ಜಿಲ್ಲೆ

ಕಡಿಮೆ ಬೆಲೆಯಲ್ಲಿ ಬಾಳೆಹಣ್ಣು ಮಾರಿದ ರೈತ


ನಾಲತವಾಡ: ಬಾಳೆ ಹಣ್ಣಿನ ಬೆಲೆ ಕುಸಿತದ ಹಿನ್ನೆಲೆಯಲ್ಲಿ ಬಾಳೆ ಹಣ್ಣು ಬೆಳೆದ ರೈತ ಸೋಮವಾರ ಸಂತೆಯಲ್ಲಿ ತಾನೇ ನೇರವಾಗಿ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡಿದ್ದಾನೆ.
ಕೋವಿಡ್ ಕಾರಣಕ್ಕೆ ಹೊರ ರಾಜ್ಯಗಳಿಗೆ ಬಾಳೆ ಕಳುಹಿಸಲು ಸಾಧ್ಯವಾಗುತ್ತಿಲ್ಲ. ಇಲ್ಲಿನ ರೈತರು ವಿಶೇಷವಾಗಿ ಹೊರ ರಾಜ್ಯದ ಮಾರುಕಟ್ಟೆಗೆ ಹೆಚ್ಚಿನ ಬಾಳೆ ಕಳಿಸುತ್ತಿದ್ದರು. ಆದರೆ, ಈಗ ಸ್ಥಳೀಯ ಮಾರುಕಟ್ಟೆಯಲ್ಲಿ ಬೆಲೆ ಕುಸಿತದಿದ್ದ ಬೇಸತ್ತು ಕೈಗೆ ಸಿಕ್ಕಷ್ಟು ಬೆಲೆ ಮಾರಿದ್ದಾನೆ.

ಗೊಬ್ಬರ, ಆಳುಗಳ ಖರ್ಚು, ಬೆಳೆ ಕೊಯ್ಲು, ಮಾರುಕಟ್ಟೆಗೆ ಸಾಗಣೆ ವೆಚ್ಚ ಸೇರಿ ಎಕರೆಗೆ 80 ಸಾವಿರ ರೂ. ಖರ್ಚು ಬರುತ್ತದೆ. ಕನಿಷ್ಠ ಪ್ರತಿ ಕೆಜಿಗೆ 6 ರೂ. ಬೆಲೆ, ಡಜನ್‌ಗೆ 25 ರೂ. ಸಿಕ್ಕರೂ ಒಂದಿಷ್ಟು ಲಾಭ ಕಂಡುಕೊಳ್ಳಬಹುದಾಗಿತ್ತು. ಆದರೆ, ಮಾರುಕಟ್ಟೆ ದರ ಕುಸಿತದಿಂದಾಗಿ ತೀವ್ರ ಹಾನಿ ಅನುಭವಿಸುವಂತಾಗಿದೆ ಎನ್ನುತ್ತಾನೆ ರೈತ.

ಪಟ್ಟಣ ಸೇರಿ ತಾಲೂಕಿನಲ್ಲಿ ಕೋಲ್ಡ್ ಸ್ಟೋರೇಜ್ ವ್ಯವಸ್ಥೆಯೂ ಇಲ್ಲವಾಗಿದೆ. ಮಹಾರಾಷ್ಟ್ರದಲ್ಲಿ ಕೋಲ್ಡ್ ಸ್ಟೋರೇಜ್ ವ್ಯವಸ್ಥೆಯಿದ್ದರೂ ಸಾಗಣೆ ವೆಚ್ಚ ಹೆಚ್ಚಾಗುತ್ತದೆಯಲ್ಲದೆ, ಅಲ್ಲಿ ಇಟ್ಟರೂ ಬೆಲೆ ಏರುತ್ತದೆ ಎಂಬ ಭರವಸೆ ಇಲ್ಲದಂತಾಗಿದೆ ಎನ್ನುತ್ತಾರೆ ರೈತರು.

ದೊಡ್ಡ ಗಾತ್ರದ ಡಜನ್ ಹಣ್ಣುಗಳು ಕೇವಲ 10 ರೂ.ಗಳಿಗೆ ಮಾರಾಟ ಮಾಡಲಾಗುತ್ತಿದೆ. ಬಾಳೆ ಬೆಳೆದ ರೈತನ ಬಾಳು ಹಾಳಾಯಿತು.
ವಿರೂಪಾಕ್ಷ ತಾಳಿಕೋಟಿ, ಬಾಳೆ ಬೆಳೆಗಾರ.