ಮಂಡ್ಯ: ವಿ.ಸಿ ಫಾರ್ಮ್‌ನಲ್ಲಿ ಸಮಗ್ರ ಕೃಷಿ ವಿಶ್ವವಿದ್ಯಾನಿಲಯ ಸ್ಥಾಪಿಸಲು ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರೇ ಪ್ರೇರಣೆಯಾಗಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತ್ಯುತ್ಸವದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ವಿ.ಸಿ ಫಾರ್ಮ್‌ನಲ್ಲಿ ಸಂಶೋಧನಾ ಕೇಂದ್ರ ಸ್ಥಾಪಿಸಿದ್ದರು. ಇದರ ಭಾಗವಾಗಿ ಈ ಸ್ಥಳದಲ್ಲಿಯೇ ಕೃಷಿ ವಿವಿ ಸ್ಥಾಪಿಸಿದರೆ ಸಮಗ್ರ ಕೃಷಿಗೆ ಹೆಚ್ಚು ಅನುಕೂಲವಾಗುತ್ತದೆ ಎಂಬುದನ್ನು ಮನಗಂಡು ಮುಖ್ಯಮಂತ್ರಿ ಮತ್ತು ವಿಪಕ್ಷದವರು ಸೇರಿದಂತೆ ಎಲ್ಲರನ್ನು ಒಪ್ಪಿಸಿ ಸ್ಥಾಪಿಸಲಾಗುತ್ತಿದೆ ಎಂದರು.
ಕೃಷಿ ಸಚಿವನಾಗಿ ಕೆಲಸ ಮಾಡಲು ಹಾಗೂ ಜಿಲ್ಲೆಯನ್ನು ಅಭಿವೃದ್ಧಿ ಪಡಿಸಲು ಹಲವಾರು ಸಾರ್ವಜನಿಕರು ಹಾಗೂ ಸಂಘ, ಸಂಸ್ಥೆಗಳು ಶಕ್ತಿ ತುಂಬಿದ್ದಾರೆ. ಕೃಷಿ ವಿಶ್ವವಿದ್ಯಾನಿಲಯ ಮುಂದಿನ ದಿನಗಳಲ್ಲಿ ರೈತರಿಗೆ ಉಪಯುಕ್ತವಾಗಲಿದೆ. ಪ್ರತಿ ರೈತನ ಮನೆಗೆ ಕಾಮಧೇನುವಾಗಲಿದೆ. ಕೃಷಿಯಲ್ಲಿ ಹಲವಾರು ಬದಲಾವಣೆಯಾಗಬೇಕಿದೆ. ಇದಕ್ಕೆ ಕೃಷಿ ವಿಶ್ವವಿದ್ಯಾನಿಲಯ ಸಹಕರಿಸಲಿದೆ. ಕೃಷಿಯಲ್ಲಿ ತಾಂತ್ರಿಕತೆ, ಸಮಗ್ರ ಕೃಷಿ, ನೈಸರ್ಗಿಕ ಹಾಗೂ ಸಾವಯವ ಕೃಷಿ ಕೃಷಿಯಲ್ಲಿ ಕಡಿಮೆ ನೀರಿನ ಬಳಕೆ ಸೇರಿದಂತೆ ಹಲವು ಬದಲಾವಣೆ ತರಬೇಕಿದೆ ಎಂದು ಸಲಹೆ ನೀಡಿದರು.
ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕವಾಗಿ ಉತ್ತಮ ಆಡಳಿತ ನಡೆಸಿದ ಕಾಲ ಎಂದರೆ ಅದು ನಾಲ್ವಡಿ ಅವರ ಅಧಿಕಾರಾವದಿ. 39 ವರ್ಷ ಬದುಕಿದ್ದರೂ ನೂರಾರು ಯೋಜನೆ ತಂದು ಹಳೇ ಮೈಸೂರು, ಬೆಳಗಾವಿ ಭಾಗಗಳಲ್ಲಿ ಅಭಿವೃದ್ಧಿ ಮಾಡಿದ್ದಾರೆ. ಹಳೇ ಮೈಸೂರು ಪ್ರಾಂತ್ಯದಲ್ಲಿ ವಾಸಿಸುತ್ತಿರುವ ನಾವು ಇಂದು ಸುಖವಾಗಿರಲು ನಾಲ್ವಡಿ ಅವರು ಹಾಕಿಕೊಟ್ಟ ಅಡಿಪಾಯ. ಮಂಡ್ಯ ಎಂದರೆ ಇಂಡಿಯಾ ಎನ್ನಲಾಗುತ್ತಿತ್ತು. ಅಂದಿನ ರಾಜಕಾರಣಿಗಳು ತೆಗೆದುಕೊಳ್ಳುತ್ತಿದ್ದ ತೀರ್ಮಾನ ಇಡೀ ರಾಜ್ಯಕ್ಕೆ ಅನ್ವಯವಾಗುತ್ತಿತ್ತು. ಆದರೆ, ನಮ್ಮ ಭಾಗದಲ್ಲಿ ನಾನು ಎಂಬ ಅಹಂ ಹೆಚ್ಚಾಗಿ ಅಭಿವೃದ್ಧಿಗಿಂತ ಕೇವಲ ರಾಜಕಾರಣವೇ ತುಂಬಿದೆ. ಇದರಿಂದಾಗಿ ಗತಕಾಲದ ವೈಭವ ಮರೆಯಾಗುತ್ತಿದೆ ಎಂದು ವಿಷಾದಿಸಿದರು.
ಐಎಎಸ್, ಐಪಿಎಸ್ ಸೇರಿದಂತೆ ಉನ್ನತ ಹುದ್ದೆ ಅಲಂಕರಿಸಿರುವವರು ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡಿದವರೇ ಹೆಚ್ಚು. ಶೇ.70 ರಷ್ಟು ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡಿದವರೇ ಹೆಚ್ಚು ಸಾಧನೆ ಮಾಡಿದ್ದಾರೆ. ಜಿಲ್ಲೆಯ ಜನ ನನಗೆ ಪ್ರೀತಿ ಹಾಗೂ ಶಕ್ತಿ ತುಂಬಿದ್ದಾರೆ. ಅವರ ಋಣ ತೀರಿಸಲು ಎಂದಿಗೂ ಸಾಧ್ಯವಿಲ್ಲ. ಕೃಷಿ ವಿಶ್ವವಿದ್ಯಾಲಯ ಸ್ಥಾಪನೆಯಿಂದ ಇನ್ನು ಹತ್ತಾರು ವರ್ಷಗಳ ನಂತರ ಏನೆಲ್ಲ ಅನುಕೂಲವಾಗಲಿದೆ ಎನ್ನುವುದು ಗೊತ್ತಾಗಲಿದೆ. ಕೃಷಿ ವಿವಿ ದೊಡ್ಡ ಕಾಮಧೇನು ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಳವಳ್ಳಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಮಾತನಾಡಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ರೈತರ ಅಭ್ಯುದಯಕ್ಕಾಗಿ ಕೆಆರ್‌ಎಸ್ ಅಣೆಕಟ್ಟೆ ಕಟ್ಟಿಸಿ ಹಲವು ಕಾರ್ಖಾನೆಗಳನ್ನು ಸ್ಥಾಪಿಸಿ ಸಿಹಿ ಬೆಳೆಯಲು ಕಾರಣರಾದರು. ಆದರೆ, ನಾವು ಭೂಮಿಗೆ ರಾಸಾಯನಿಕ ಗೊಬ್ಬರವನ್ನು ಹಾಕಿ ಭೂಮಿಯ ಫಲವತ್ತತೆ ನಾಶ ಮಾಡುತ್ತಿದ್ದೇವೆ. ಅನ್ನ ಕೊಡುವ ತಾಕತ್ತು ಇರುವ ನಾವು ಆಹಾರದ ಜತೆಗೆ ವಿಷವನ್ನೂ ನೀಡುತ್ತಿದ್ದೇವೆ. ಇನ್ನಾದರೂ ಸಾವಯವ ಬೆಳೆ ಬೆಳೆಯುವ ವಿಧಾನ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ನಿವೃತ್ತ ಲೋಕಾಯುಕ್ತ ಡಾ.ಸಂತೋಷ್ ಹೆಗ್ಡೆ ಮಾತನಾಡಿ, ಸನ್ಮಾನ ಸ್ವೀಕರಿಸುವರಿಗೆ ಒಂದು ಹುರುಪು ಬರುತ್ತದೆ. ಇದು ಇಂತಹ ಕಾರ್ಯಕ್ರಮಗಳು ಸಮಾಜದಲ್ಲಿ ಬದಲಾವಣೆ ತರುತ್ತವೆ. ಚಲುವರಾಯಸ್ವಾಮಿ ಮತ್ತಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಲಿ. ಅವರ ಬಗ್ಗೆ ಎಲ್ಲರೂ ಒಳ್ಳೆಯ ಮಾತುಗಳನ್ನು ಹಾಡುತ್ತಿರುವುದನ್ನು ನೋಡಿದರೆ ಸಂತಸವಾಗುತ್ತದೆ. ನಾಲ್ವಡಿ ಅವರು ಕೇವಲ ಮಂಡ್ಯಕ್ಕಷ್ಟೇ ಸೀಮಿತವಾಗಿರಲಿಲ್ಲ, ಮೈಸೂರು ಮಹಾಸಂಸ್ಥಾನದಲ್ಲಿ ಉತ್ತಮ ಆಡಳಿತಗಾರರಾಗಿ ಕೆಲಸ ಮಾಡಿ ಜನಮನ್ನಣೆಳಿಸಿ ಹೆಸರು ವಾಸಿಯಾಗಿದ್ದಾರೆ ಎಂದು ತಿಳಿಸಿದರು.
ಮಾಜಿ ಡಿಸಿಎಂ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಮಾತನಾಡಿ, ಭ್ರಷ್ಟಾಚಾರಕ್ಕೆ ಸಿಂಹಸ್ವಪ್ನವಾಗಿದ್ದ ಹಾಗೂ ಅತ್ಯಂತ ಪ್ರಾಮಾಣಿಕ ಅಧಿಕಾರಿ ಸಂತೋಷ್ ಹೆಗ್ಡೆ ಅವರ ಉಪಸ್ಥಿತಿಯನ್ನು ಗೌರವಿಸಿ ಹಾಗೂ ಚಲುವರಾಯಸ್ವಾಮಿ ಅವರಿಗೆ ಅಭಿನಂದಿಸಲು ಪಕ್ಷಾತೀತವಾಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದೇನೆ. ಅತ್ಯಂತ ಜನಪ್ರಿಯತೆಗಳಿಸಿರುವ ನನ್ನ ಸ್ನೇಹಿತ ಚಲುವರಾಯಸ್ವಾಮಿ ಅವರು ಕೃಷಿ ಕ್ಷೇತ್ರಕ್ಕೆ ಕೊಡುಗೆ ನೀಡುವ ಉದ್ದೇಶದಿಂದಲೇ ಕೃಷಿ ವಿವಿ ತರಲು ಶ್ರಮಿಸಿರುವ ವ್ಯಕ್ತಿಯನ್ನು ಗೌರವಿಸುವುದು ಉತ್ತಮ ಕೆಲಸ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರಿಗೆ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಮತ್ತು ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗ್ಡೆ ಬೆಳ್ಳಿ ಕಿರೀಟ ಧಾರಣೆ ಮಾಡಿ ಅಭಿನಂದಿಸಿದರು. ಆದಿಚುಂಚನಗಿರಿ ಕೊಮ್ಮೇರಹಳ್ಳಿ ಶಾಖಾ ಮಠದ ಪುರುಷೋತ್ತಮಾನಂದನಾಥ ಸ್ವಾಮೀಜಿ, ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಜಿ.ಪಂ ಸಿಇಒ ಕೆ.ಆರ್.ನಂದಿನಿ, ಟ್ರಸ್ಟ್‌ನ ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್ ಇತರರಿದ್ದರು. ಇದೇ ವೇಳೆ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.