ಜಿಲ್ಲೆ

ತರಕಸಪೇಟ್ ಗ್ರಾಮದಲ್ಲಿ ವಾಂತಿಭೇದಿ; ಹಳ್ಳಿಗೆ ಬಾರದ ಆರೋಗ್ಯ ಅಧಿಕಾರಿಗಳು

ಕೃಷ್ಣ ಕುಲಕರ್ಣಿ

ಶಹಾಬಾದ್(ನಾಲವಾರ): ವಲಯದ ಕೊಲ್ಲೂರ ಆರೋಗ್ಯ ಕೇಂದ್ರ ವ್ಯಾಪ್ತಿಯ ತರಕಸಪೇಟ್ ಗ್ರಾಮದಲ್ಲಿ ಕಳೆದ ಐದು ದಿನಗಳಿಂದ ವಾಂತಿ ಭೇದಿ ಪ್ರಕರಣಗಳು ಹೆಚ್ಚುತ್ತಿವೆ. ಆದರೆ ಇಲ್ಲಿವರೆಗೂ ತಾಲೂಕು ಮಟ್ಟದ ಅಧಿಕಾರಿಗಳಾರು ಹಳ್ಳಿಗೆ ಭೇಟಿ ನೀಡಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

ಗ್ರಾಮದ ವಿವಿಧ ಬಡಾವಣೆಯಲ್ಲಿ ಪ್ರತಿದಿನ 5-8 ಪ್ರಕರಣಗಳು ದಾಖಲಾಗುತ್ತಿವೆ. ಮಕ್ಕಳು, ದೊಡ್ಡವರಲ್ಲೂ ವಾಂತಿ-ಭೇದಿ ಕಾಣಿಸಿಕೊಳ್ಳುತ್ತಿದೆ. ಕಲುಷಿತ ನೀರಿಗಾಗಿ ಈ ಸಮಸ್ಯೆ ಉಂಟಾಗಿರಬಹುದು ಎಂದು ಅಂದಾಜಿಸಲಾಗುತ್ತಿದೆ. ಹೀಗಾಗಿ ಸ್ಥಳೀಯ ಆಡಳಿತ ನೀರಿನ ಟ್ಯಾಂಕ್​ಗಳನ್ನು ಸ್ವಚ್ಚಗೊಳಿಸಿದ್ದು, ಆದರೂ ಪ್ರಕರಣಗಳು ಇಳಿಮುಖವಾಗಿಲ್ಲ.

ವಾಂತಿ-ಭೇದಿಯಿಂದ ಜನರು ಹಾಗೂ ಮಕ್ಕಳು ತೀವ್ರ ಅಸ್ವಸ್ಥರಾಗುತ್ತಿದ್ದು, ಚಿಕಿತ್ಸೆ ಪಡೆಯಲು ಸ್ಥಳೀಯವಾಗಿ ಆರೋಗ್ಯ ಕೇಂದ್ರಗಳಿಲ್ಲ. ಹೀಗಾಗಿ 4 ಕಿಮೀ ದೂರದ ಕೊಲ್ಲೂರ ಗ್ರಾಮದ ಆರೋಗ್ಯ ಕೇಂದ್ರಕ್ಕೆ ಹೋಗುವು ಪರಿಸ್ಥಿತಿ ನಿರ್ಮಾಣವಾಗಿದೆ. ಆರೋಗ್ಯ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ, ಸಮಸ್ಯೆಗೆ ಪರಿಹಾರ ಕಲ್ಪಿಸುವಲ್ಲಿ ವಿಫಲವಾಗಿದ್ದಾರೆ.

ಕೂಡಲೇ ಆರೋಗ್ಯ ಇಲಾಖೆ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ, ಹೆಲ್ತ್​ ಕ್ಯಾಂಪ್​ ಮಾಡಬೇಕು. ಜನರ ಆರೋಗ್ಯ ತಪಾಸಣೆ ಮಾಡಿ, ವಾಂತಿ ಭೇದಿ ಪ್ರಕರಣಗಳಿಗೆ ಕಡಿವಾಣ ಹಾಕಬೇಕಿದೆ. ಅಲ್ಲದೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.