ಮಂಡ್ಯ: ಸರ್ವ ಜನಾಂಗಕ್ಕೂ ಶಿಕ್ಷಣ ದೊರೆಯುವಂತೆ ಮಾಡಿ, ಕೆಳವರ್ಗದವರನ್ನು ಮೇಲೆತ್ತಿ ಉದ್ಯೋಗ ದೊರಕಿಸಿಕೊಟ್ಟ ನಾಲ್ವಡಿ ಕೃಷ್ಣರಾಜ ಒಡೆಯರ್ ಬದುಕನ್ನು ಕಟ್ಟಿಕೊಟ್ಟ ಮಹನೀಯ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಡಾ.ಕೃಷ್ಣೇಗೌಡ ಹುಸ್ಕೂರು ಅಭಿಪ್ರಾಯಪಟ್ಟರು.
ತಾಲೂಕಿನ ಇಂಡುವಾಳು ಗ್ರಾಮದ ಮೆಟ್ರಿಕ್ ನಂತರದ ಬಾಲಕರ ವೃತ್ತಿಪರ ವಸತಿ ನಿಲಯದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನಿಂದ ಹಮ್ಮಿಕೊಂಡಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ನಾಡಿಗೆ ಮೈಸೂರು ವಿಶ್ವವಿದ್ಯಾನಿಲಯ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಕನ್ನಡ ಸಾಹಿತ್ಯ ಪರಿಷತ್ ಸ್ಥಾಪಿಸಿದರು. ಪ್ರಮುಖವಾಗಿ ಜನರು ಬದುಕು ಕಟ್ಟಿಕೊಳ್ಳಲು ನೆರವಾದವರು. ಶಿವನಸಮುದ್ರದಲ್ಲಿ ವಿದ್ಯುತ್ ಉತ್ಪಾದನಾ ಕೇಂದ್ರ ಸ್ಥಾಪಿಸಿ ಬೆಳಕು ನೀಡಿದವರು. ಹೀಗಾಗಿ ಅವರು ’ಕೃಷ್ಣರಾಜ ಭೂಪ ಮನೆ ಮನೆ ದೀಪ’ ಎಂಬ ಅನ್ವರ್ಥಕ ನಾಮವನ್ನು ಪಡೆದಿದ್ದಾರೆ ಎಂದರು.
ನಾಲ್ವಡಿ ಅವರು ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್ ಅವರಂತೆ ಪ್ರಾತಃಸ್ಮರಣೀಯ ಸ್ಥಾನದಲ್ಲಿ ನಿಲ್ಲುವವರಾಗಿದ್ದಾರೆ. ವಿದ್ಯಾರ್ಥಿಗಳು ಇವರ ಜೀವನದ ಬಗ್ಗೆ ಅಧ್ಯಯನ ನಡೆಸಿ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಗಾಂಧೀಜಿ ಅವರು ಶ್ರವಣಕುಮಾರನ ಕಥೆ ಮತ್ತು ಹರಿಶ್ಚಂದ್ರ ನಾಟಕ ನೋಡಿದ ಪರಿಣಾಮ ಅವರ ಜೀವನದಲ್ಲಿ ಮಹತ್ತರ ಬದಲಾವಣೆಯಾಗಿ ಗಾಂಧೀಜಿ ’ಮಹಾತ್ಮಗಾಂಧಿ’ ಯಾದರು. ಆದರೆ ನಾವು ಇಂದು ಬೇರೆ ವಿಷಯಗಳಲ್ಲಿ ಸ್ಮಾರ್ಟ್ ಆಗುತ್ತಿದ್ದರೂ ಜ್ಞಾನ, ನಡವಳಿಕೆಯಿಂದ ದೂರವಾಗುತ್ತಿರುವುದು ವಿಷಾಧನೀಯ ಎಂದರು.
ಮಂಡ್ಯ ವಿವಿ ಕನ್ನಡ ವಿಭಾಗದ ಸಹಪ್ರಾಧ್ಯಾಪಕ ಕೆ.ಪಿ.ಲೋಕೇಶ್ ಕೆರಗೋಡು ನಾಲ್ವಡಿ ಅವರ ಬಗ್ಗೆ ಉಪನ್ಯಾಸ ನೀಡಿದರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ತಾಲೂಕು ಕಲ್ಯಾಣಧಿಕಾರಿ ಎಂ.ಟಿ.ಶ್ರೀನಿವಾಸ್ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಚಂದ್ರಲಿಂಗು ಗಾಣದಾಳು, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಧನಂಜಯ ದರಸಗುಪ್ಪೆ, ಕೋಶಾಧ್ಯಕ್ಷ ಬಿ.ಎಂ.ಅಪ್ಪಾಜಪ್ಪ, ಸಂಘಟನಾ ಕಾರ್ಯದರ್ಶಿ ಎಂ.ಸಿ.ಭಾಸ್ಕರ್, ಮಹದೇವಸ್ವಾಮಿ ಗಾಮನಹಳ್ಳಿ, ನಿಲಯ ಪಾಲಕ ಬಿ.ಎಸ್.ಮಂಜುನಾಥ್, ಚಿಕ್ಕತಿಮ್ಮಯ್ಯ ಇತರರಿದ್ದರು.
ಇದೇ ವೇಳೆ ಇತ್ತೀಚೆಗೆ ಪಿ.ಎಚ್‌ಡಿ ಪದವಿ ಪಡೆದ ವಿ.ಸಿ ಫಾರಂ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಡಾ.ಎ.ಆರ್.ರಾಮಯ್ಯ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.