ಜಿಲ್ಲೆ

ಯಾರಿಂದಲೂ ಪಾಠ ಕಲಿಯಬೇಕಿಲ್ಲ

ನಾಗಮಂಗಲ: ಕೋವಿಡ್-19 ನಿಯಂತ್ರಣಕ್ಕಾಗಿ ಸರ್ಕಾರ ಸನ್ನಿವೇಶಕ್ಕೆ ತಕ್ಕಂತೆ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ. ಜಿಲ್ಲಾಡಳಿತವೂ ಸಕಾರಾತ್ಮಕವಾಗಿ ಕರ್ತವ್ಯ ನಿರ್ವಹಿಸುತ್ತಿದೆ. ಆದ್ದರಿಂದ ಈ ವಿಷಯದಲ್ಲಿ ನಾವು ಯಾರಿಂದಲೂ ಪಾಠ ಕಲಿಯುವ ಅಗತ್ಯವಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ, ಜಿಲ್ಲೆಯ ಜೆಡಿಎಸ್ ಶಾಸಕರಿಗೆ ತಿರುಗೇಟು ನೀಡಿದರು.


ತಾಲೂಕಿನ ಸಾತೇನಹಳ್ಳಿ ಗ್ರಾಮಕ್ಕೆ ಸೋಮವಾರ ಭೇಟಿ ನೀಡಿ ಕರೊನಾ ಸೋಂಕಿನಿಂದ ಗುಣಮುಖರಾದವರ ಆರೋಗ್ಯ ವಿಚಾರಿಸಿದ ನಂತರ ಮಾತನಾಡಿದರು.


ನನಗೆ ಜವಾಬ್ದಾರಿಯಿದ್ದು, ಅದಿಲ್ಲದವರ ಬಗ್ಗೆ ಟೀಕೆ-ಟಿಪ್ಪಣಿ ಮಾಡಲು ಸಿದ್ಧನಿಲ್ಲ. ಮಾತನಾಡಿ ಅವರೇ ದೊಡ್ಡವರಾಗಲಿ. ಸಿಡಿ, ರೆಕಾರ್ಡ್ ಮಾಡಿರುವ ಬಗ್ಗೆ ನಾನು ಹೇಳಿಕೆ ನೀಡಿಲ್ಲ. ನಾವೆಲ್ಲರೂ ಒಂದೇ ಪಕ್ಷದಲ್ಲಿದ್ದವರು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಒಡನಾಟದಲ್ಲಿರುತ್ತೇನೆ ಎಂದರು.


ತಪ್ಪಿತಸ್ಥರ ವಿರುದ್ದ ಶಿಸ್ತು ಕ್ರಮ: ಪಾಂಡವಪುರ ತಾಲೂಕಿನ ಚಿನಕುರಳಿ ಗ್ರಾಮದ ಕರೊನಾ ಸೋಂಕು ವರದಿಯ ಯಡವಟ್ಟು ಕುರಿತಾಗಿ ಪ್ರತಿಕ್ರಿಯಿಸಿದ ಸಚಿವರು, ಈ ಬಗ್ಗೆ ಸಂಪೂರ್ಣ ವರದಿ ಕೊಡಲು ಸೂಚಿಸಿದ್ದೇನೆ. ಮಾಹಿತಿ ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದೆಂದರು.


ಕಂಟೇನ್ಮೆಂಟ್ ವಲಯ ತೆರವು: ಕಂಟೇನ್ಮೆಂಟ್ ವಲಯವಾಗಿದ್ದ ಸಾತೇನಹಳ್ಳಿ ಹಾಗೂ ಬಫರ್ ವಲಯವಾಗಿದ್ದ ಸುತ್ತಮುತ್ತಲ ಗ್ರಾಮಗಳಲ್ಲಿ ಅಳವಡಿಸಲಾಗಿದ್ದ ಬ್ಯಾರಿಕೇಡ್‌ಗಳನ್ನು ತೆಗೆಯುವ ಮೂಲಕ ಸಚಿವ ನಾರಾಯಣಗೌಡ ನಿರ್ಬಂಧಗಳನ್ನು ತೆರವುಗೊಳಿಸಿದರು.
ಕಂಟೇನ್ಮೆಂಟ್ ವಲಯದಲ್ಲಿ ಇದ್ದರೆಂಬ ಕಾರಣಕ್ಕೆ ಸಾತೇನಹಳ್ಳಿ ಗ್ರಾಮಸ್ಥರನ್ನು ಅಸ್ಪಶ್ಯ ಮನೋಭಾವದಿಂದ ಕಂಡರೆ ಅಂಥವರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ತಹಸೀಲ್ದಾರ್ ಕುಂಞ ಅಹಮದ್ ಎಚ್ಚರಿಕೆ ನೀಡಿದರು.


ಇದಕ್ಕೂ ಮೊದಲು ಸಚಿವ ನಾರಾಯಣಗೌಡ ಕದಬಹಳ್ಳಿ ಗ್ರಾಮದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗೆ ಭೇಟಿ ನೀಡಿ ಕ್ವಾರಂಟೈನ್‌ನಲ್ಲಿ ಇರುವವರ ಆರೋಗ್ಯ ವಿಚಾರಿಸಿದರು.
ಉಪ ವಿಭಾಗಾಧಿಕಾರಿ ಶೈಲಜಾ, ಡಿವೈಎಸ್ಪಿ ವಿಶ್ವನಾಥ್, ಸಿಪಿಐ ರಾಜೇಂದ್ರ, ಟಿಎಚ್‌ಒ ಡಾ.ಧನಂಜಯ, ತಾ.ಪಂ. ಇಒ ಅನಂತರಾಜು, ಪಿಎಸ್ಸೈ ಬಸವರಾಜು, ಪಿಡಿಒ ಶಿವಲಿಂಗೇಗೌಡ, ಗ್ರಾಮಲೆಕ್ಕಿಗ ಬಸವರಾಜು ಇದ್ದರು.