ಕೆ.ಆರ್.ನಗರ ತಾಲ್ಲೂಕು ಸಾತಿಗ್ರಾಮದಲ್ಲಿ 25 ಲಕ್ಷ ರೂ.ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಶಾಸಕ.ಡಿ.ರವಿಶಂಕರ್ ಭೂಮಿಪೂಜೆ ನೆರವೇರಿಸಿದರು. ಮುಖಂಡರಾದ ದಿವಾಕರ್, ಶ್ರೀನಿವಾಸ್, ವಿನಯ್, ಹೇಮಂತ್ ಇನ್ನಿತರರಿದ್ದರು. 
ಜಿಲ್ಲೆ

43 ಕೋಟಿ ರೂ. ವೆಚ್ಚದಲ್ಲಿ ನಾಲಾ ಆಧುನೀಕರಣ ಕಾಮಗಾರಿ

ರವಿಕುಮಾರ್ ಪಿ. ಕೆ

ಕೆ.ಆರ್.ನಗರ: ರಾಮಸಮುದ್ರ ಬಲದಂಡೆ ನಾಲೆಯ ಕೊನೆ ಹಂತದವರೆಗಿನ ಹದಿನೈದು ಗ್ರಾಮಗಳ ನೀರಾವರಿ ಅಚ್ಚುಕಟ್ಟು ಪ್ರದೇಶದಲ್ಲಿ ನಾಲೆ ನೀರು ಸರಾಗವಾಗಿ ಹರಿಯಲು 43 ಕೋಟಿ ರೂ. ವೆಚ್ಚದಲ್ಲಿ ನಾಲಾ ಆಧುನೀಕರಣ ಕಾಮಗಾರಿಗೆ ಕೈಗೊಳ್ಳಲಾಗಿದೆ ಎಂದು ಶಾಸಕ.ಡಿ.ರವಿಶಂಕರ್ ತಿಳಿಸಿದರು.

ತಾಲೂಕಿನ ಸಾತಿಗ್ರಾಮ, ಕಾಮೇನಹಳ್ಳಿ, ಬೋರೆ ಕಲ್ಲಹಳ್ಳಿ, ಸೌತನಹಳ್ಳಿ ಗ್ರಾಮಗಳಲ್ಲಿ ಸಿಮೆಂಟ್ ಕಾಂಕ್ರೀಟ್ ರಸ್ತೆ, ಚರಂಡಿ ಕಾಮಗಾರಿಗೆ ಶನಿವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಸಾತಿಗ್ರಾಮ, ಸೌತನಹಳ್ಳಿ, ಹೊಸೂರು ಕಲ್ಲಹಳ್ಳಿ, ಬೋರೆ ಕಲ್ಲಹಳ್ಳಿ, ಕಾಮೇನಹಳ್ಳಿ, ಚಾಮಲಪುರ, ತಿಪ್ಪೂರು, ದೆಗ್ಗನಹಳ್ಳಿ ಕನುಗನಹಳ್ಳಿ ಗ್ರಾಮಗಳಿಗೆ ನಾಲೆಯ ನೀರು ಸರಾಗವಾಗಿ ಹರಿಯದ ಕಾರಣದಿಂದ ನಾಲೆಗೆ ಆಧುನೀಕರಣದ ಕಾಮಗಾರಿ ಕೈಗೊಳ್ಳಲಾಗಿದ್ದು ಮುಂದಿನ ವರ್ಷದಿಂದ ಕೊನೆಯ ಹಂತದವರೆಗೆ ನೀರು ಸರಾಗವಾಗಿ ಹರಿಯಲಿದೆ. ಇದಕ್ಕಾಗಿ ಉಪ ಮುಖ್ಯಮಂತ್ರಿಗಳು ಹಾಗೂ ಜಲಸಂಪನ್ಮೂಲ ಸಚಿವ ಸಚಿವ ಡಿ.ಕೆ.ಶಿವಕುಮಾರ್ ಅವರು ಹಣ ಬಿಡುಗಡೆ ಮಾಡಿದ್ದು ಟೆಂಡರ್ ಪ್ರಕ್ರಿಯೆ ಮುಗಿದಿದ್ದು ಡಿಸೆಂಬರ್‌ನಿಂದ ಕಾಮಗಾರಿಗೆ ಆರಂಭವಾಗಲಿದೆ ಎಂದು ತಿಳಿಸಿದರು.

ಮೊದಲನೇ ವರ್ಷ ಸರ್ಕಾರ ಅನುದಾನ ಕೊಟ್ಟಿರಲಿಲ್ಲ, ಎರಡನೇ ವರ್ಷದಲ್ಲಿ ಹಂತ ಹಂತವಾಗಿ ಅನುದಾನ ಕೊಡಲಾಗುತ್ತಿದೆ. ಕಾರಣ ಇಷ್ಟೆ ಸರ್ಕಾರ ಐದು ಗ್ಯಾರಂಟಿಗಳ ಮೂಲಕವಾಗಿ ನೇರವಾಗಿ ಪ್ರತಿ ಮನೆಗೂ ತಲುಪುತ್ತಿದ್ದು ಆದ್ದರಿಂದ ಅನುದಾನ ಕೊರತೆಯಾಗಿತ್ತು ಎಂದು ತಿಳಿಸಿದರು.

25 ಲಕ್ಷ ರೂ. ವೆಚ್ಚದಲ್ಲಿ ಸಾತಿಗ್ರಾಮದ ಶನೈಶ್ಚರ ಬೀದಿಯಲ್ಲಿ ಸಿಮೆಂಟ್ ಕಾಂಕ್ರೀಟ್ ರಸ್ತೆ, ಚರಂಡಿ ಅಭಿವೃದ್ಧಿ ಕಾಮಗಾರಿ, ಎಸ್‌ಇಪಿ ಹಾಗೂ ಟಿಎಸ್‌ಪಿ ಯೋಜನೆ ಮೂಲಕ 50 ಲಕ್ಷ ರೂ.ಅನುದಾನ ನೀಡಲಾಗುತ್ತದೆ ಎಂದರಲ್ಲದೆ, ಅಂಗನವಾಡಿ ಮತ್ತು ಶಾಲೆಯ ದುರಸ್ತಿ, ಕುಡಿಯುವ ನೀರಿನ ಟ್ಯಾಂಕ್ ದುರಸ್ತಿ, ಒಂದು ಕೋಟಿ ರೂ.ಗೂ ಹೆಚ್ಚು ಅನುದಾನವನ್ನು ನಿಮ್ಮೂರಿಗೆ ನೀಡಲಾಗಿದೆ ಎಂದು ಶಾಸಕರು ತಿಳಿಸಿದರು.

ಪರಿಶಿಷ್ಟ ಜಾತಿ ಕಾಲನಿಗೆ ಅನುದಾನ ಒದಗಿಸಲಾಗುವುದು, ನಿಮ್ಮ ಗ್ರಾಮದ ಅಭಿವೃದ್ಧಿಗಾಗಿ ಹೆಚ್ಚಿನ ಒತ್ತು ನೀಡಲಾಗುವುದು ಎಂದರಲ್ಲದೆ, ಗ್ರಾಮಸ್ಥರ ಬೇಡಿಕೆಯಂತೆ ಸಾಗರಕಟ್ಟೆ ಮಾರ್ಗವಾಗಿ ಮೈಸೂರಿಗೆ ಹೆಚ್ಚು ವಾಹನಗಳು ಒಡಾಡುವುದರಿಂದ ತುರ್ತಾಗಿ ರಸ್ತೆಗೆ ಉಬ್ಬಿಗೆ ಬಣ್ಣ ಬಳಿದು ರೇಡಿಯಂ ಅಂಟಿಸಿ ಲೈಟ್ ಹಾಕಿಸಿ ಎಂದು ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಸಿದ್ದೇಶ್ವರ ಪ್ರಸಾದ್ ಅವರಿಗೆ ಸೂಚಿಸಿದರು.

ಕಾಮೇನಹಳ್ಳಿಗೆ ಭೇಟಿ: ಬಳಿಕ ಶಾಸಕ.ಡಿ.ರವಿಶಂಕರ್ ಕಾಮೇನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ 30 ಲಕ್ಷ ರೂ. ವೆಚ್ಚದ ಸಿಮೆಂಟ್ ಕಾಂಕ್ರೀಟ್ ರಸ್ತೆ ಚರಂಡಿ ಕಾಮಗಾರಿಗೆ ಚಾಲನೆ ನೀಡಿದರು. ಬಳಿಕ ಗ್ರಾಮಸ್ಥರ ಬೇಡಿಕೆಗಳನ್ನು ಈಡೇರಿಸುವುದರ ಜತೆಗೆ ಕಾಮೇನಹಳ್ಳಿ ಗ್ರಾಮಕ್ಕೆ ಬಸ್ ನಿಲ್ದಾಣ, ಅಂಬೇಡ್ಕರ್ ಭವನಕ್ಕೆ ಕಾಂಪೌಂಡ್, ಬಸವೇಶ್ವರ ದೇವಾಲಯ ಅಭಿವೃದ್ಧಿ, ಸ್ಮಶಾನ ಅಭಿವೃದ್ಧಿ, ಮಾಡಲಾಗುವುದು, ವಿದ್ಯುತ್ ಕಂಬಗಳ ಸಮಸ್ಯೆ ಇದ್ದು ಬದಲಾವಣೆ ಮಾಡಲು ಸೆಸ್ಕ್ ಎಇಇ ಅರ್ಕೇಶ್‌ಮೂರ್ತಿ ಅವರಿಗೆ ಸೂಚಿಸಿದರು.

ತಹಸೀಲ್ದಾರ್ ಜೆ.ಸುರೇಂದ್ರ ಮೂರ್ತಿ, ತಾಪಂ ಇಒ ಕುಲದೀಪ್, ಬಿಇಒ ಆರ್.ಕೃಷ್ಣಪ್ಪ, ಸಿಡಿಪಿಒ ಅಣ್ಣಯ್ಯ, ಟಿಎಸ್‌ಡಬ್ಲುೃ ಎಚ್.ಎಲ್.ಶಂಕರಮೂರ್ತಿ, ಸೆಸ್ಕ್ ಎಇಇ ಅರ್ಕೆಶ್ ಮೂರ್ತಿ, ಭೂಸೇನಾ ನಿಗಮದ ಎಇಇ ಶೋಭಾ, ಜೆಇ ಸತೀಶ್, ಜಿಪಂ ಎಇಇ ವಿನುತ್, ರಾಜ್ಯ ಕಾಂಗ್ರೆಸ್ ಪರಿಶಿಷ್ಟ ಪಂಗಡದ ಉಪಾಧ್ಯಕ್ಷ ಕಲ್ಲಹಳ್ಳಿ ಶ್ರೀನಿವಾಸ್, ತಾಲೂಕು ಯುವ ಘಟಕದ ಅಧ್ಯಕ್ಷ ಹೇಮಂತ್, ಮುಖಂಡ ಶ್ರೀನಿವಾಸ್, ದಿವಾಕರ್, ಮುಖಂಡರಾದ ವಿನಯ್, ರಾಜಣ್ಣ, ಅಶ್ವತ್ ಇನ್ನಿತರರಿದ್ದರು.