ಜಿಲ್ಲೆ

ಕಾಂಗ್ರೆಸ್ ಗೋಹಂತಕರ ಪರವಾಗಿರುವ ಪಕ್ಷ: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್

Dakshina Kannada

ಮಂಗಳೂರು: ತುಷ್ಟೀಕರಣಕ್ಕಾಗಿ ಕಾಂಗ್ರೆಸ್ ಗೋಹತ್ಯೆ ನಿಷೇಧ ತಿದ್ದುಪಡಿ ವಿಧೇಯಕವನ್ನು ವಿರೋಧಿಸುತ್ತಿದೆ. ಕಾಂಗ್ರೆಸ್ ಯಾವಾಗಲೂ ಗೋಹಂತಕರ ಪರವಾಗಿರುವ ಪಕ್ಷ. ಹಾಗಾಗಿ ವಿಧೇಯಕ ವಿರೋಧಿಸುವುದರಲ್ಲಿ ವಿಶೇಷತೆ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಹೇಳಿದರು.

ವಿಧಾನಸಭೆ ಅಧಿವೇಶನದಲ್ಲಿ ಗೋಹತ್ಯೆ ನಿಷೇಧ ವಿಧೇಯಕ ಅನುಮೋದನೆ ಪಡೆದ ಹಿನ್ನೆಲೆಯಲ್ಲಿ ಗುರುವಾರ ದ.ಕ. ಜಿಲ್ಲಾ ಬಿಜೆಪಿ ಕಚೇರಿ ಆವರಣದಲ್ಲಿ ಗೋಪೂಜೆ ನೆರವೇರಿಸಿ ಸುದ್ದಿಗಾರರ ಜತೆ ಮಾತನಾಡಿ, ಕಾಂಗ್ರೆಸ್‌ಗೆ ಕೃಷಿ ಹಾಗೂ ರೈತರ ಬಗ್ಗೆ ಕಾಳಜಿ ಇಲ್ಲ. ಆದ್ದರಿಂದ ಗೋಹತ್ಯೆ ನಿಷೇಧವನ್ನು ವಿರೋಧಿಸುತ್ತಿದೆ. ಗೋಹತ್ಯೆ ನಿಷೇಧ ಜಾರಿಗೆ ತರುವ ಮೂಲಕ ಜನರ ಭಾವನೆಗೆ ಗೌರವ ನೀಡುವ ಕೆಲಸವನ್ನು ಬಿಜೆಪಿ ಸರ್ಕಾರ ಮಾಡುತ್ತಿದೆ ಎಂದರು.

ಗೋ ಸಂತತಿ ಉಳಿಸಲು ಈ ಮಸೂದೆ ತರಲಾಗಿದೆ. ಬಿ.ಎಸ್ ಯಡಿಯೂರಪ್ಪ ಹಿಂದೆ ಸಿಎಂ ಆಗಿದ್ದಾಗ ರೂಪಿಸಿದ ಗೋಹತ್ಯೆ ನಿಷೇಧ ತಿದ್ದುಪಡಿ ಕಾಯ್ದೆಯನ್ನು ಸಿದ್ದರಾಮಯ್ಯ ಸಿಎಂ ಆದ ಕೂಡಲೆ ತೆಗೆದು ಹಾಕಿದರು. ಆಗ ಸಚಿವ ಸಂಪುಟ ಕೂಡ ರಚನೆಯಾಗಿರಲಿಲ್ಲ. ಈಗ ಸರ್ಕಾರ ತಿದ್ದುಪಡಿ ವಿಧೇಯಕ ಮಂಡಿಸಿ ಅನುಮೋದನೆ ಪಡೆದಿದೆಯೇ ಹೊರತು ಏಕಾಏಕಿ ಜಾರಿಗೊಳಿಸಿಲ್ಲ. ಓಟ್‌ಬ್ಯಾಂಕ್‌ಗಾಗಿ ತುಷ್ಟೀಕರಣ ಮಾಡುತ್ತಿರುವ ಕಾಂಗ್ರೆಸ್ ಈಗ ಚರ್ಚೆ ಬೇಕು ಎನ್ನುತ್ತಿದೆ. ಗೋವಿನ ಕುರಿತಾದ ತನ್ನ ನಿಲುವನ್ನು ಕಾಂಗ್ರೆಸ್ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.

ಸೆಗಣಿ ನಾಟಕ: ಭಾರತೀಯ ಸಂಸ್ಕೃತಿಯಲ್ಲಿ ಗೋಮಾತೆಗೆ ವಿಶೇಷ ಸ್ಥಾನವಿದೆ. ಸಿದ್ದರಾಮಯ್ಯ ಸೆಗಣಿ ಎತ್ತಿದ್ದೇನೆ ಎಂದು ನಾಟಕ ಮಾಡುವುದರಿಂದ ಪ್ರಯೋಜನವಿಲ್ಲ. ಗೋ ಆರಾಧನೆ ಮಾಡಬೇಕು ಎಂದು ನಳಿನ್‌ಕುಮಾರ್ ಹೇಳಿದರು. ಕಾಂಗ್ರೆಸ್ ರೈತರ ಬದುಕಿನಲ್ಲಿ ಚೆಲ್ಲಾಟ ಆಡುತ್ತಿದೆ. ಈ ಹಿಂದೆ ತಲ್ವಾರ್ ಹಿಡಿದು ಗೋ ಕಳ್ಳತನ ಮಾಡಿದವರನ್ನು ಕಾಂಗ್ರೆಸ್ ಸರ್ಕಾರ ಬಂಧಿಸಿಲ್ಲ. ಹಾಗಾಗಿ ಸಿದ್ದರಾಮಯ್ಯ ಗೋಹತ್ಯೆ ನಿಷೇಧದ ಪರವಾಗಿರುತ್ತಾರೆ ಎಂಬ ನಂಬಿಕೆ ಇಲ್ಲ ಎಂದು ಹೇಳಿದರು.

ಮುಂದಿನ ಅಧಿವೇಶನದಲ್ಲಿ ಮತಾಂತರ ತಡೆ ಕಾನೂನು

ಬಿಜೆಪಿ ರಾಜ್ಯ ಕಾರ್ಯಕಾರಿಣಿಯಲ್ಲಿ ನಿರ್ಣಯಿಸಿದಂತೆ ರಾಜ್ಯದಲ್ಲಿ ಗೋಹತ್ಯೆ ನಿಷೇಧ ತಿದ್ದುಪಡಿ ಕಾನೂನು ಜಾರಿಗೆ ತರಲಾಗುತ್ತಿದೆ. ಮುಂದಿನ ಅಧಿವೇಶನದಲ್ಲಿ ಮತಾಂತರ ತಡೆ ಕಾನೂನು ಕೂಡ ಜಾರಿಗೊಳಿಸಲಾಗುವುದು. ತನ್ಮೂಲಕ ವಿಧಾನಸಭೆ ಚುನಾವಣೆ ಸಂದರ್ಭ ಜನರಿಗೆ ನೀಡಿದ ಭರವಸೆಯನ್ನು ಬಿಜೆಪಿ ಸರ್ಕಾರ ಈಡೇರಿಸಲಿದೆ ಎಂದು ನಳಿನ್‌ಕುಮಾರ್ ಹೇಳಿದರು.