ಜಿಲ್ಲೆ

ಶೇ.80 ಗ್ರಾಪಂ ಗೆಲ್ಲುವ ಗುರಿ: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು

Udupi

ಉಡುಪಿ: ಗ್ರಾಮ ಪಂಚಾಯಿತಿ ಚುನಾವಣೆಯನ್ನು ಬಿಜೆಪಿ ಸವಾಲಾಗಿ ಪರಿಗಣಿಸಿದ್ದು, ಈ ಬಾರಿ ಶೇ.80ರಷ್ಟು ಪಂಚಾಯಿತಿಗಳಲ್ಲಿ ಗೆದ್ದು ಅಧಿಕಾರ ಹಿಡಿಯಬೇಕೆಂಬ ಗುರಿ ಹೊಂದಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ತಿಳಿಸಿದರು.

ರಾಜ್ಯದ 5,808 ಗ್ರಾಪಂಗಳಲ್ಲಿ ಗೆಲುವು ದಾಖಲಿಸಬೇಕೆಂಬ ಗುರಿಯೊಂದಿಗೆ 31 ಜಿಲ್ಲೆಗಳಲ್ಲಿ ಪ್ರತಿ ಜಿಲ್ಲೆಗೆ ಎರಡರಂತೆ 62 ಗ್ರಾಮ ಸ್ವರಾಜ್ಯ ಸಮಾವೇಶ ನಡೆಸಲಾಗುತ್ತಿದೆ. ಚುನಾವಣೆ ಪೂರ್ವ ತಯಾರಿ ಹಿನ್ನೆಲೆಯಲ್ಲಿ ತಂಡಗಳನ್ನು ರಚಿಸಲಾಗಿದೆ. ನಮ್ಮ ತಂಡದಲ್ಲಿ ನಾನು ಸೇರಿದಂತೆ ಉಪಮುಖ್ಯಮಂತ್ರಿ ಡಾ.ಅಶ್ವತ್ಥ ನಾರಾಯಣ, ಸಂಸದರಾದ ಶೋಭಾ ಕರಂದ್ಲಾಜೆ, ಮುನಿಸ್ವಾಮಿ, ಮಹಿಳಾ ಮೋರ್ಚಾ ಅಧ್ಯಕ್ಷೆ ಗೀತಾ ವಿವೇಕಾನಂದ್ ಇದ್ದಾರೆ. ಒಂದೊಂದು ತಂಡಕ್ಕೆ ಐದು ಜಿಲ್ಲೆಗಳು ಬರುತ್ತವೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಾಧನೆಗಳು, ಪಂಚಾಯಿತಿಗೆ ಕೊಟ್ಟಿರುವ ಅನುದಾನ, ಯೋಜನೆಗಳನ್ನು ಜನಸಾಮಾನ್ಯರಿಗೆ ತಿಳಿಸುತ್ತೇವೆ. ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಬಂದ ನಂತರ 14ನೇ ಹಣಕಾಸು ಆಯೋಗದ ಮೂಲಕ ಗ್ರಾಪಂಗಳಿಗೆ ನೇರವಾಗಿ ಅನುದಾನ ಕೊಡುವ ಕಾರ್ಯ ಆಗುತ್ತಿದೆ. ನರೇಗಾ ಅನುದಾನ ಕೂಡ ನೇರವಾಗಿ ಬಿಡುಗಡೆಯಾಗುತ್ತಿದೆ. ಇಂದು ಪಂಚಾಯಿತಿಗಳಿಗೆ ಕೋಟ್ಯಂತರ ರೂ. ಅನುದಾನ ಹರಿದು ಬರುತ್ತಿದ್ದು, ಗ್ರಾಪಂಗಳಿಗೆ ಹೆಚ್ಚಿನ ಶಕ್ತಿ ತುಂಬುವ ಕೆಲಸ ಮಾಡಲಾಗುತ್ತಿದೆ ಎಂದರು.

ಲವ್ ಜಿಹಾದ್ ತಡೆಗೆ ಕಾನೂನು: ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಮಾಡುವ ವಿಚಾರ ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟದ್ದು. ಲವ್ ಜಿಹಾದ್ ತಡೆಗೆ ರಾಜ್ಯದಲ್ಲೂ ಅತಿ ಶೀಘ್ರ ಕಠಿಣ ಕಾನೂನು ಜಾರಿಗೊಳಿಸಲಾಗುವುದು. ಮಂಗಳೂರು ವಿಮಾನ ನಿಲ್ದಾಣಕ್ಕೆ ಹೆಸರಿಡುವ ಕುರಿತಂತೆ ಎಲ್ಲರ ಅಭಿಪ್ರಾಯ, ಪ್ರಸ್ತಾವನೆ ಪಡೆದುಕೊಂಡು ಸೂಕ್ತ ಚರ್ಚೆ ನಡೆಸಿ ಕಾನೂನು ಪ್ರಕಾರ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ನಳಿನ್ ತಿಳಿಸಿದರು.

ಉಡುಪಿ ಅದೃಷ್ಟದ ಜಿಲ್ಲೆ

ಬಿಜೆಪಿಗೆ ಉಡುಪಿ ಅದೃಷ್ಟದ ಜಿಲ್ಲೆಯಾಗಿದ್ದು, ಈ ನಿಟ್ಟಿನಲ್ಲಿ ಗ್ರಾಮ ಸ್ವರಾಜ್ಯ ಸಮಾವೇಶಕ್ಕೆ ಇಲ್ಲಿಂದಲೇ ಚಾಲನೆ ನೀಡಲಾಗುತ್ತಿದೆ ಎಂದು ನಳಿನ್ ತಿಳಿಸಿದರು. ಉಡುಪಿ ಜಿಲ್ಲೆಯ ಎಲ್ಲ ವಿಧಾನಸಭೆ ಕ್ಷೇತ್ರಗಳನ್ನು ಬಿಜೆಪಿ ಗೆದ್ದುಕೊಂಡಿದೆ. ಅಲ್ಲದೆ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿಯೂ ಬಿಜೆಪಿಯದ್ದೇ ಆಡಳಿತ. ಜಿಲ್ಲಾ ಪಂಚಾಯಿತಿ, ತಾಪಂ ಸೇರಿದಂತೆ ಹೆಚ್ಚಿನ ಗ್ರಾಪಂಗಳಲ್ಲಿ ಬಿಜೆಪಿ ಆಡಳಿತ ಚುಕ್ಕಾಣಿ ಹಿಡಿದಿದೆ ಎಂದರು.

ಗ್ರಾಪಂಗಳಿಗೆ ಕೋಟಿ ರೂ. ಅನುದಾನ

ಉಡುಪಿ ಜಿಲ್ಲೆಯ ಕೋಟೇಶ್ವರ ಹಾಗೂ ಅಂಬಾಗಿಲಿನಲ್ಲಿ ಶುಕ್ರವಾರ ಗ್ರಾಮ ಸ್ವರಾಜ್ಯ ಸಮಾವೇಶ ನಡೆಯಿತು. ಕಾರ್ಯಕರ್ತರನ್ನು ನಾಯಕರನ್ನಾಗಿ ರೂಪಿಸುವ ಆಶಯ ಪಂಚಾಯಿತಿ ಚುನಾವಣೆಯಲ್ಲಿದ್ದು, ರಾಜ್ಯ ಸರ್ಕಾರ ಮುಂದಿನ ವರ್ಷದಿಂದ ಪ್ರತೀ ಗ್ರಾಪಂಗೆ 1 ಕೋಟಿ ರೂ. ಅನುದಾನ ನೀಡುವ ಮೂಲಕ ಗ್ರಾಮ ಸದೃಢಗೊಳಿಸಲಿದೆ. ಕೇಂದ್ರ ಸರ್ಕಾರ 2.5 ವರ್ಷದಲ್ಲಿ 80 ಕೋಟಿ ರೂ. ಅನುದಾನ ಜಿಲ್ಲೆಗೆ ನೀಡಿದೆ ಎಂದು ನಳಿನ್ ತಿಳಿಸಿದರು. ಡಿಸಿಎಂ ಅಶ್ವತ್ಥ ನಾರಾಯಣ, ಸಂಸದರಾದ ಶೋಭಾ ಕರಂದ್ಲಾಜೆ, ಮುನಿಸ್ವಾಮಿ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ, ಶಾಸಕರಾದ ಕೆ.ರಘುಪತಿ ಭಟ್, ಲಾಲಾಜಿ ಆರ್.ಮೆಂಡನ್, ಹಾಲಾಡಿ ಶ್ರೀನಿವಾಸ ಶೆಟ್ಟಿ, ಬಿ.ಎಂ.ಸುಕುಮಾರ ಶೆಟ್ಟಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಜಿಪಂ ಅಧ್ಯಕ್ಷ ದಿನಕರ ಬಾಬು, ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ ಗೀತಾ ವಿವೇಕಾನಂದ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ್ ಹೆಗ್ಡೆ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ದಿನಕರ್ ಬಾಬು, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಯಶ್‌ಪಾಲ್ ಸುವರ್ಣ ಮತ್ತಿತರರಿದ್ದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರ ನುಡಿದಂತೆ ನಡೆದಿದ್ದು, ಮತ ಕೇಳುವ ನೈತಿಕ ಸ್ಥೈರ್ಯ ಹೊಂದಿವೆ. ಮೋದಿ ನೇತೃತ್ವದ ಸರ್ಕಾರ ಬಂದ ನಂತರ ಗ್ರಾಮಗಳಿಗೆ ನೇರ ಅನುದಾನ ನೀಡುವ ಮೂಲಕ ಗ್ರಾಮಾೀಭಿವೃದ್ಧಿಗೆ ವೇಗ ನೀಡಿದೆ, ಕಾಂಗ್ರೆಸಿಗರಿಗೆ ಗಾಂಧಿ ಫೋಟೊ ಮಾತ್ರ ಬೇಕಿದೆ, ಸಿದ್ಧಾಂತವಲ್ಲ. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಶೇ.100ರಷ್ಟು ಸ್ಥಾನ ಬಿಜೆಪಿ ಪಾಲಾಗಲಿದೆ.

- ಶೋಭಾ ಕರಂದ್ಲಾಜೆ, ಸಂಸದೆ

ಕೇವಲ ಅಧಿಕಾರಕ್ಕೆ ಅಂಟಿಕೊಂಡಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಕೊಟ್ಟ ಕೊಡುಗೆ ಶೂನ್ಯ. ಆದರೆ, ಕಳೆದ ಒಂದೂವರೆ ವರ್ಷದಲ್ಲಿ ಬಿಜೆಪಿ ಸರ್ಕಾರ ಈ ಕ್ಷೇತ್ರಕ್ಕೆ ಅತಿಹೆಚ್ಚು ಅನುದಾನ ಒದಗಿಸಿದೆ. ನಗರಗಳಂತೆಯೇ ಗ್ರಾಮೀಣ ಪ್ರದೇಶಗಳು ಕೂಡ ಅಭಿವೃದ್ಧಿ ಹೊಂದಬೇಕು. ಬಿಜೆಪಿ ಸರ್ಕಾರ ಈ ಅನ್ಯಾಯವನ್ನು ಸರಿಪಡಿಸುತ್ತಿದೆ.

- ಡಾ.ಅಶ್ವತ್ಥ ನಾರಾಯಣ, ಉಪಮುಖ್ಯಮಂತ್ರಿ