ರಾಯಚೂರು: ಬಿಜೆಪಿಯ ಯಾವುದೇ ಜನಪರ ಕಾರ್ಯಕ್ರಮ, ಕಾಯ್ದೆ ಎಲ್ಲವನ್ನೂ ವಿರೋಧಿಸಬೇಕು ಎಂಬ ಕಾರಣಕ್ಕೆ ಕಾಂಗ್ರೆಸ್ನವರು ವಿರೋಧಿಸುತ್ತಿದ್ದಾರೆ. ಅವರ ಬೌದ್ಧಿಕ ಮಟ್ಟ ಕುಸಿತವಾಗಿದೆ ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ಸುದ್ದಿಗಾರರ ಜತೆಗೆ ಗುರುವಾರ ಮಾತನಾಡಿದ ಅವರು, ಮಹದಾಯಿ ಯೋಜನೆ ಕುರಿತಾಗಿ ಸುಪ್ರೀಂ ಕೋರ್ಟ್ ತೀರ್ಮಾನವನ್ನು ಸ್ವಾಗತಿಸುತ್ತೇವೆ. ಆ ಬಗ್ಗೆ ಮುಖ್ಯಮಂತ್ರಿಯವರೇ ಸೂಕ್ತ ತೀರ್ಮಾನವನ್ನೂ ತೆಗೆದುಕೊಳ್ಳುತ್ತಾರೆ, ಅಲ್ಲದೆ, ಕಲ್ಯಾಣ ಕರ್ನಾಟಕ್ಕೆ ಸಚಿವ ಸ್ಥಾನ ನೀಡುವುದು ಸೇರಿ ಯಾವುದೇ ಪ್ರದೇಶವನ್ನೂ ನಮ್ಮ ಸರ್ಕಾರ ನಿರ್ಲಕ್ಷಿಸಿಲ್ಲ. ಸಚಿವ ಸ್ಥಾನಗಳೆಲ್ಲವೂ ಭರ್ತಿಯಾಗಿಲ್ಲ. ಎಲ್ಲ ಭಾಗಕ್ಕೂ ನ್ಯಾಯ ಒದಗಿಸುತ್ತೇವೆ ಎಂದು ಹೇಳಿದರು.
ಬಿಜೆಪಿಯ ಯಾವುದೇ ಶಾಸಕರಲ್ಲಿ ಅಸಮಾಧಾನವಿಲ್ಲ. ಜಗದೀಶ ಶೆಟ್ಟರ್ ಮನೆಯಲ್ಲಿ ಶಾಸಕರು ಭೇಟಿ ಯಾಗಿ ಅಭಿವೃದ್ಧಿ ಬಗ್ಗೆ ಮಾತನಾಡಿದ್ದಾರೆ. ಅದು ಬಿಎಸ್ ವೈ ಅವರ ವಿರುದ್ಧದ ಸಭೆಯಲ್ಲ. ನಮ್ಮ ಶಾಸಕರು ಕುಮಾರಸ್ವಾಮಿ ಅವರನ್ನು ಭೇಟಿಯಾಗಿದ್ದು ಸೌಜನ್ಯ ವಾಗಿದೆ. ಅವರು ಮಾಜಿ ಮುಖ್ಯಮಂತ್ರಿಯಾಗಿದ್ದರಿಂದ ಭೇಟಿಯಾದಾಗ ಮಾತನಾಡಿರಬಹುದು. ಯಡಿಯೂರಪ್ಪ ವಿರುದ್ದ ಯಾವುದೇ ಷಡ್ಯಂತ್ರ ನಡೆದಿಲ್ಲ. ಅವರ ವಿರುದ್ದ ಯಾರು ಪತ್ರ ಬರೆದಿದ್ದಾರೆ ಎಂಬುವುದು ಗೊತ್ತಿಲ್ಲ. ಆ ಪತ್ರದಲ್ಲಿ ಆಕ್ಷೇಪರ್ಹ ಪದಗಳಿದ್ರೆ, ಪತ್ರ ಬಂದ ನಂತರ ನೋಡೋಣ ಎಂದು ಕಟೀಲ್ ವಿವರಿಸಿದರು.