ಜಿಲ್ಲೆ

ನಮಾಮಿ ಗಂಗಾ ಯೋಜನೆ ಜಾಗತಿಕ ಪರಿಸರ ಸಂರಕ್ಷಣೆಯಲ್ಲಿ ಮೈಲಿಗಲ್ಲು

ಗೋಪಾಲಕೃಷ್ಣ ಪಾದೂರ್

ಉಡುಪಿ: ಗಂಗಾ ನದಿಯನ್ನು ಸ್ವಚ್ಛ ಮತ್ತು ಪುನರ್ಜೀವನಗೊಳಿಸುವ ನಮಾಮಿ ಗಂಗಾ ಯೋಜನೆಯು ಜಗತ್ತಿನ ಅತ್ಯಂತ ಪ್ರಮುಖ ಯೋಜನೆಗಳಲ್ಲಿ ಒಂದಾಗಿದ್ದು, ಇದಕ್ಕೆ ಕೇಂದ್ರ ಸರ್ಕಾರ 20 ಸಾವಿರ ಕೋಟಿ ರೂ. ತೆಗೆದಿರಿಸಿದೆ. ಕಳೆದ 9 ವರ್ಷಗಳಲ್ಲಿ 450ಕ್ಕೂ ಮಿಕ್ಕಿ ವಿವಿಧ ಕಾಮಗಾರಿಗಳನ್ನು ಕಾರ್ಯರೂಪಗೊಳಿಸಿದ್ದು, ಇದಕ್ಕೆ ಸಾಕಷ್ಟು ಪ್ರತಿಫಲವು ದೊರಕಿದೆ ಎಂದು ಸ್ವಚ್ಛ ಗಂಗಾ ರಾಷ್ಟ್ರೀಯ ಮಿಷನ್​ ಮಹಾನಿರ್ದೇಶಕ ಜಿ. ಅಶೋಕ್​ ಕುಮಾರ್​ ಹೇಳಿದರು.

ಮಾಹೆಯ ಎಂಸಿಏನ್​ಎಸ್​ ನಲ್ಲಿ ಶನಿವಾರ ಉಡುಪಿ, ಕಾರ್ಕಳ, ಬ್ರಹ್ಮಾವರ ಭಾಗದ ಶಿಕ್ಷಕರಿಗಾಗಿ ಹಮ್ಮಿಕೊಂಡಿರುವ ನದಿಗಳ ಸಂರಕ್ಷಣೆ ಮತ್ತು ಪುನಶ್ಚೇತನ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅವಿರಲಧಾರ ಗಂಗಾ, ನಿರ್ಮಲಧಾರ ಗಂಗಾ, ಜ್ಞಾನ ಗಂಗಾ, ಜನ ಗಂಗಾ ಮತ್ತು ಅರ್ಥಗಂಗೆ ಮತ್ತು ಪರಿಸರ ಸಂರಕ್ಷಣೆ ಈ ಐದು ಪ್ರಮುಖ ಅಂಶಗಳ ಮೂಲಕ ನಮಾಮಿ ಗಂಗೆಗೆ ಚಾಲನೆ ನೀಡಲಾಗಿದೆ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಡಿಡಿಪಿಐ ಗಣಪತಿ, ಮಕ್ಕಳಲ್ಲಿ ಜಲ, ಪರಿಸರ, ನದಿ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಅಧ್ಯಾಪಕರುಗಳು ಮಾಡಬೇಕಾಗಿದೆ. ಪರಿಸರ ಸಂರಕ್ಷಣೆಯಲ್ಲಿ ಅಧ್ಯಾಪಕರ ಹೊಣೆ ಮತ್ತು ಕೊಡುಗೆ ಬಹಳ ಮಹತ್ವದ್ದು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಮಾಹೆಯ ಪ್ರೊ ಚಾನ್ಸೆಲರ್​ ಡಾ. ಎಚ್​.ಎಸ್​. ಬಲ್ಲಾಳ್​ ಹಾಗೂ ಪ್ರೊ ವೈಸ್​ ಚಾನ್ಸಲರ್​ ಡಾ. ನಾರಾಯಣ್​ ಸಭಾಹಿತ್​ ಮಾತನಾಡಿದರು. ಮಣಿಪಾಲ್​ ಸೆಂಟರ್​ ಫಾರ್​ ನ್ಯಾಚುರಲ್​ ಸೈನ್ಸ್​ ಇದರ ನಿರ್ದೇಶಕ ಡಾ. ಶ್ರೀಕುಮಾರ್​ ಸ್ವಾಗತಿಸಿ, ಎಂ.ಐ.ಟಿ ಜಂಟಿ ನಿರ್ದೇಶಕ ಡಾ. ಸೋಮಶೇಖರ ಭಟ್​ ವಂದಿಸಿದರು. ಡಾ. ರಾಘವೇಂದ್ರ ಹೊಳ್ಳ ಮತ್ತು ಡಾ. ನಾರಾಯಣ ಶೆಣೈ ಕೆ. ಮಾಹಿತಿ ನೀಡಿದರು. ಸೃಜನರಾವ್​ ಮತ್ತು ಸಂಗಡಿಗರು ಪ್ರಾರ್ಥನೆ ನೆರವೇರಿಸಿದರು. ಡಾ. ಸೌಮ್ಯ ಎಸ್​. ಮತ್ತು ಡಾ. ಭಾಗ್ಯ ನಾವಾಡ ಕಾರ್ಯಕ್ರಮ ನಿರೂಪಿಸಿದರು.