ಚಿಕ್ಕಬಳ್ಳಾಪುರ: ವೃತ್ತಿಪರ ಕೌಶಲ ಅಭಿವೃದ್ಧಿಗೆ ಅಮೃತ್ ಯೋಜನೆಯಡಿ ಅಡುಗೆ ತಯಾರಿಕೆಯ ಕೆಲಸಗಾರರಿಗೆ ಗುಣಮಟ್ಟದ ತರಬೇತಿ ನೀಡಲಾಗುವುದು ಎಂದು ನಗರಸಭೆ ಅಧ್ಯಕ್ಷ ಡಿ.ಎಸ್.ಆನಂದರೆಡ್ಡಿ ಬಾಬು ಭರವಸೆ ನೀಡಿದರು.
ನಗರದ ಶ್ರೀ ವಿದ್ಯಾಗಣಪತಿ ದೇವಾಲಯದಲ್ಲಿ ಶನಿವಾರ ಶ್ರೀ ಅನ್ನಪೂಣೇಶ್ವರಿ ತಾಲೂಕು ಅಡುಗೆ ಕೆಲಸಗಾರರ ಹಾಗೂ ಸಹಾಯಕ ಕಾರ್ಮಿಕರ ಕ್ಷೇಮಾಭಿವೃದ್ಧಿ ಸೇವಾ ಟ್ರಸ್ಟ್ ಶನಿವಾರ ಹಮ್ಮಿಕೊಂಡಿದ್ದ ಅಡುಗೆ ಕಾರ್ಮಿಕರಿಗೆ ಪರವಾನಗಿ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮದುವೆ, ನಾಮಕಾರಣ, ಜಾತ್ರೆ ಸೇರಿ ಶುಭ ಸಮಾರಂಭಗಳು ಯಶಸ್ವಿಯಾಗುವಲ್ಲಿ ಅಡುಗೆ ತಯಾರಕರ ಪಾತ್ರವೂ ಸಹ ಪ್ರಮುಖವಾದುದು. ಈ ನಿಟ್ಟಿನಲ್ಲಿ ನಗರಸಭೆಯಿಂದಲೇ ಉತ್ತಮ ತರಬೇತಿ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಅಡುಗೆ ಕಾರ್ಮಿಕರು ತಪ್ಪದೇ ಪರವಾನಗಿ ಹಾಗೂ ಇ-ಶ್ರಮ್ ಕಾರ್ಡ್‌ಗೆ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಇದರಿಂದ ಸರ್ಕಾರದಿಂದ ಸಿಗುವ ಹಲವು ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಅನುಕೂಲವಾಗುತ್ತದೆ ಎಂದರು. ಅಡುಗೆ ಕಾರ್ಮಿಕರು ಆರೋಗ್ಯದ ಕಡೆಗೆ ಹೆಚ್ಚಿನ ಗಮನಹರಿಸಬೇಕು. ಕೆಲವರು ಕೆಲಸದ ಒತ್ತಡದಲ್ಲಿ ಮೈ ಮರೆತು, ಭವಿಷ್ಯದಲ್ಲಿ ತೊಂದರೆ ಅನುಭವಿಸುತ್ತಾರೆ. ಇದಕ್ಕೆ ಅವಕಾಶ ನೀಡದಿರಲು ನಿರಂತರವಾಗಿ ಆರ್ಥಿಕವಾಗಿ ಸದೃಢಗೊಂಡು ಉತ್ತಮ ಜೀವನ ನಡೆಸಬೇಕು ಎಂದು ಹೇಳಿದರು.
ಆಹಾರ ಸಂರಕ್ಷಣಾಧಿಕಾರಿ ಜಿ.ಹರೀಶ್ ಮಾತನಾಡಿ, ಕೆಲವರು ದ್ವೇಷ ಸಾಧನೆಗಾಗಿ ಅಡುಗೆಯಲ್ಲಿ ವಿಷಪ್ರಯೋಗ ಮಾಡುವಿಕೆ, ಸಮಾರಂಭಗಳಲ್ಲಿ ಕೆಲವೊಂದು ಲೋಪಗಳಿಂದಾಗುವ ಅನಾಹುತಗಳಿಗೆ ಅಡುಗೆ ಕಾರ್ಮಿಕರು ಅಪಾಯದಲ್ಲಿ ಸಿಲುಕುತ್ತಾರೆ. ಇಂತಹ ಪ್ರಕರಣಗಳ ಬಗ್ಗೆ ಜಾಗರೂಕತೆ ಹೊಂದಿರಬೇಕು. ಸುರಕ್ಷತೆಯ ಕರ್ತವ್ಯ ನಿರ್ವಹಣೆಯ ಮೂಲಕ ಮೆಚ್ಚುಗೆಗೆ ಪಾತ್ರರಾಗಬೇಕು ಎಂದರು.
ಅಡುಗೆ ತಯಾರಕರು ತಪ್ಪದೇ ಪರವಾನಗಿ ಹೊಂದಿರಬೇಕು. ಸುರಕ್ಷತೆ ನಿಯಮ, ಹಣ ಉಳಿತಾಯ ಸೇರಿ ಮುಂಜಾಗ್ರತಾ ಕ್ರಮಗಳ ಪಾಲನೆಯೊಂದಿಗೆ ಉತ್ತಮ ಕರ್ತವ್ಯ ನಿರ್ವಹಣೆಯ ಮೂಲಕ ಜನರ ಮೆಚ್ಚುಗೆಗೆ ಪಾತ್ರರಾಗಬೇಕು ಎಂದರು.
ವಾರ್ಷಿಕ 12 ಲಕ್ಷ ಆದಾಯವುಳ್ಳ ಕಾರ್ಮಿಕರು ಕೇವಲ 100 ರೂ. ಪಾವತಿಸಿ ಪರವಾನಗಿ, 12 ಲಕ್ಷ ಮೇಲ್ಪಟ್ಟವರು 3 ಸಾವಿರ ರೂ. ಪಾವತಿಸಬೇಕಿದೆ. ಪರವಾನಿಗೆ ಹಾಗೂ ಇ-ಶ್ರಮ್ ಕಾರ್ಡ್ ಹೊಂದುವುದರಿಂದ ಸರ್ಕಾರದ ಹಲವು ಸಲವತ್ತುಗಳನ್ನು ಪಡೆಯಬಹುದು ಎಂದು ಹೇಳಿದರು.
ಅಡುಗೆ ತಯಾರಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಎಸ್.ರಮೇಶ್ ಬಾಬು ಮಾತನಾಡಿ, ಅಡುಗೆ ಕಾರ್ಮಿಕರು ನ್ಯಾಯಯುತ ಸವಲತ್ತುಗಳನ್ನು ಪಡೆದುಕೊಳ್ಳಲು ಸಂಘಟಿತರಾಗಬೇಕು. ಈಗಾಗಲೇ ಕೋಲಾರ ಜಿಲ್ಲೆಯಲ್ಲಿ 750 ಮಂದಿ ಅಡುಗೆ ಪರವಾನಗಿ ಪಡೆದಿದ್ದು, ಈ ಭಾಗದಲ್ಲೂ ಹೆಚ್ಚಿಗೆ ಹೆಸರು ನೋಂದಾಯಿಸಿಕೊಳ್ಳಬೇಕು ಎಂದರು.
ನಗರಸಭೆ ಆರೋಗ್ಯಾಧಿಕಾರಿ ಶ್ರೀನಾಥ್ ಬಾಬು, ಸಂಘದ ಜಿಲ್ಲಾ ಗೌರವಾಧ್ಯಕ್ಷ ಬಿ.ಎಚ್.ನರಸಿಂಹಮೂರ್ತಿ, ಪದಾಧಿಕಾರಿಗಳಾದ ಎಸ್.ಎನ್.ನಾಗೇಶ್, ಶೇಷು ಪ್ರಸಾದ್, ರಂಗನಾಥ್, ಎನ್.ಚಂದ್ರಶೇಖರ್, ಜಿ.ಶ್ರೀನಿವಾಸರಾವ್, ಪಟ್ರೇನಹಳ್ಳಿ ಎಸ್.ಉಮೇಶ್, ಎಂ.ಆರ್.ಶ್ರೀನಿವಾಸ್, ಮಂಜು, ಶ್ರೀರಾಮಚಾರ್, ಬಸವರಾಜ್, ಸುದೀಂದ್ರ, ಲಕ್ಷ್ಮೀನಾರಾಯಣರಾವ್ ಮತ್ತಿತರರು ಇದ್ದರು.
ಶೇ.50 ರಷ್ಟು ಹಣ ಪಾವತಿಗೆ ನಿವೇಶನ: ಅನ್ನಪೂರ್ಣೇಶ್ವರಿ ತಾಲೂಕು ಅಡುಗೆ ಕೆಲಸಗಾರರ ಹಾಗೂ ಸಹಾಯಕ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದಿಂದ ನಗರಸಭೆ ಅಧ್ಯಕ್ಷ ಆನಂದ್ ರೆಡ್ಡಿ ಬಾಬುಗೆ ಮನವಿ ಸಲ್ಲಿಸಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು, ಸಂಘದಿಂದ ನಗರಸಭೆಗೆ ಶೇ.50ರಷ್ಟು ಹಣ ಪಾವತಿಸಿದಲ್ಲಿ ನಿವೇಶನ ಒದಗಿಸಲು ಅವಕಾಶವಿದೆ ಎಂದರು.