ದಾವಣಗೆರೆ: ಮೈಸೂರು ಸಂಸ್ಥಾನದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವಧಿ ಸುವರ್ಣ ಯುಗವಾಗಿತ್ತು ಎಂದು ಎಂ.ಎಂ. ಶಿಕ್ಷಣ ಮಹಾವಿದ್ಯಾಲಯದ ವಿಶ್ರಾಂತ ಪ್ರಾಚಾರ್ಯ ಪ್ರೊ.ವೈ.ಎಂ. ವಿಠ್ಠಲರಾವ್ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದಿಂದ ಇಲ್ಲಿನ ಕುವೆಂಪು ಕನ್ನಡ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 139ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ಪ್ರಬುದ್ಧತೆಯ ರಾಜರಲ್ಲಿ ಒಬ್ಬರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್, ರಾಜ್ಯ ವಿಸ್ತರಣೆಗಾಗಿ ಇತರೆ ಸಂಸ್ಥಾನದ ಮೇಲೆ ಯುದ್ಧ ಸಾರಲಿಲ್ಲ.
ಆಡಳಿತ ಸುಧಾರಣೆಗೆ ಕ್ರಮ ವಹಿಸಿದರು. ಈ ಕಾರಣಕ್ಕೆ ಅವರದು ಸುವರ್ಣ ಯುಗವಾಗಿ ಅವರು ಜನಪ್ರಿಯರಾದರು ಎಂದು ಬಣ್ಣಿಸಿದರು.
ರಾಜಕೀಯ ರಂಗದಲ್ಲಿ ಹೆಚ್ಚು ಅಭಿವೃದ್ಧಿ
ಅವರ ಅವಧಿಯಲ್ಲಿ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ರಂಗದಲ್ಲಿ ಹೆಚ್ಚು ಅಭಿವೃದ್ಧಿ ಸಾಧಿಸಲಾಯಿತು.
800 ಶಿಕ್ಷಣ ಸಂಸ್ಥೆ ಸ್ಥಾಪಿಸಿದ ಅವರು, ಕನ್ನಂಬಾಡಿ ಅಣೆಕಟ್ಟಿಗೂ ಪೂರ್ವದಲ್ಲೇ ಕಾವೇರಿ ನದಿಗೆ ಕಾಲುವೆ ನಿರ್ಮಿಸಿದರು.
ನೀರಾವರಿ ಸೌಲಭ್ಯ ಕಲ್ಪಿಸಿದ್ದರು. ಏಷ್ಯಾ ಖಂಡದಲ್ಲೇ ಮೊಟ್ಟಮೊದಲ ಬಾರಿಗೆ ಬೆಂಗಳೂರಿಗೆ ಬೀದಿದೀಪ ಪರಿಚಯಿಸಿದರು.
ಶಿವನಸಮುದ್ರದಲ್ಲಿ ಜಲವಿದ್ಯುತ್ ತಯಾರಿಗೆ ಪ್ರಯತ್ನಿಸಿದ್ದರು ಎಂದು ವಿವರಿಸಿದರು.
ಮೈಸೂರು ವಿವಿ ಸ್ಥಾಪನೆಗಾಗಿ 800 ಎಕರೆ, ಇಂಜಿನಿಯರಿಂಗ್ ಇನ್ಸ್‌ಟಿಟ್ಯೂಟ್ ಆಫ್ ಸೈನ್ಸ್ ತೆರೆಯಲು 371 ಎಕರೆ ಭೂಮಿ ನೀಡಿದ್ದರು.
ರಾಜಕೀಯವಾಗಿ ಪ್ರಜಾಸತ್ತಾತ್ಮಕ ವೇದಿಕೆ ರಚಿಸಿದರು. ಹಿಂದುಳಿದ ವರ್ಗಗಳ ಸಬಲೀಕರಣಕ್ಕಾಗಿ ಕೂಟ ಸ್ಥಾಪಿಸಿ ಸಾಮಾಜಿಕ ಬದಲಾವಣೆಗೂ ಯತ್ನಿಸಿದರು ಎಂದರು.
ಮೈಸೂರಲ್ಲಿ ಪೇಪರ್ ಮಿಲ್, ಬಣ್ಣದ ಕಾರ್ಖಾನೆ
ಮಂಗಳೂರಲ್ಲಿ ಚಿನ್ನ, ಸಿಮೆಂಟ್ ಕಾರ್ಖಾನೆ, ಮೈಸೂರಲ್ಲಿ ಪೇಪರ್ ಮಿಲ್, ಬಣ್ಣದ ಕಾರ್ಖಾನೆ ಆರಂಭಿಸಿದರು. ಚಿಕ್ಕಬಳ್ಳಾಪುರದಿಂದ ಅರಸೀಕೆರೆವರೆಗೆ ರೈಲುಮಾರ್ಗ ನಿರ್ಮಿಸಿದರು.
ಗ್ರಾಮ ಪಂಚಾಯ್ತಿಗಳನ್ನು ರಚಿಸಿ ಕಾಯ್ದೆ ಜಾರಿ ಮೂಲಕ ಗ್ರಾಮಗಳ ಅಭಿವೃದ್ಧಿಗೆ ಯತ್ನಿಸಿದರು. ಗಾಂಧೀಜಿ ಕೂಡ ಅವರಿಗೆ ರಾಜರ್ಷಿ ಬಿರುದು ನೀಡಿ ಗೌರವಿಸಿದ್ದರು ಎಂದರು.
ಕಸಾಪ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸಿ.ಜಿ. ಜಗದೀಶ್ ಕೂಲಂಬಿ ಮಾತನಾಡಿ, ನಾಲ್ವಡಿ ಕೃಷ್ಣರಾಜ ಒಡೆಯರ್ 1915ರಲ್ಲಿ ಸ್ಥಾಪಿಸಿದ ಕನ್ನಡ ಸಾಹಿತ್ಯ ಪರಿಷತ್ತು ಅವರ ದೂರದೃಷ್ಟಿತ್ವಕ್ಕೆ ಸಾಕ್ಷಿ.
ಕನ್ನಡಿಗರನ್ನು ಒಂದುಗೂಡಿಸಿ ಆತ್ಮಸ್ಥೈರ್ಯ ಬೆಳೆಸಿದರು. ನಾಡು ನುಡಿ ರಕ್ಷಣೆ ವಿಚಾರದಲ್ಲಿ ಈ ಸಂಸ್ಥೆ ಇಂದಿಗೂ ಪ್ರಸ್ತುತವಾಗಿದೆ ಎಂದರು.
ನೀರಾವರಿಗೆ ಗಮನ
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ದಾವಣಗೆರೆ ವಿವಿ ಸಂಶೋಧನಾ ಮಾರ್ಗದರ್ಶಕ ಡಾ.ಎಂ.ಎಂ. ಪಟ್ಟಣಶೆಟ್ಟಿ, ಹಲವು ಮೀಸಲು ಜಾರಿಗೆ ತಂದ ನಾಲ್ವಡಿ ಕೃಷ್ಣರಾಜರು ಚಿಕ್ಕಜಾಜೂರು- ಚಿತ್ರದುರ್ಗ ರೈಲು ಯೋಜನೆ ರೂಪಿಸಿದರು.
ವಾಣಿವಿಲಾಸ ಸಾಗರ ಬಳಿ ನೀರಾವರಿಗೆ ಗಮನ ನೀಡಿದರು. ದೇವದಾಸಿ ಪದ್ಧತಿ ನಿರ್ಮೂಲನೆಗೊಳಿಸಿ ಸಾಮಾಜಿಕ ಕೊಡುಗೆ ನೀಡಿದರು ಎಂದು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಕಸಾಪ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ, ಗೌರವ ಕಾರ್ಯದರ್ಶಿ ಬಿ. ದಿಳ್ಯೆಪ್ಪ, ರೇವಣಸಿದ್ದಪ್ಪ ಅಂಗಡಿ, ತಾಲೂಕು ಅಧ್ಯಕ್ಷೆ ಸುಮತಿ ಜಯಪ್ಪ, ವಿನೂತನ ಮಹಿಳಾ ಸಮಾಜದ ಅಧ್ಯಕ್ಷೆ ಚಂದ್ರಿಕಾ ಮಂಜುನಾಥ್ ಇದ್ದರು.