ಮಂಗಳೂರು : ದೇಶದಲ್ಲಿ ಗ್ರಾಮ ಪಂಚಾಯಿತಿ ಸಹಿತ ಸ್ಥಳೀಯಾಡಳಿತ ಸಂಸ್ಥೆಗಳ ಬಲವರ್ಧನೆಗೆ ನರೇಂದ್ರ ಮೋದಿ ಅವರ ನಾಯಕತ್ವದ ಕೇಂದ್ರದ ಬಿಜೆಪಿ ಸರ್ಕಾರ ಕಾರಣ ಎಂದು ಮಾಜಿ ಸಂಸದ ನಳಿನ್‌ಕುಮಾರ್ ಕಟೀಲ್ ಹೇಳಿದರು.
ದ.ಕ. ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ ಗ್ರಾಮ ಪಂಚಾಯಿತಿಗಳಿಗೆ ಕೇಂದ್ರದಿಂದ ನೇರವಾಗಿ ಅನುದಾನ ಬಿಡುಗಡೆಯಾಗುತ್ತಿದೆ. ನರೇಗಾ, ಸ್ವರ್ಣ ಗ್ರಾಮ ಯೋಜನೆ , ಪಂಚಾಯತ್ ಸದಸ್ಯರಿಗೆ ಗೌರವಧನ ಬಿಜೆಪಿ ಸರ್ಕಾರಗಳ ಕೊಡುಗೆಯಾಗಿದೆ ಎಂದರು.
ದ.ಕ.ಸ್ಥಳೀಯಾಡಳಿತ ಸಂಸ್ಥೆಯನ್ನು ಪ್ರತಿನಿಧಿಸುತ್ತಿದ್ದ ಕೋಟ ಶ್ರೀನಿವಾಸ ಪೂಜಾರಿ ಅವರು ಪಂಚಾಯತ್ ರಾಜ್ಯ ವ್ಯವಸ್ಥೆಯ ಬಲವರ್ಧನೆಗೆ ಶ್ರಮಿಸಿದವರು. ಸಚಿವರಾಗಿಯೂ ರಾಜ್ಯದ ಅಭಿವೃದ್ಧಿಗೆ ಕೊಡುಗೆ ನೀಡಿದವರು. ಅವರು ಈಗ ಸಂಸದರಾದ ಹಿನ್ನೆಲೆಯಲ್ಲಿ ತೆರವಾದ ಸ್ಥಾನಕ್ಕೆ ನಡೆಯುವ ಉಪ ಚುನಾವಣೆಯಲ್ಲಿ ಯುವ ನಾಯಕ ಕಿಶೋರ್ ಕುಮಾರ್ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ವಿದ್ಯಾರ್ಥಿ ನಾಯಕನಾಗಿ ರಾಜಕೀಯ ಪ್ರವೇಶಿಸಿದ ಕಿಶೋರ್ ಅತ್ಯುತ್ತಮ ಸಂಘಟಕ ಹಾಗೂ ಮಾತುಗಾರ. ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಸ್ಥಾನವನ್ನು ತುಂಬುವ ಎಲ್ಲ ಸಾಮರ್ಥ್ಯ ಅವರಿಗಿದೆ. ಅತ್ಯಧಿಕ ಮತಗಳಿಂದ ಅವರನ್ನು ಆಯ್ಕೆ ಮಾಡುವಂತೆ ಮತದಾರರನ್ನು ವಿನಂತಿಸುವುದಾಗಿ ನಳಿನ್‌ಕುಮಾರ್ ಹೇಳಿದರು.
ರಾಜ್ಯದಲ್ಲಿ ಸಿದ್ದರಾಮಯ್ಯರ ನೇತೃತ್ವದ ಸರ್ಕಾರ ಹಗರಣಗಳ ಸರ್ಕಾರವಾಗಿದೆ. ಯಾವುದೇ ಅಭಿವೃದ್ಧಿ ಯೋಜನೆಗಳಿಗೆ ಹಣ ಬಿಡುಗಡೆ ಆಗುತ್ತಿಲ್ಲ. ಶಾಸಕರ ನಿಧಿಯ ಯೋಜನೆಗಳಿಗೂ ಅನುದಾನ ಬಿಡುಗಡೆ ಆಗಿಲ್ಲ.ಹಿಂದಿನ ಯಡಿಯೂರಪ್ಪ, ಬೊಮ್ಮಾಯಿ ನೇತೃತ್ವದಲ್ಲಿ ಜಿಲ್ಲೆಗೆ ಕೋಟ್ಯಾಂತರ ರೂಪಾಯಿ ಅನುದಾನ ಬಿಡುಗಡೆಯಾಗಿದೆ. ಈಗ ಭ್ರಷ್ಟಾಚಾರ ಮಿತಿ ಮೀರಿದೆ. ರೈತರ ಆತ್ಮಹತ್ಯೆ ಹೆಚ್ಚಾಗಿದೆ.
.ಮುಖ್ಯ ಮಂತ್ರಿಯವರ ಮೇಲೆ ಎಫ್‌ಐಆರ್ ದಾಖಲಾದರು ಅವರು ರಾಜೀನಾಮೆ ಕೊಟ್ಟಿಲ್ಲ.ಅವರು ಸಿಎಂ ಸ್ಥಾನದಲ್ಲಿ ಮುಂದುವರಿಯುವ ನೈತಿಕತೆಯನ್ನು ಕಳೆದುಕೊಂಡಿದ್ದಾರೆ ಎಂದರು.
ನಿಮ್ಮ ಮುಂದಿನ ರಾಜಕೀಯ ಭವಿಷ್ಯ ಏನು ಎನ್ನುವ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ ಅವರು ಪಕ್ಷದ ಕಾರ್ಯಕರ್ತನಾಗಿ ಇರುತ್ತೇನೆ. ನಾನು ವಿಧಾನ ಪರಿಷತ್ ಅಭ್ಯರ್ಥಿಯ ಆಕಾಂಕ್ಷಿಯಾಗಿರಲಿಲ್ಲ . ಪಕ್ಷ ನನಗೆ ಮೂರು ಬಾರಿ ಸಂಸದನಾಗುವ, ರಾಜ್ಯಾಧ್ಯಕ್ಷ ನಾಗುವ ಅವಕಾಶ ನೀಡಿದೆ. ನಾನು ಪಕ್ಷಕ್ಕೆ ಋಣಿಯಾಗಿದ್ದೇನೆ ಮುಂದೆಯೂ ಪಕ್ಷ ಸಂಘಟನೆಯ ಕೆಲಸ ಮಾಡುತ್ತೇನೆ ಎಂದರು.
ವಿಧಾನ ಪರಿಷತ್ ಅಭ್ಯರ್ಥಿ ಕಿಶೋರ್ ಕುಮಾರ್ ಪುತ್ತೂರು, ದ.ಕ.ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ, ಪ್ರಧಾನ ಕಾರ್ಯದರ್ಶಿಪ್ರೇಮಾನಂದ ಶೆಟ್ಟಿ, ಉಪಾಧ್ಯಕ್ಷ ರಾಕೇಶ್ ರೈ ಕೆಡೆಂಜಿಮ , ಜಿಲ್ಲಾ ವಕ್ತಾರ ರಾಜಗೋಪಾಲ ರೈ, ಕೋಶಾಧಿಕಾರಿ ಸಂಜಯ ಪ್ರಭು, ವಸಂತ ಪೂಜಾರಿ ಉಪಸ್ಥಿತರಿದ್ದರು.