ಜಿಲ್ಲೆ

ಬಹಿಷ್ಕಾರದ ನಡುವೆ ಅನುಮೋದನೆ: ನಗರಸಭೆ ಸಾಮಾನ್ಯ ಸಭೆಯಿಂದ ಹೊರನಡೆದ ಸದಸ್ಯರು

Chikkaballapur

ಚಿಕ್ಕಬಳ್ಳಾಪುರ: ವಿಪಕ್ಷದ ಸದಸ್ಯರ ಬಹಿಷ್ಕಾರದ ನಡುವೆ ನಗರೋತ್ಥಾನ 3ನೇ ಹಂತದ ವಿಶೇಷ ಅನುದಾನಡಿ ಉದ್ಯಾನಗಳ ಅಭಿವೃದ್ಧಿ, ಅಮೃತ ನಗರೋತ್ಥಾನ, 15ನೇ ಹಣಕಾಸಿನ ಕ್ರಿಯಾ ಯೋಜನೆಗೆ ಮಂಜೂರಾತಿ, ಆಧುನಿಕ ಗ್ಯಾಸ್ ಚಿತಾಗಾರ ನಿರ್ಮಾಣ ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ನಗರಸಭೆ ಸಾಮಾನ್ಯ ಸಭೆಯಲ್ಲಿ ಅನುಮೋದನೆ ನೀಡಲಾಯಿತು. ನಗರಸಭೆ ಕಚೇರಿಯ ಸರ್ ಎಂ.ವಿ.ಸಭಾಂಗಣದಲ್ಲಿ ಮಂಗಳವಾರ ಅಧ್ಯಕ್ಷ ಡಿ.ಎಸ್.ಆನಂದ್ ರೆಡ್ಡಿ ಅಧ್ಯಕ್ಷತೆಯ ಸಭೆಗೆ ಉಪಾಧ್ಯಕ್ಷೆ ವೀಣಾ ರಾಮು ಸೇರಿದಂತೆ ಜೆಡಿಎಸ್ ಸದಸ್ಯರು ಗೈರಾಗಿದ್ದರು. ಕಿಡಿಕಾರುತ್ತಲೇ ಕಾಂಗ್ರೆಸ್ ಸದಸ್ಯರು ಅರ್ಧದಲ್ಲಿಯೇ ಎದ್ದು ಹೋದರು.


ಪೌರಾಡಳಿತ ನಿರ್ದೇಶನಾಲಯದ ಆದೇದಂತೆ ಪ್ರಸಕ್ತ ಸಾಲಿನ ಮಾರ್ಚ್‌ನಿಂದ ಆಸ್ತಿ ತೆರಿಗೆ ದರವನ್ನು ಶೇ.3ರಷ್ಟು ಏರಿಸುವುದಕ್ಕೆ ಸಂಬಂಧಿಸಿದಂತೆ ಅಸಮಾಧಾನ ವ್ಯಕ್ತವಾಯಿತು. ಚಿಕ್ಕಬಳ್ಳಾಪುರವು ಬೆಂಗಳೂರು ಮಾದರಿಯ ದೊಡ್ಡ ಮಹಾ ನಗರವಲ್ಲ. ಈಗಲೇ ಜನರು ಬೆಲೆ ಏರಿಕೆಯಿಂದ ಸಂಕಷ್ಟದಲ್ಲಿದ್ದಾರೆ. ಇದಕ್ಕೆ ದರ ಪರಿಷ್ಕರಣೆಯನ್ನು ಮುಂದೂಡಬೇಕು ಎಂದು ಸದಸ್ಯ ಎಸ್.ಎಂ.ರಫಿಕ್ ಒತ್ತಾಯಿಸಿದರು.


ಇದಕ್ಕೆ ಧ್ವನಿಗೂಡಿಸಿದ ಗಜೇಂದ್ರ, ಗ್ಯಾಸ್ ನಾಗರಾಜ್, ಮಹಮದ್ ಜಾಫರ್, ತೆರಿಗೆ ಏರಿಕೆಯ ನಡುವೆ ದುಬಾರಿ ಹಣವನ್ನು ವಸೂಲಿ ಮಾಡುತ್ತಿರುವುದರಿಂದ ಜನರು ಹೆಚ್ಚಿನ ಹೊರೆ ಹೊರುವಂತಾಗಿದೆ ಎಂದು ತಿಳಿಸಿದಾಗ, ಈಗಾಗಲೇ ಹೊಸ ಪರಿಷ್ಕರಣೆ ದರ ವಿಧಿಸುವಿಕೆ ಚಾಲ್ತಿಯಲ್ಲಿದೆ ಎಂಬುದಾಗಿ ಪೌರಾಯುಕ್ತ ಮಹಾಂತೇಶ್ ಮಾಹಿತಿ ನೀಡಿದರು. ಇದಕ್ಕೆ ಕೌನ್ಸಿಲ್ ಅನುಮೋದನೆ ಇಲ್ಲದೇ ಜಾರಿಗೊಳಿಸುವಿಕೆಗೆ ಆಕ್ರೋಶ ವ್ಯಕ್ತವಾಯಿತು. ಅಧಿಕಾರಿಗಳೇ ಎಲ್ಲ ನಿರ್ಧಾರ ಕೈಗೊಳ್ಳುವಂತಾದರೆ ಸದಸ್ಯರು ಏಕೆ ಬೇಕು ಎಂದು ಪ್ರಶ್ನಿಸಿದರು.

ಜನರ ಪರವಾಗಿ ಮಾತಾಡ್ರಿ: ಆಸ್ತಿ ತೆರಿಗೆ ಮತ್ತು ದಾಖಲೆಗೆ ಸಂಬಂಧಿಸಿದಂತೆ ಸದಸ್ಯರ ನಡುವೆ ವಾಗ್ವಾದ ನಡೆಯಿತು. 1996ರಲ್ಲಿ ತಿಪ್ಪೇನಹಳ್ಳಿ ಸೇರಿ ವಿವಿಧ ಪಂಚಾಯಿತಿ ವ್ಯಾಪ್ತಿಯಲ್ಲಿನ ಆಸ್ತಿಗೆ ಸಂಬಂಧಿಸಿದಂತೆ ಅಗತ್ಯ ದಾಖಲೆಗಳನ್ನು ನಗರಸಭೆಗೆ ಹಸ್ತಾಂತರಿಸಲಾಯಿತು. ಆದರೆ, ಅಲ್ಲಿಂದಲೂ ಅನಧಿಕೃತ ಆಸ್ತಿಯಾಗಿ ಪರಿಗಣನೆಯು ಖಾತೆ, ಕಟ್ಟಡ ನಿರ್ಮಾಣ ಮತ್ತು ತೆರಿಗೆ ಪಾವತಿಗೆ ತೊಂದರೆಯಾಗಿದೆ. ಒಂದೆಡೆ ನಿಯಮಾನುಸಾರ ಗುರುತಿಸಿ, ಮತ್ತೊಂದೆಡೆ ನಿಯಮ ಬಾಹಿರ ಎಂಬುದಾಗಿ ಹೇಳುವುದು ಸರಿ ಅಲ್ಲ ಎಂದು ಗಜೇಂದ್ರ ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಹೆಚ್ಚುವರಿಯಾಗಿ 300 ತೆರಿಗೆ ಪಾವತಿಸಿದರೆ ಸಮಸ್ಯೆಯಾಗುವುದಿಲ್ಲ ಎಂಬ ಅಸಡ್ಡೆ ಉತ್ತರ ರಫೀಕ್‌ರಿಂದ ಬಂತು. ಇದಕ್ಕೆ ನಾಗರಾಜು ಸೇರಿ ಇತರ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಜನರ ಪರವಾಗಿ ಮಾತನಾಡಬೇಕು. ದಶಕಗಳ ಸಮಸ್ಯೆಗೆ ಕೌನ್ಸಿಲ್ ಮತ್ತು ಅಧಿಕಾರಿಗಳ ಅಸಡ್ಡೆ ಕಾರಣ. ಇದರಿಂದ ನಗರಸಭೆಗೆ ಕೆಟ್ಟ ಹೆಸರು ಎಂದು ಕಿಡಿಕಾರಿದರು.

ದುಡ್ಡು ಸಂಪಾದನೆಯ ಸಭೆ, ವಿಪಕ್ಷ ಬಹಿಷ್ಕಾರ: ಕಳಪೆ ಕಾಮಗಾರಿಗೆ ಅನುಮೋದನೆ, ಗುತ್ತಿಗೆದಾರಿಗೆ ಬಿಲ್ ಮಂಜೂರಾತಿಗೆ ಸೀಮಿತವಾದ ಸಭೆ ಎಂಬುದಾಗಿ ಆರೋಪಿಸಿ ಕಾಂಗ್ರೆಸ್ ಸದಸ್ಯರಾದ ಕಣಿತಹಳ್ಳಿ ವೆಂಕಟೇಶ್, ನರಸಿಂಹಮೂರ್ತಿ, ನೇತ್ರಾವತಿ, ಜಯಲಕ್ಷ್ಮೀ, ಅಂಬರೀಷ್, ದೀಪಕ್ ಹೊರ ನಡೆದು ಕಿಡಿಕಾರಿದರು. ನಾಲ್ಕೈದು ಮಂದಿ ಸದಸ್ಯರು ದುಡ್ಡು ಕೊಡುವ ಏಜೆನ್ಸಿ ಪರವಾಗಿ ಕೆಲಸ ಮಾಡಿ, ಅನುಮೋದನೆ ಕೊಡಿಸುತ್ತಿದ್ದಾರೆ. ದುಡ್ಡು ಸಂಪಾದನೆಗೆ ಸಾಮಾನ್ಯ ಸಭೆಗಳು ನಡೆಯುತ್ತಿವೆ. ಪೌರ ಕಾರ್ಮಿಕರ ಕಾಯಂ ಮತ್ತು ವಾಟರ್ ಮನ್‌ಗಳಿಗೆ ಸವಲತ್ತು, ವಾರ್ಡುವಾರು ಮೂಲ ಸೌಕರ್ಯಗಳು, ಜನರ ಕುಂದು ಕೊರತೆಗಳ ಪರಿಹಾರದ ವಿಚಾರವಾಗಿ ಚರ್ಚೆಯಾಗುತ್ತಿಲ್ಲ. ಕಳಪೆ ಕಾಮಗಾರಿಗೂ ಬಿಲ್ ಮಾಡಲಾಗುತ್ತಿದೆ. ಇದರ ವಿರುದ್ಧ ಎಸಿಬಿ ಇಲ್ಲವೇ ಲೋಕಾಯುಕ್ತಗೆ ದೂರು ಸಲ್ಲಿಸುವುದಾಗಿ ಸದಸ್ಯ ವೆಂಕಟೇಶ್ ಆರೋಪಿಸಿದರು.