ಜಿಲ್ಲೆ

ಸ್ವರ ಮಾಂತ್ರಿಕ, ನಾಗಸ್ವರ ವಾದಕ ಬೊಗ್ರ ಸೇರಿಗಾರ ನಿಧನ

ವಿಜಯವಾಣಿ ಸುದ್ದಿಜಾಲ ಉಡುಪಿ

ಉಡುಪಿ-ಮಂಗಳೂರು ಜಿಲ್ಲೆಯಲ್ಲಿ ನಾಗಸ್ವರ ಹಾಗೂ ಸ್ಯಾಕ್ಸೋಫೋನ್​ನ ಪ್ರಸಿದ್ಧ ವಾದಕ, ಅಲೆವೂರಿನ ಸ್ವರ ಮಾಂತ್ರಿಕ ಎಂದೇ ಖ್ಯಾತರಾಗಿದ್ದ ಬೊಗ್ರ ಸೇರಿಗಾರ (94) ಅಲ್ಪಕಾಲದ ಅಸೌಖ್ಯದಿಂದ ಮೇ 8ರಂದು ಬೆಳಗ್ಗೆ ಸ್ವಗೃಹದಲ್ಲಿ ನಿಧನರಾದರು.

ಮೃತರು ಖ್ಯಾತ ನಾದಸ್ವರ ವಾದಕ ಉದಯ ಸೇರಿಗಾರ ಸೇರಿ ನಾಲ್ಕು ಪುತ್ರರು, ಮೂವರು ಪುತ್ರಿಯರನ್ನು ಅಗಲಿದ್ದಾರೆ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವಾರು ಸಂಘ-ಸಂಸ್ಥೆಗಳ ಗೌರವಾರ್ಪಣೆ, ಸನ್ಮಾನ ಹಾಗೂ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದ ಅವರು ಅಪಾರ ಶಿಷ್ಯಬಳಗವನ್ನೂ ಹೊಂದಿದ್ದರು.

ನಾಗಸ್ವರ ಕ್ಯಾಸೆಟ್​

ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಬೊಗ್ರ ಅವರ ನಾಗಸ್ವರ ವಾದನದ ಕ್ಯಾಸೆಟ್​ ಮಾಡಲಾಗಿದ್ದು, ಅಪಾರ ಜನಮೆಚ್ಚುಗೆಗೆ ಪಾತ್ರವಾಗಿದೆ. ಅವರು ನುಡಿಸುತ್ತಿದ್ದ ನಾಗಿಣಿ ಪದ ಬಹಳ ಜನಪ್ರಿಯವಾಗಿತ್ತು.

ಚಿಕ್ಕ ವಯಸ್ಸಲ್ಲೇ ನಾದಾಭ್ಯಾಸ

ಉಡುಪಿ ತಾಲೂಕಿನ ಅಚ್ಚಡದ ತುಕ್ರ ಸೇರಿಗಾರ ಹಾಗೂ ತುಂಡೆ ಸೇರಿಗಾರ ದಂಪತಿಯ ಪ್ರಥಮ ಪುತ್ರರಾಗಿ ಜನಿಸಿದರು. ಬಡತನದಿಂದಾಗಿ ಕೇವಲ 2ನೇ ತರಗತಿ ವರೆಗೆ ಮಾತ್ರ ವಿದ್ಯಾಭ್ಯಾಸ ಮಾಡಿದ್ದ ಅವರು, ಚಿಕ್ಕ ವಯಸ್ಸಿನಲ್ಲೇ ಕುಲಕಸುಬಾದ ವಾದ್ಯ ಕ್ಷೇತ್ರಕ್ಕೆ ಬಂದರು. ಉಡುಪಿಯ ಅನಂತ ಸೇರಿಗಾರ ಅವರಲ್ಲಿ ನಾಗಸ್ವರ ವಾದನಾಭ್ಯಾಸ ಮಾಡಿದರು. ಬಳಿಕ ಮೈಸೂರಿನ ಅಗ್ರಹಾರ ಕೃಷ್ಣಪ್ಪ ಅವರಲ್ಲಿ ಅಭ್ಯಾಸ ಮುಂದುವರಿಸಿ, ನೈಪುಣ್ಯತೆ ಸಾಧಿಸಿದರು.

ದೈವಸ್ಥಾನ, ಗರಡಿಗಳಲ್ಲಿ ಚಾಕರಿಕೆ

ಜೀವನದಲ್ಲಿ ಅಪಾರ ಕಷ್ಟವಿದ್ದರೂ ಯಾವುದೇ ಫಲಾಪೇಕ್ಷೆಯಿಲ್ಲದೆ ಅದೆಷ್ಟೋ ವಿದ್ಯಾರ್ಥಿಗಳಿಗೆ ವಾದನ ಕಲೆ ಕಲಿಸಿಕೊಟ್ಟಿದ್ದಾರೆ. ಉಡುಪಿ ಜಿಲ್ಲೆಯ ಹೆಸರಾಂತ ದೈವಸ್ಥಾನ ಹಾಗೂ ಹಲವಾರು ಗರಡಿಗಳಲ್ಲಿ ಚಾಕರಿ ಮಾಡುತ್ತಿದ್ದು ದೈವಸ್ಥಾನ, ದೇವಸ್ಥಾನಗಳ ಜೀಣೋರ್ದ್ಧಾರ ಸಮಯದಲ್ಲಿ ತನ್ನ ಕೈಲಾದಷ್ಟು ಧನಸಹಾಯ ಮಾಡುತ್ತಿದ್ದರು. ಯಾವುದೇ ಬಡ ಕುಟುಂಬದವರು ಕೋಲ ಅಥವಾ ದರ್ಶನ ಸೇವೆ ಮಾಡಿ ಸಂಭಾವನೆ ಕೊಡಲು ಕಷ್ಟವಿದ್ದರೆ ಚಾಕರಿಯನ್ನಷ್ಟೇ ಮಾಡಿ ಯಾವುದೇ ಸಂಭಾವನೆ ಪಡೆಯದ ಉತ್ತಮ ವ್ಯಕ್ತಿತ್ವ ಬೊಗ್ರ ಅವರದ್ದಾಗಿತ್ತು ಎಂದು ಅಖಿಲ ಭಾರತ ದೈವಾರಾಧಾಕರ ಒಕ್ಕೂಟ ಕೇಂದ್ರೀಯ ಉಡುಪಿ ಜಿಲ್ಲೆ (ರಿ.)ಯ ಅಧ್ಯಕ್ಷ ವಿನೋದ ಶೆಟ್ಟಿ ಸ್ಮರಿಸಿದ್ದಾರೆ.