ಜಿಲ್ಲೆ

ಅನ್ನದಾನೇಶ್ವರ ಮಠದ ಆಸ್ತಿಯಲ್ಲಿ ವಕ್ಫ್ ಹೆಸರು!

ಪ್ರಭುಸ್ವಾಮಿ ಅರವಟಗಿಮಠ ನರೇಗಲ್ಲ

ಸ್ವಾತಂತ್ರ್ಯ ಪೂರ್ವದಲ್ಲಿಯೇ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸುವ ಮೂಲಕ ಹೈದ್ರಾಬಾದ್-ಕರ್ನಾಟಕದ ಶೈಕ್ಷಣಿಕ ಹೆಬ್ಬಾಗಿಲು ಎಂದು ಕರೆಸಿಕೊಳ್ಳುವ ಪಟ್ಟಣದ ಶ್ರೀ ಅನ್ನದಾನೇಶ್ವರ ಸಂಸ್ಥಾನಮಠದ ಎಸ್‌ಎವಿವಿಪಿ ಸಮಿತಿಯ ಕೆ.ವಿ.ಬಿ.ಎಂ ಉಚಿತ ಪ್ರಸಾದ ನಿಲಯದ ಸರ್ವೆ ನಂ: 410/2ಬಿ ರ ಆಸ್ತಿಯಲ್ಲಿ ರಹಮಾನ ಶಾವಲಿ ದರ್ಗಾ ವಕ್ಫ್ ಆಸ್ತಿ ಎಂದು ನೋಂದಣಿಯಾಗಿದೆ.

ಲಿಂ. ಡಾ. ಅಭಿನವ ಅನ್ನದಾನ ಸ್ವಾಮೀಜಿಗಳು ಶ್ರೀಮಠದ ಪೀಠಾಧಿಪತಿಗಳಾಗಿದ್ದಾಗ ಪಹಣಿಯ ಕಾಲಂ ನಂ. 11 ರಲ್ಲಿ 2019-2020 ರಲ್ಲಿ ರೆಹಮಾನ ಶಾವಲಿ ದರ್ಗಾ ವಕ್ಫ್ ಆಸ್ತಿ ಎಂದು ಸೇರ್ಪಡೆಯಾಗಿದೆ. ಕೆ.ವಿ.ಬಿ.ಎಂ ಉಚಿತ ಪ್ರಸಾದ ನಿಲಯದ ಆಸ್ತಿ ನಂ. 410/2ಬಿ ರ 15 ಎಕರೆ 06 ಗುಂಟೆ ಜಮೀನಿನಲ್ಲಿ 11 ಎಕರೆ 19 ಗುಂಟೆ ಜಮೀನು ರೆಹಮಾನ ಶಾವಲಿ ದರ್ಗಾ ವಕ್ಫ್ ಆಸ್ತಿ ಎಂದು ಸೇರ್ಪಡೆಯಾಗಿದ್ದು, ಚೇರ್ಮನ್ ಕೆ.ವಿ.ಬಿ.ಎಂ ಉಚಿತ ಪ್ರಸಾದ ನಿಲಯ ನರೇಗಲ್ಲ ಹೆಸರಿಗೆ 3 ಎಕರೆ 27 ಗುಂಟೆ ಜಮೀನು ಎಂದು ನಮೂದಾಗಿರುವುದು ಶ್ರೀಮಠದ ಭಕ್ತರ ಆತಂಕಕ್ಕೆ ಕಾರಣವಾಗಿದೆ.

500 ವರ್ಷಗಳ ಇತಿಹಾಸ ಹೊಂದಿರುವ ಹಾಲಕೆರೆಯ ಶ್ರೀ ಅನ್ನದಾನೇಶ್ವರ ಸಂಸ್ಥಾನಮಠವು ಸ್ವಾತಂತ್ರ್ಯ ಪೂರ್ವದಲ್ಲಿಯೇ ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸಿ ಅಕ್ಷರದೊಂದಿಗೆ ಅನ್ನವನ್ನು ನೀಡುವ ಉದ್ದೇಶದಿಂದ ಲಿಂ. ಶ್ರೀ ಗುರು ಅನ್ನದಾನ ಸ್ವಾಮೀಜಿಗಳು, ಕೋಡಿಕೊಪ್ಪ ವೀರಪ್ಪಜ್ಜನವರು ಹಾಗೂ ಬಾಗಲಕೋಟೆ ವೈರಾಗ್ಯದ ಮಲ್ಲಣಾರ್ಯರು ಉಚಿತ ಪ್ರಸಾದ ನಿಲಯವನ್ನು ಕೋಡಿಕೊಪ್ಪದ ಹಾಲಕೆರೆಯ ಶಾಖಾ ಮಠದಲ್ಲಿ 1956ರಲ್ಲಿ ಪ್ರಾರಂಭಿಸಿದ್ದರು.

ಉಚಿತ ಪ್ರಸಾದ ನಿಲಯಕ್ಕೆ ಸ್ಥಳೀಯ ರೈತರ ಸಹಕಾರದಿಂದ ಸಾಕಷ್ಟು ಭೂಮಿಯನ್ನು ಶ್ರೀಮಠಕ್ಕೆ ನೀಡಲಾಗಿತ್ತು. ಆದರೆ, 2019-20 ರಲ್ಲಿ ಉಚಿತ ಪ್ರಸಾದ ನಿಲಯದ 15.06 ಎಕರೆ ಆಸ್ತಿಯಲ್ಲಿ ರೆಹಮಾನ ಶಾವಲಿ ದರ್ಗಾ ವಕ್ಫ್ ಆಸ್ತಿ ಎಂದು ಹೇಗೆ ನಮೂದಾಗಿದೆ ಎಂದು ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಾಲಕೆರೆಯ ಶ್ರೀಮಠದ ಕೆ.ವಿ.ಬಿ.ಎಂ ಉಚಿತ ಪ್ರಸಾದ ನಿಲಯದ ಆಸ್ತಿ ನಂ. 410/2ಬಿ ರ 15 ಎಕರೆ 06 ಗುಂಟೆ ಜಮೀನಿನಲ್ಲಿ 11 ಎಕರೆ 19 ಗುಂಟೆ ಜಮೀನು ರೆಹಮಾನ ಶಾವಲಿ ದರ್ಗಾ ವಕ್ಫ್ ಆಸ್ತಿ ಎಂದು 2019-20 ರಲ್ಲಿ ನಮೂದಾಗಿರುವ ಬಗ್ಗೆ ಹಿಂದಿನ ಪೀಠಾಧಿಪತಿಗಳಾಗಿದ್ದ ಡಾ. ಅಭಿನವ ಅನ್ನದಾನ ಸ್ವಾಮೀಜಿಗಳು ಕಾನೂನಾತ್ಮಕ ಹೋರಾಟಕ್ಕೆ ಮುಂದಾಗಿದ್ದರು. ಆದರೆ, ಅವರು ಲಿಂಗೈರಾದ ಹಿನ್ನೆಲೆಯಲ್ಲಿ ಅದು ನನೆಗುದಿಗೆ ಬಿದ್ದಿದೆ.

ಎಂ.ಎಸ್. ಧಡೇಸೂರಮಠ, ಶ್ರೀಮಠದ ಭಕ್ತರು

------------

ಹಾಲಕೆರೆಯ ಶ್ರೀಮಠದ ಆಸ್ತಿಯನ್ನು ಯಾವುದೇ ಕಾರಣಕ್ಕೂ ಪರಭಾರೆಯಾಗಲು ಬಿಡುವುದಿಲ್ಲ. ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು. ಶ್ರೀಮಠದ ಭಕ್ತರು ಯಾವುದೇ ಕಾರಣಕ್ಕೂ ಆತಂಕ ಪಡುವ ಅಗತ್ಯವಿಲ್ಲ.

ಜಿ.ಎಸ್. ಪಾಟೀಲ, ಶಾಸಕರು, ಉಪಾಧ್ಯಕ್ಷರು ಎಸ್‌ಎವಿವಿಪಿ ಸಮಿತಿ ನರೇಗಲ್ಲ