ಮಂಡ್ಯ: ಕೆಆರ್‌ಎಸ್ ಜಲಾಶಯದಿಂದ ತಮಿಳುನಾಡಿಗೆ ನಿರಂತರವಾಗಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ನಗರದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಟ್ರಸ್ಟ್ ಸದಸ್ಯರು ಪ್ರತಿಭಟನೆ ನಡೆಸಿದರು.
ಕಾವೇರಿ ನೀರಾವರಿ ನಿಗಮ ಕಚೇರಿ ಎದುರಿನ ಕಾವೇರಿ ಮಾತೆ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಿ ಸುಪ್ರೀಂ ಕೋರ್ಟ್‌ನಲ್ಲಿ ಕರ್ನಾಟಕದ ಪರ ತೀರ್ಪು ಬರಲೆಂದು ಪ್ರಾರ್ಥಿಸಿದರು. ಬಳಿಕ ಬೈಕ್ ರ‌್ಯಾಲಿ ಮೂಲಕ ಜಯಚಾಮರಾಜೇಂದ್ರ ಒಡೆಯರ್ ವೃತ್ತಕ್ಕೆ ತೆರಳಿ ಮಾನವ ಸರಪಳಿ ನಿರ್ಮಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಸರ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿ ಧರಣಿಯಲ್ಲಿ ಭಾಗಿಯಾದರು.
ಕಾವೇರಿ ಕೊಳ್ಳದ ಜಲಾಶಯಗಳಿಂದ ನೀರು ಬಿಡುತ್ತಿರುವ ಸರ್ಕಾರದ ಕುಡಿಯುವ ನೀರಿಗೆ ದೊಡ್ಡ ಕಂಟಕ ತರಲಿದೆ. ಕಾವೇರಿ ನದಿ ನೀರನ್ನು ತುರ್ತಾಗಿ ಉಳಿಸಬೇಕಾಗಿದೆ. ನದಿ ಪಾತ್ರದ ಜಿಲ್ಲೆಗಳ ಜನ ಮತ್ತು ಜಾನುವಾರುಗಳಿಗೆ ಕುಡಿಯಲು ನೀರಿಲ್ಲದ ಸಂದರ್ಭದಲ್ಲಿ ಸರ್ಕಾರ ತಮಿಳುನಾಡಿಗೆ ನೀರು ಹರಿಸುತ್ತಿದೆ. ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ತಮಿಳುನಾಡು ಮತ್ತು ಕರ್ನಾಟಕ ರಾಜ್ಯದ ವಾಸ್ತವ ಸ್ಥಿತಿ ವರದಿಯನ್ನು ಅಧ್ಯಯನ ಮಾಡಬೇಕು. ಜಲಾಶಯಗಳಲ್ಲಿ ನೀರಿನ ಲಭ್ಯತೆ ಅವಲೋಕಿಸದೆ ನೀರು ಬಿಡುಗಡೆ ಮಾಡಿ ಎಂದು ಆದೇಶ ಮಾಡುವುದು ಅವೈಜ್ಞಾನಿಕ. ರೈತರಿಗೆ ಅನ್ಯಾಯವಾಗುತ್ತಿದ್ದರೂ ಸುಮ್ಮನಿರುವ ಶಾಸಕರು ಮತ್ತು ಸಂಸದರ ನಡೆ ಖಂಡನೀಯ. ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ಸಂಕಷ್ಟ ಸೂತ್ರ ರೂಪಿಸಬೇಕು. ಸುಪ್ರೀಂ ಕೋರ್ಟ್‌ನಲ್ಲಿ ವಾಸ್ತವ ಸ್ಥಿತಿ ಮನವರಿಕೆ ಮಾಡಿಕೊಡಲು ರಾಜ್ಯಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಟ್ರಸ್ಟ್ ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್, ಎಂ.ಸಿ.ಲಂಕೇಶ್ ಮಂಗಲ, ಮಹದೇವಸ್ವಾಮಿ, ಜವರೇಗೌಡ, ಮಂಜು,ಪ್ರಸನ್ನ, ಉಮಾಪತಿ, ಜಗದೀಶ್, ಶಿವಲಿಂಗೇಗೌಡ, ಸಂತೆಕಸಲಗೆರೆ ಚರಣ, ಸಚಿನ್, ಸಿದ್ದರಾಜು ಇತರರಿದ್ದರು.