೆಮ್ಮು, ರಕ್ತದೊತ್ತಡ, ಮಧುಮೇಹದಂತಹ ಸಾಮಾನ್ಯ ಕಾಯಿಲೆಗಳ ತಪಾಸಣೆ ಮತ್ತು ಚಿಕಿತ್ಸೆ, ಲ್ಯಾಬ್ಟೆಸ್ಟ್‌ಗಳು ಮತ್ತು ಟೆಲಿಮೆಡಿಸಿನ ಸೇವೆಗಳನ್ನು ಒದಗಿಸುತ್ತವೆ.
12 ರೀತಿಯ ವೈದ್ಯಕೀಯ ಸೇವೆಗಳು:
ತಾಯಿ ಆರೋಗ್ಯ, ಗರ್ಭಿಣಿ ಹಾಗೂ ಬಾಣಂತಿ ಸೇವೆಗಳು, ನವ ಜಾತ ಶಿಶು ಆರೈಕೆ ಹಾಗೂ ಚುಚ್ಚು ಮದ್ದು ಸೇವೆಗಳು, ಮಕ್ಕಳ ಹಾಗೂ ಹದಿಹರೆಯದವರಿಗೆ ನೀಡುವ ಆರೋಗ್ಯ ಸೇವೆಗಳು, ಕುಟುಂಬ ಕಲ್ಯಾಣ ಯೋಜನೆಗಳ ಅನುಷ್ಠಾನ, ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಅನುಷ್ಠಾನ, ಸಾಂಕ್ರಾಮಿಕ ರೋಗಗಳ ನಿರ್ವಹಣೆ, ಹಿರಿಯ ನಾಗರಿಕರ ಸೇವೆ, ಅಂತಿಮ ಹಂತದ ಆರೋಗ್ಯ ಪಾಲನೆ, ಕಣ್ಣಿನ ಆರೋಗ್ಯ ಸೇವೆಗಳು, ದಂತ ಆರೋಗ್ಯ ಸೇವೆಗಳು, ತುರ್ತು ವೈದ್ಯಕೀಯ ಸೇವೆ ಹಾಗೂ ಮಾನಸಿಕ ಆರೋಗ್ಯ ಸೇವೆಗಳು ಪ್ರಮುಖವಾಗಿವೆ.
ಜಿಲ್ಲೆಯಲ್ಲಿ ಪ್ರಸ್ತುತ 17 ನಮ್ಮ ಕ್ಲಿನಿಕ್‌ಗಳ ಪೈಕಿ 15 ಕ್ಲಿನಿಕ್‌ಗಳು ಕಾರ್ಯನಿರ್ವಹಿಸುತ್ತಿವೆ, ಎಲ್ಲ ಕ್ಲಿನಿಕ್‌ಗಳಲ್ಲಿ ವೈದ್ಯರು ಸೇವಾನಿರತರಾಗಿದ್ದಾರೆ. 17 ಸ್ಟಾಪ್‌ನರ್ಸ್‌ಗಳ ಪೈಕಿ 12 ಮಂದಿ ಕಾರ್ಯನಿರ್ವಹಿಸುತ್ತಿದ್ದು, 5 ಸಿಬ್ಬಂದಿ ನೇಮಕವಾಗಬೇಕಿದೆ, ನಾಲ್ವರು ಲ್ಯಾಬ್‌ಟೆಕ್ನಿಷಿಯನ್, ಹಾಗೂ ಇಬ್ಬರು ಡಿ ಗ್ರೂಪ್ ನೌಕರರ ಅವಶ್ಯಕತೆ ಇದ್ದು ಶೀಘ್ರದಲ್ಲೇ ನೇಮಕಾತಿ ನಡೆಯಲಿದ್ದು ಕರ್ತವ್ಯಕ್ಕೆ ಹಾಜರಿರಲಿದ್ದಾರೆ.
ಡಾ.ಲಕ್ಕ ಕೃಷ್ಣಾರೆಡ್ಡಿ, ಜಿಲ್ಲಾ ಆರೋಗ್ಯಾಧಿಕಾರಿ