ಜಿಲ್ಲೆ

ರಾಜ್ಯದಲ್ಲಿನ್ನು ಕಾಂಗ್ರೆಸ್‌ಗೆ ಅಧಿಕಾರ ಸಿಗದು, ನಳಿನ್‌ಕುಮಾರ್ ಕಟೀಲು ಹೇಳಿಕೆ

Dakshina Kannada

ಮಂಗಳೂರು: ಉಪ ಚುನಾವಣೆ ಹಾಗೂ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯ ದಾಖಲಿಸಿದ್ದು, ಇದು ಸಿಎಂ ಯಡಿಯೂರಪ್ಪ ಆಡಳಿತಕ್ಕೆ ಸಿಕ್ಕ ತೀರ್ಪು. ಕಾಂಗ್ರೆಸ್‌ನ ಕಪಟ ನಾಟಕ ಜನತೆಗೆ ಗೊತ್ತಾಗಿದ್ದು, ಮುಂದಿನ ಹತ್ತಾರು ವರ್ಷ ಅದಕ್ಕೆ ಅಧಿಕಾರ ಸಿಗುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್‌ಕುಮಾರ್ ಕಟೀಲು ಹೇಳಿದ್ದಾರೆ.

ಮೋದಿ ಅಲೆ ಎಲ್ಲಿದೆ ಎಂದು ಪ್ರಶ್ನಿಸಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಸಹಿತ ವಿಪಕ್ಷಗಳಿಗೆ ಈ ಚುನಾವಣೆ ಫಲಿತಾಂಶವೇ ಉತ್ತರ ನೀಡಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಗೂಡು ಸೇರಿದ ಹುಲಿಯಾ: ಶಿರಾದಲ್ಲಿ ಡಿಕೆಶಿ ಹಾಗೂ ಆರ್‌ಆರ್ ನಗರದಲ್ಲಿ ಸಿದ್ದರಾಮಯ್ಯ ತಮ್ಮದೇ ಅಭ್ಯರ್ಥಿ ಸೋಲಿಗೆ ಕಾರಣರಾಗಿದ್ದಾರೆ. ಅವರ ಒಡಂಬಡಿಕೆ ಬಿಜೆಪಿ ಗೆಲುವಿಗೆ ನೆರವಾಗಿದೆ. ಈ ಚುನಾವಣೆಯಲ್ಲಿ ಬಂಡೆ ಪುಡಿಯಾಗಿದ್ದು, ಹುಲಿಯಾ ಗೂಡು ಸೇರಿದೆ. ಚಾಮುಂಡೇಶ್ವರಿ ಬಳಿಕ ಶಿರಾ, ಆರ್‌ಆರ್ ನಗರದ ಜನರೂ ಸಿದ್ದರಾಮಯ್ಯರನ್ನು ತಿರಸ್ಕರಿಸಿದ್ದು, ಇನ್ನು ಬಾದಾಮಿಯಿಂದಲೂ ಹೊರಬೀಳಲಿದ್ದಾರೆ. ಅವರು ರಾಜೀನಾಮೆ ನೀಡಲಿ ಎಂದು ಒತ್ತಾಯಿಸಿದರು.

ಸಿದ್ದರಾಮಯ್ಯ ಹಗಲುಗನಸು ಕಾಣುತ್ತಿರುವಂತೆ ಸಿಎಂ ಬದಲಾವಣೆ ವಿಚಾರ ಬಿಜೆಪಿಯಲ್ಲಿ ಚರ್ಚೆಯೇ ಆಗಿಲ್ಲ. ವಾಸ್ತವದಲ್ಲಿ ಸಿಎಂ ಸ್ಥಾನಕ್ಕೆ ಕಾಂಗ್ರೆಸ್‌ನಲ್ಲಿ ಸಂಗೀತ ಕುರ್ಚಿ ಸ್ಪರ್ಧೆ ನಡೆದಿದ್ದು , ಡಿಕೆಶಿಯ ಟವೆಲ್ ಎಳೆಯಲು ಸಿದ್ದರಾಮಯ್ಯ ಕಾಯುತ್ತಿದ್ದಾರೆ ಎಂದು ತಿರುಗೇಟು ನೀಡಿದರು.

ದ.ಕ ಜಿಲ್ಲಾ ಅಧ್ಯಕ್ಷ ಸುದರ್ಶನ ಮೂಡುಬಿದಿರೆ, ವಕ್ತಾರರಾದ ರವಿಶಂಕರ ಮಿಜಾರ್, ಜಗದೀಶ್ ಶೇಣವ ಉಪಸ್ಥಿತರಿದ್ದರು.

ವಾರದಲ್ಲಿ ಅಭ್ಯರ್ಥಿ ಆಯ್ಕೆ: ತೆರವಾಗಿರುವ ರಾಜ್ಯಸಭಾ ಸ್ಥಾನಕ್ಕೆ ವಾರದಲ್ಲಿ ಅಭ್ಯರ್ಥಿ ಆಯ್ಕೆ ನಡೆಯಲಿದೆ. ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮುಖ್ಯಮಂತ್ರಿ ನಿರ್ಧರಿಸುತ್ತಾರೆ. ಅದು ಅವರ ವಿವೇಚನೆಯ ವಿಚಾರ. ಪಕ್ಷದ ಪಾತ್ರ ಇಲ್ಲ ಎಂದು ನಳಿನ್ ಹೇಳಿದರು.

ಟೀಂ ವರ್ಕ್‌ನಿಂದ ಗೆಲುವು: ಬಿಜೆಪಿ ಗೆಲುವಿಗೆ ಟೀಂ ವರ್ಕ್ ಕಾರಣ. ಕಾಂಗ್ರೆಸ್, ಜೆಡಿಎಸ್ ಪ್ರಾಬಲ್ಯವಿದ್ದ ಶಿರಾದಲ್ಲಿ ಬಿಜೆಪಿ 3 ತಿಂಗಳ ಮೊದಲೇ ಸಂಘಟನೆ ಕಾರ್ಯ ಆರಂಭಿಸಿತ್ತು. ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆಗೆ ಕಾಂಗ್ರೆಸ್ ಒಳಜಗಳ ಕಾರಣ ಎಂದು ಪೊಲೀಸ್ ವರದಿ ಹೇಳಿದೆ. ಇದನ್ನು ಗಮನಿಸಿದ ಜನತೆ ತಕ್ಕ ಪಾಠ ಕಲಿಸಿದ್ದಾರೆ ಎಂದು ಹೇಳಿದರು.

ಎಸ್‌ಡಿಪಿಐ ಕಾಂಗ್ರೆಸ್ ಒಪ್ಪಂದ: ಎಸ್‌ಡಿಪಿಐ ಜತೆ ಒಪ್ಪಂದ ಇಲ್ಲ ಎಂದು ಕಾಂಗ್ರೆಸ್ ಮುಖಂಡ ದಿನೇಶ್ ಗುಂಡೂರಾವ್ ಹೇಳಿದ್ದರು. ಈಗ ಬಂಟ್ವಾಳ ಪುರಸಭೆಯಲ್ಲಿ ಮೈತ್ರಿ ಸಾಧಿಸಿ ಅಧಿಕಾರ ಹಿಡಿದಿದೆ. ರಾತ್ರೋರಾತ್ರಿ ರಹಸ್ಯವಾಗಿ ಸಭೆ ನಡೆಸಿ ಅಧಿಕಾರಕ್ಕೆ ಕೈಜೋಡಿಸಲಾಗಿದೆ ಎಂದು ನಳಿನ್ ಆರೋಪಿಸಿದರು.