ಜಿಲ್ಲೆ

ಸಮಾಜದ ಕ್ರಿಯಾಶೀಲ ಪಾಲ್ಗೊಳ್ಳುವಿಕೆ ಅಗತ್ಯ, ನಮ್ಮ ಶಾಲೆ ನಮ್ಮ ಜವಾಬ್ದಾರಿ ಉದ್ಘಾಟಿಸಿದ ಬಿಇಒ

Dharwada - Basavaraj Idli

ಹುಬ್ಬಳ್ಳಿ: ಶಿಕ್ಷಣ ಇಲಾಖೆಯಿಂದ ಅತ್ಯುತ್ತಮ ಗುಣಮಟ್ಟದ ಶಿಕ್ಷಕರನ್ನು ಒದಗಿಸಲಾಗಿದ್ದು, ಅಧಿಕಾರಿಗಳ ಮಾರ್ಗದರ್ಶನದಲ್ಲಿ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಅವರು ಹಗಲಿರುಳು ದುಡಿಯುತ್ತಿದ್ದಾರೆ. ಆದಾಗ್ಯೂ ಗ್ರಾಮೀಣರ ಶೈಕ್ಷಣಿಕ ಗುರಿಗಳು ಈಡೇರಬೇಕಾದರೆ ಪಾಲಕರು, ಪೋಷಕರ ಸಹಕಾರ ಮುಖ್ಯ ಎಂದು ಗ್ರಾಮೀಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ಬಮ್ಮಕ್ಕನವರ ಹೇಳಿದರು.

ತಾಲೂಕಿನ ಕುಸುಗಲ್ಲ ಸರ್ಕಾರಿ ಹಿರಿಯ ಗಂಡು ಮಕ್ಕಳ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ, ಕುಸುಗಲ್ಲ ಸರ್ಕಾರಿ ಪ್ರೌಢಶಾಲೆಗಳ ಸಹಯೋಗದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ "ನಮ್ಮ ಶಾಲೆ ನಮ್ಮ ಜವಾಬ್ದಾರಿ' ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪಾಲಕರು ಮತ್ತು ಪೋಷಕರು ಮಕ್ಕಳ ಭವಿಷ್ಯ ನಿರ್ಮಾಣ ಮಾಡುವಲ್ಲಿ ಇಲಾಖೆಯೊಂದಿಗೆ ಕೈಜೋಡಿಸಬೇಕು. ಸಮಾಜದ ಕ್ರಿಯಾಶೀಲ ಪಾಲ್ಗೊಳ್ಳುವಿಕೆಯಿಂದ ಮಾತ್ರ ಶೈಕ್ಷಣಿಕ ಪ್ರಗತಿ ಸಾಧ್ಯ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಎಸ್ಡಿಎಂಸಿ ಅಧ್ಯಕ್ಷ ಕೆಂಚಪ್ಪ ಶಿವಳ್ಳಿ ಮಾತನಾಡಿ, ಶಾಲೆಯಲ್ಲಿ ನಮ್ಮೂರ ಮಕ್ಕಳೇ ಓದುತ್ತಿದ್ದು, ಅವರು ಸರಿಯಾಗಿ ಶಾಲೆಗೆ ಹೋಗುವ, ಅಭ್ಯಾಸ ಮಾಡುವ ಕುರಿತು ಪಾಲಕರು ಕಾಳಜಿ ವಹಿಸಬೇಕು ಎಂದರು.

ಕುಸಗಲ್ಲ ಗ್ರಾಮ ಪಂಚಾಯತಿ ಅಧ್ಯಕ್ಷೆ ನೇತ್ರಾವತಿ ಸುಂಕದ, ಉಪಾಧ್ಯಕ್ಷೆ ರಾಜಬಿ ಮಿರ್ಜಾನವರ, ಸದಸ್ಯರಾದ ಮಹಾಂತೇಶ ಸಂಕರಡ್ಡಿ, ಕಲ್ಲನಗೌಡ ಕೌಜಗೇರಿ, ಧಾರವಾಡ ಜಿಲ್ಲಾ ಪ್ರಾಥಮಿಕ ಶಾಲೆ ಶಿಕ್ಷಕರ ಸಂಘದ ಅಧ್ಯಕ್ಷ ವಿ.ಎಫ್. ಚುಳಕಿ ಮಾತನಾಡಿದರು.

ಇಬ್ರಾಹಿಂ ಬೆಟಗೇರಿ, ಎಲ್.ಎಂ. ಕಮಡೊಳ್ಳಿ, ಪಿಡಿಒ ಶಶಿಧರ ಮಂಟೂರ, ಲಲಿತಾ ಹರ್ಲಾಪುರ, ವಿಜಯಲಕ್ಷ್ಮಿಅರ್ಕಸಾಲಿ, ಕಲ್ಲನಗೌಡ ಹಿತ್ತಲಮನಿ, ಸಂತೋಷ ಲಂಬುಗೋಳ, ಮುಂತಾದವರು ಪಾಲ್ಗೊಂಡಿದ್ದರು.

ಅಕ್ಷರದಾಸೋಹ ತಾಲೂಕು ಸಹನಿರ್ದೇಶಕ ಡಾ. ಸಂಗಮೇಶ ಬಂಗಾರಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಶಿವಲೀಲಾ ಕಳಸಣ್ಣವರ ಸ್ವಾಗತಿಸಿದರು. ಸಂಜೀವಕುಮಾರ ಭೂಶೆಟ್ಟಿ ನಿರೂಪಿಸಿದರು. ದುರ್ಗೇಶ ಎಂ. ವಂದಿಸಿದರು. ವಿನೀತ ಭೂಶೆಟ್ಟಿ ಪ್ರಾರ್ಥಿಸಿದರು.