*ಇಷ್ಟಲಿಂಗ ತಯಾರಿಕೆಗೆ ಹೆಸರುವಾಸಿ
* ಸರ್ವ ಜನರ ಸಹಬಾಳ್ವೆಗೆ ಸಾಕ್ಷಿ
* ಅಭೂತಪೂರ್ವ ಇತಿಹಾಸ ಹೊಂದಿದ ನಗರ
ವಿಭೂತಿಕೆರೆ ಶಿವಲಿಂಗಯ್ಯ ರಾಮನಗರ
ಇಷ್ಟಲಿಂಗ ತಯಾರಿಕೆಯಲ್ಲಿ ರಾಜ್ಯ, ಹೊರ ರಾಜ್ಯದಲ್ಲಿ ಹೆಸರು ಮಾಡಿ, ಬಾನೆತ್ತರದ ಹೆಬ್ಬಂಡೆಗಳ ಸಾಲಿನಂಚಿನಲ್ಲಿ ಸದ್ದಿಲ್ಲದೆ ಧಾರ್ಮಿಕ, ಶೈಕ್ಷಣಿಕ ಸರ್ವ ಜನರ ಸಹಬಾಳ್ವೆಗೆ ಸಾಕ್ಷಿಯಾಗಿದೆ ರಾಮನಗರ ತಾಲೂಕಿನ ಉಭೂತಕೆರೆ, ಈಗಿನ ವಿಭೂತಿಕೆರೆ ಗ್ರಾಮ.
ವೀರಶೈವರು ಇಷ್ಟಲಿಂಗ ಧರಿಸಿ ಪೂಜಿಸುತ್ತಾರೆ. ಅಂತಹ ಇಷ್ಟಲಿಂಗಗಳನ್ನು ವಿಭೂತಿಕೆರೆಯಲ್ಲಿ ತಯಾರಿಸುವ ಕುಟುಂಬಗಳಿದ್ದು, ಅವರು ತಯಾರಿಸುವ ಲಿಂಗುಗಳಿಗೆ ರಾಜ್ಯ, ಹೊರರಾಜ್ಯದಲ್ಲಿ ಬಹುಬೇಡಿಕೆ ಇದೆ. ಲಿಂಗಗಳಿಂದ ವಿಭೂತಿಕೆರೆ ಗ್ರಾಮದ ಹೆಸರು ರಾಜ್ಯದ ಮೂಲೆ ಮೂಲೆಯಲ್ಲೂ ಪಸರಿಸಿದೆ.
ಒಂದು ಕಡೆ ಚಿಕ್ಕಮಣ್ಣುಗುಡ್ಡೆ ಅರಣ್ಯ ಮತ್ತೊಂದೆಡೆ ಅಚ್ಚಲು ಅರಣ್ಯ ಮಧ್ಯೆ ಕಲ್ಲು ಬಂಡೆಗಳ ಸಾಲಿನ ಸುಂದರ ಹಸಿರು ಪ್ರಕೃತಿಯ ಮಧ್ಯೆದಲ್ಲಿ ಗ್ರಾಮವಿದೆ. ಜಿಲ್ಲಾಕೇಂದ್ರ ರಾಮನಗರದಿಂದ 5 ಕಿ.ಮೀ ಅಂತರದಲ್ಲಿದ್ದು, ಉತ್ತಮ ರಸ್ತೆ, ಬಸ್ ಸೌಕರ್ಯ ಹೊಂದಿರುವ ಗ್ರಾಮವಾಗಿದೆ.
ವಿಭೂತಿಕೆರೆ ಹಳೇ ತಲೆಮಾರಿನ ಕಂದಾಯ ಗ್ರಾಮವಾಗಿದ್ದು, ನೂರಾರು ವರ್ಷಗಳ ಹಿಂದೆ ಉದಯವಾದರೂ ಈ ಹಿಂದೆ ಬ್ಯಾಲಕುಳಿದೊಡ್ಡಿ ಸಮೀಪ ಈ ಗ್ರಾಮವಿತ್ತು. ಆದರೆ, 80 ವರ್ಷಗಳ ಹಿಂದೆ ಅಲ್ಲಿಂದ ಬಂದ ಜನರು ಈಗಿನ ವಿಭೂತಿಕೆರೆಯಲ್ಲಿ ವಾಸಿಸಲು ಪ್ರಾರಂಭಿಸಿದರು. ನೀರಾವರಿ ಸೌಲಭ್ಯವಿಲ್ಲದಿದ್ದರೂ ಮಳೆಯಾಶ್ರಿತ ಕೃಷಿ ಪ್ರದೇಶವೇ ಹೆಚ್ಚು. ಮಾವು, ತೆಂಗು, ರಾಗಿ ಗ್ರಾಮದ ರೈತರ ಪ್ರಮುಖ ವಾಣಿಜ್ಯ ಬೆಳೆಯಾಗಿವೆ.
ಗ್ರಾಮದಲ್ಲಿ 2000 ಜನಸಂಖ್ಯೆ ಇದ್ದು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಅಂಗನವಾಡಿ, ಹಾಲಿನ ಡೇರಿ, ಇದೆ. ಮಾವು ಬೆಳೆ ಹೆಚ್ಚಿರುವ ಪ್ರದೇಶದ ಗ್ರಾಮವಾಗಿರುವ ಕಾರಣ ಹೆಚ್ಚಿನ ರೈತರು ಹೈನುಗಾರಿಕೆಯತ್ತ ಮುಖ ಮಾಡಿದ್ದಾರೆ.
ಗ್ರಾಮದಲ್ಲಿ ಅರಳ್ಳಿ ಬಸವೇಶ್ವರ, ಬ್ಯಾಲ್ಕುಳಿ ಬಸವೇಶ್ವರ, ಮಾರಮ್ಮ, ಗಣೇಶ, ಗದ್ದೆ ಮಹದೇಶ್ವರ, ಆಂಜನೇಯ, ಕಬ್ಬಾಳಮ್ಮ ದೇವಾಲಯಗಳಿವೆ. ಪ್ರತಿ ಮೂರು, ನಾಲ್ಕು ಅಥವಾ ಐದು ವರ್ಷಗಳಿಗೊಮ್ಮೆಅಗ್ನಿಕೊಂಡಗಳು ಪರ, ಉತ್ಸವಾದಿಗಳು ನಡೆಯಲಿವೆ. ಹಬ್ಬಗಳಲ್ಲಿ ಸಾವಿರಾರು ಮಂದಿಗೆ ಅವರೆಕಾಳು ಮುದ್ದೆ ಊಟವೇ ಇಲ್ಲಿನ ವಿಶೇಷ.
ಹೆಚ್ಚಾಗಿ ಮಾವು ಬೆಳೆಗಾರರು ಗ್ರಾಮದಲ್ಲಿದ್ದು, ಬಹುಪಾಲು ರೈತರು ಮಾವು ಜತೆಗೆ ವ್ಯಾಪಾರದಲ್ಲೂ ತೊಡಿಸಿಕೊಂಡಿದ್ದಾರೆ. ಗ್ರಾಮದಲ್ಲಿ ಎಲೆಕ್ಟ್ರಿಕಲ್, ಕಾರ್ಪೆಂಟರ್, ಬಾರ್ ಬೆಂಡರ್ ಸೇರಿ ಕಟ್ಟಡ ನಿರ್ಮಾಣ ಗುತ್ತಿಗೆದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅಡುಗೆ ಕಂಟ್ರ್ಯಾಕ್ಟರ್, ಮುದ್ರಣ ಕ್ಷೇತ್ರ ಸೇರಿ ಹಲವು ಸೇವಾ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ.
ತುಮಕೂರು ಮಠಕ್ಕೂ ವಿಭೂತಿಕೆರೆಗೂ ಅವಿನಾಭವ ಸಂಬಂಧವಿದೆ. ಲಿಂಗೈಕ್ಯ ಶ್ರೀ ಶಿವಕುಮಾರ ಸ್ವಾಮೀಜಿ ನೂರಾರು ಬಾರಿ ಗ್ರಾಮಕ್ಕೆ ಭೇಟಿ ನೀಡಿ ಆಶೀರ್ವಾದ ನೀಡಿದ್ದರು. ಈಗಿನ ಸಿದ್ದಲಿಂಗ ಸ್ವಾಮೀಜಿಗಳೂ ಹಿರಿಯ ಶ್ರೀಗಳಂತೆ ಭಕ್ತರ ಪೂಜಾ, ಗ್ರಾಮದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಆಶೀರ್ವಾದ ನೀಡುತ್ತಿದ್ದಾರೆ.
80 ವರ್ಷಗಳ ಹಿಂದೆ ಚನ್ನಪಟ್ಟಣ ತಾಲೂಕಿನ ಬೇವೂರು ಸಿದ್ದರಾಮಣ್ಣ ಎಂಬುವರು ವೀರಶೈವರು ಹೆಚ್ಚಿನ ಜನರಿದ್ದ ಕಾರಣ ವಿಭೂತಿಕೆರೆ ಗ್ರಾಮದಲ್ಲಿ ಬಂದು ಲಿಂಗು ತಯಾರಿಕೆ ಆರಂಭಿಸಿದರು. ಅವರಿಂದ ಶಿವಲಿಂಗಯ್ಯ ಎಂಬುವರುಕಲಿತರು. ನಂತರ ಸಿದ್ದಯ್ಯ ಹೀಗೆ ಹತ್ತಾರು ಕುಟುಂಬಗಳು ಲಿಂಗು ತಯಾರಿಕೆ ನಡೆಸಿ ಸಿದ್ಧಗಂಗಾಮಠ, ಎಡಿಯೂರು, ಮಹಂತರಮಠ, ಬೆಂಗಳೂರು ಸೇರಿ ಹಲವು ಕಡೆ ಕಾಯಕ ಮಾಡುತ್ತಾ ಬಂದಿದ್ದಾರೆ. ಜತೆಗೆ ದೇವಾಲಯಗಳ ಮೂರ್ತಿಗೆ ಚದ್ರಶ ಕಂತೆ ಬಿಗಿದು ಲಿಂಗು ಕಾಯಕ ಮಾಡುತ್ತಿದ್ದಾರೆ.
ಗ್ರಾಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವೀರಶೈವರಿದ್ದಾರೆ. ಹಣೆಗೆ ವಿಭೂತಿ ಹಚ್ಚುವ ಹೆಚ್ಚಿನ ಜನರಿದ್ದ ಕಾರಣ ಹಿಂದೆ ಕೆರೆ ಬಳಿಯೇ ವಿಭೂತಿಗಟ್ಟಿ ಮಾಡುತ್ತಿದ್ದರಂತೆ. ಸ್ನಾನ ಮಾಡಿ ಕೆರೆ ಬಳಿ ಜನರು ವಿಭೂತಿ ಧರಿಸಿ ಬರುತ್ತಿದ್ದರಂತೆ ಮತ್ತೆ ಕೆಲವರು ಹೇಳುವಂತೆ ರೇವಣಸಿದ್ಧೇಶ್ವರ ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ಹೋಗಿ ಜನರು ರಾತ್ರಿ ವಿಭೂತಿಕೆರೆಯಲ್ಲಿ ತಂಗಿ ಕೆರೆಯಲ್ಲಿ ಸ್ನಾನ ಮಾಡಿ ಹಣೆಗೆ ವಿಭೂತಿ ಧರಿಸಿ, ಶಿವಪೂಜೆ ಮಾಡಿ ಕೆರೆ ದಡದಲ್ಲಿ ವಿಭೂತಿ ಮಡಗುತ್ತಿದ್ದರು. ಅಂದಿನ ಕಾಲದಲ್ಲಿ ಉಭೂತ ಕೆರೆ ಎಂದು ಕರೆಯುತ್ತಿದ್ದರಂತೆ. ಕಾಲಾಂತರದ ರೂಢಿಯಲ್ಲಿ ವಿಭೂತಿಕೆರೆ ಎಂದು ಕರೆಯುತ್ತಿದ್ದಾರೆ ಎಂದು ಗ್ರಾಮದ ಹಿರಿಯರು ಇತಿಹಾಸ ಹೇಳುತ್ತಾರೆ.
ಗ್ರಾಮ ಹಿಂದೆ ಚೋಳರ ಕಾಲದಲ್ಲೂ ಪ್ರಸಿದ್ಧಿ ಪಡೆದು ವ್ಯಾಪಾರ ಕೇಂದ್ರ ಧಾರ್ಮಿಕ ಕೇಂದ್ರವಾಗಿತ್ತು ಎಂಬುದಕ್ಕೆ ಗ್ರಾಮದಲ್ಲಿ ಚೋಳರ ಇತಿಹಾಸ ಕಾಲದ ದೊಡ್ಡದಾದ ಆಂಜನೇಯ ವಿಗ್ರಹವಿದೆ. ವೀರಗಲ್ಲು, ಮಾಸ್ತಿಗಲ್ಲು ಮತ್ತು ಶಾಸನ ಕಲ್ಲು ಸಹ ಹಿಂದೆ ಕಂಡುಬಂದಿದ್ದವು. ಅಂಕನಹಳ್ಳಿ ಪಾರ್ಥ ಎಂಬ ಸಾಹಿತಿಗಳು ಇತಿಹಾಸದ ಮೇಲೆ ಒಂದಷ್ಟು ಬೆಳಕು ಚೆಲ್ಲಿದ್ದರು.
ಗ್ರಾಮ ಇತಿಹಾಸ ಕಾಲದಿಂದಲೂ ಸಾಮಾಜಿಕ ಧಾರ್ಮಿಕ ಶೈಕ್ಷಣಿಕವಾಗಿ ಬೆಳೆದು ಬಂದಿದೆ. ಒಗ್ಗಟ್ಟಿನ ಸಹಬಾಳ್ವೆಗೆ ಗ್ರಾಮ ಮಾದರಿಯಾಗಿದೆ. ಗ್ರಾಮದ ಜನರು ಯಾವುದೇ ದ್ವೇಷ ಅಸೂಹೆ ಇಲ್ಲದೆ ಎಲ್ಲರೂ ಸೌಹಾರ್ದದಿಂದ ಜೀವನ ನಡೆಸುತ್ತಾ ಬಂದಿದ್ದೇವೆ. ಇಂತಹ ಪುಣ್ಯ ನೆಲದ ಗ್ರಾಮದಲ್ಲಿ ಜನ್ಮತಾಳಿದ್ದೇ ನಮ್ಮ ಸೌಭಾಗ್ಯ.ಮಹದೇಶಸ್ವಾಮಿಗ್ರಾಪಂ ಸದಸ್ಯ, ವಿಭೂತಿಕೆರೆ