ಜಿಲ್ಲೆ

ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಜಾಗದಲ್ಲಿ ರೆಸಾರ್ಟ್ ನಿರ್ಮಾಣ: ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕ್ಕೆ ಬೆಟ್ಟೇಗೌಡ ಆಗ್ರಹ

ರಾಮನಗರ: ತಾಲೂಕಿನ ಪಾದರಹಳ್ಳಿಯಲ್ಲಿ ಸರ್ಕಾರಿ ಜಾಗಗಳ ನಕಲಿ ದಾಖಲೆ ಸೃಷ್ಟಿಸಿ ಸಾಗುವಳಿ ಜಮೀನನ್ನು ಪರಭಾರೆ ಮಾಡಿಕೊಂಡು ಅಕ್ರಮವಾಗಿ ನಿರ್ಮಿಸಿರುವ ರೆಸಾರ್ಟ್ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಕೆ.ಜಿ. ಹೊಸಹಳ್ಳಿ ಗ್ರಾಮದ ಮುಖಂಡ ಆರ್.ಬೆಟ್ಟೇಗೌಡ ಒತ್ತಾಯಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಂಗಾಮಿ ಸಾಗುವಳಿ ಚೀಟಿ ಹಾಗೂ ನಕಲಿ ಪಹಣಿಗಳನ್ನೇ ಮೂಲ ದಾಖಲೆ ಮಾಡಿಕೊಂಡ ರೆಸಾರ್ಟ್ ಮಾಲೀಕರು, ಕೆಲ ಅಧಿಕಾರಿಗಳ ಮೂಲಕ ಒಂದೇ ದಿನ ನಾಲ್ಕೈದು ಆದೇಶ ಹೊರಡಿಸಿ ಭೂಕಬಳಿಕೆ ಮಾಡಿದ್ದಾರೆ. ರೈತರಿಗೆ ಯಾವುದೇ ದಾಖಲೆಗಳಿಲ್ಲದೆ ಎರಡು ರೀತಿಯ ಹಂಗಾಮಿ ಸಾಗುವಳಿ ಚೀಟಿ ನೀಡಲಾಗಿದೆ. ಇದರಲ್ಲಿ ಯಾವುದು ನಕಲಿ ಎಂಬುದೇ ಸ್ಪಷ್ಟವಾಗುತ್ತಿಲ್ಲ.

ಅಲ್ಲದೆ, ರಾಜಸ್ವ ನಿರೀಕ್ಷಕರು ತಮ್ಮ ವರದಿಯಲ್ಲಿ ಆರ್‌ಟಿಸಿಯಲ್ಲಿ ಖಾತೆದಾರನ ಅಥವಾ ಸಾಗುವಳಿದಾರನ ಹೆಸರನ್ನು ನಮೂದಿಸಿಲ್ಲ ಎಂದು ಹೇಳಿದ್ದರು. ಆದರೂ 1983-84ರಿಂದ 1986-87ರವರೆಗೆ ನಕಲಿ ಪಹಣಿ ಸೃಷ್ಟಿಸಲಾಗಿದೆ ಎಂದು ಆರೋಪಿಸಿದರು.

2010ರ ಜನವರಿ 29ರಂದು ಸದರಿ ಜಮೀನು ಯಾವುದೇ ಉದ್ದೇಶಕ್ಕೆ ಕಾಯ್ದಿರಿಸಿಲ್ಲ ಎಂದು ತಹಸೀಲ್ದಾರ್ ವರದಿ ಸಲ್ಲಿಸಿದ್ದರು. ಆದರೆ, ಸದರಿ ಜಮೀನನ್ನು 1992ರ ಅಕ್ಟೋಬರ್ 29ರಂದು ಸೆಕ್ಷನ್ 4 ಮೀಸಲು ಅರಣ್ಯ ಪ್ರದೇಶವನ್ನಾಗಿ ರಾಜ್ಯ ಸರ್ಕಾರವು ಗೆಜೆಟ್ ನೋಟಿಫಿಕೇಷನ್ ಹೊರಡಿಸಿದೆ. ಈ ಜಮೀನಿಗೆ ಅರಣ್ಯ ಇಲಾಖೆಯಿಂದ ಯಾವುದೇ ನಿರಾಕ್ಷೇಪಣಾ ಪತ್ರ ಪಡೆಯದೆ ರೈತರಿಗೆ ಭೂ ಮಂಜೂರಾತಿ ಮಾಡಲಾಗಿದೆ ಎಂದು ದೂರಿದರು.

2010ರ ಏಪ್ರಿಲ್ 28ರಂದು ರೈತರು ಎಸ್‌ಬಿಎಮ್ ಬ್ಯಾಂಕಿಗೆ ಕಿಮ್ಮತ್ತನ್ನು ಪಾವತಿಸಿದ ದಿನದಂದೇ ತಹಸೀಲ್ದಾರ್ ಸಾಗುವಳಿ ಚೀಟಿ ನೀಡಿದ್ದಾರೆ. ಆದರೆ, 2010ರ ಮೇ 29ರಂದು ನಮೂನೆ 5ನ್ನು ರೈತರಿಂದ ಒಪ್ಪಂದ ಪತ್ರ ಬರೆಸಿಕೊಂಡಿದ್ದಾರೆ. ತಹಸೀಲ್ದಾರ್ ವಿಧಿಸಿದ ಮೂರು ಷರತ್ತುಗಳನ್ನು ಕೂಡ ಉಲ್ಲಂಘಿಸಲಾಗಿದೆ ಎಂದು ದೂರಿದರು.

ಸಾಗುವಳಿ ಚೀಟಿ ನೀಡಿದ 21 ದಿನಗಳಲ್ಲಿ 2010ರ ಜೂನ್ 19ರಂದು ಮ್ಯುಟೇಷನ್ ಆದೇಶವಾಗಿ ಶಿವಣ್ಣ, ಮಂಚಣ್ಣ ಮತ್ತು ಚಿಕ್ಕಣ್ಣ ಅವರ ಹೆಸರಿಗೆ ಪಹಣಿಯಲ್ಲಿ 2 ಎಕರೆ ಜಮೀನು ನಮೂದಿಸಲಾಗಿದೆ. 2010ರ ಮೇ 19ರಂದು ಆರ್ ಟಿಸಿ ನಮೂದಾದ 17 ದಿನದಲ್ಲಿ ಜೂನ್ 5ರಲ್ಲಿ ಪೋಡಿ ವಿಭಜನೆ ಮಾಡಿ ಹೊಸ ಸರ್ವೇ ನಂಬರ್ 647 ಮಾಡಿದ್ದಾರೆ. ಇದು ದುರಸ್ತಿ ಆದ 12 ದಿನಗಳಲ್ಲಿ 2010ರ ಜೂನ್ 17ರಂದು ರೆಸಾರ್ಟ್ ಮಾಲೀಕರಿಗೆ ಶುದ್ಧ ಕ್ರಯ ಪತ್ರ ಮಾಡಲಾಗಿದೆ. ಅಲ್ಲದೆ, 4 ಎಕರೆಯನ್ನು ಅಕ್ರಮವಾಗಿ ನೋಂದಣಿ ಮಾಡಿಸಿಕೊಡಲಾಗಿದೆ ಎಂದು ಆರೋಪಿಸಿದರು.

ರೈತರು 25 ವರ್ಷ ಸದರಿ ಜಮೀನನ್ನು ಪರಭಾರೆ ಮಾಡಬಾರದೆಂದು ಎಂಬ ಷರತ್ತು ಇದ್ದರೂ ಕೇವಲ 45 ದಿನಗಳ ಅಂತರದಲ್ಲಿ 2010ರ ಜೂನ್ 17ರಂದು ಎಸ್ .ಎನ್.ರಮೇಶ್ ಅವರಿಗೆ ಮಾರಾಟ ಮಾಡಲಾಗಿದೆ. ಜಮೀನನ್ನು ವ್ಯವಸಾಯಕ್ಕೆ ಮಾತ್ರ ಉಪಯೋಗಿಸಬೇಕಿತ್ತು. ಆದರೆ ಅಲ್ಲಿ ರೆಸಾರ್ಟ್ ನಡೆಸಲಾಗುತ್ತಿದೆ. -ಆರ್.ಬೆಟ್ಟೇಗೌಡ ಕೆ.ಜಿ.ಹೊಸಹಳ್ಳಿ ಮುಖಂಡ