ಮಡಿಕೇರಿ:
ನಗರದ ಗಾಂಧಿ ಮೈದಾನದಲ್ಲಿ ಸುಸಜ್ಜಿತ ವೇದಿಕೆ ನಿರ್ಮಾಣಕ್ಕೆ ಸಂಬAಧಿಸಿದAತೆ ನಗರಸಭೆ ಮುಂದಡಿ ಇಟ್ಟಿದ್ದು, ಮುಂದಿನ ವರ್ಷದ ದಸರಾ ವೇಳೆಗೆ ಕಾಮಗಾರಿ ಪೂರ್ಣಗೊಳಿಸಲು ಮಂಗಳವಾರ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿದೆ.
ಸಭೆಯ ಆರಂಭದಲ್ಲಿ ಮಾತನಾಡಿದ ನಗರಸಭೆ ಆಡಳಿತಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ವೆಂಕಟ್ ರಾಜಾ, ಈ ವರ್ಷದ ಮಡಿಕೇರಿ ದಸರಾ ಎಲ್ಲರ ಸಹಕಾರದಿಂದ ಜನೋತ್ಸವವಾಗಿ ಯಶಸ್ವಿಯಾಗಿದೆ. ಈ ಯಶಸ್ಸು ಮುಂದೆಯೂ ಮರುಕಳಿಸಲು ಮುಂದಿನ ದಸರಾಕ್ಕೆ ಈಗಿನಿಂದಲೇ ಸಿದ್ಧತೆ ನಡೆಯಬೇಕು. ಶಾಶ್ವತ ವೇದಿಕೆ ಒಂದನ್ನು ನಿರ್ಮಿಸಬೇಕಿದೆ. ಸುಸುಜ್ಜಿತ ವೇದಿಕೆ ನಿರ್ಮಾಣದ ಜತೆಯಲ್ಲೇ ಗ್ರಿನ್ ರೂಂ, ಪಾವತಿಸಿ ಉಪಯೋಗಿಸುವ ಶೌಚಗೃಹ, ಪಾವತಿ ಉಪಯೋಗಿಸುವ ವಾಹನ ನಿಲುಗಡೆ ವ್ಯವಸ್ಥೆ ಮಾಡಲು 2 ಕೊಟಿ ವೆಚ್ಚದ ಯೋಜನೆ ರೂಪಿಸಲಾಗಿದೆ.
ದಸರಾ ಮಾತ್ರವಲ್ಲದೆ ಉಳಿದ ದಿನಗಳಲ್ಲಿ ಖಾಸಗಿ ಮತ್ತು ಸರ್ಕಾರಿ ಕಾರ್ಯಕ್ರಮಗಳಿಗೆ ಇವುಗಳನ್ನು ಬಳಸಿಕೊಳ್ಳಬಹುದು. ಇದಕ್ಕಾಗಿ ಬಾಡಿಗೆ ನಿಗದಿಪಡಿಸುವುದರಿಂದ ಆದಾಯ ಕೇಂದ್ರೀಕೃತ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಟ್ಟಂತೆ ಆಗುತ್ತದೆ ಎಂದರು.
ಜಿಲ್ಲಾಧಿಕಾರಿ ಪ್ರಸ್ತಾವನೆಗೆ ಸರ್ವ ಸದಸ್ಯರೂ ಒಮ್ಮತದ ಒಪ್ಪಿಗೆ ಸೂಚಿಸಿದರು. ಯಶಸ್ವಿಯಾಗಿ ದಸರಾ ನಡೆಸಿದ್ದಕ್ಕೆ ಇದೇ ವೇಳೆ ಸರ್ವ ಸದಸ್ಯರೂ ಜಿಲ್ಲಾಧಿಕಾರಿ ಅವರನ್ನು ಅಭಿನಂದಿಸಿದರು.
ಇತರ ವಿಷಯಗಳ ಚರ್ಚೆ ಬಂದಾಗ ಮಾತನಾಡಿದ ಸದಸ್ಯ ರಾಜೇಶ್ ಯಲ್ಲಪ್ಪ, ದಸರಾ ಸಂದರ್ಭ ವ್ಯಾಪಕವಾಗಿ ಕುಡಿಯುವ ನೀರಿನ ಪ್ಲಾಸ್ಟಿಕ್ ಬಾಟಲ್ ಬಳಕೆ ಆಗಿದ್ದರಿಂದ ಇದರ ತ್ಯಾಜ್ಯವೇ ದೊಡ್ಡ ಪ್ರಮಾಣದಲ್ಲಿ ಸಂಗ್ರಹ ಆಗಿತ್ತು. ಇದರಿಂದ ನಗರದ ಸೌಂದರ್ಯ ಹಾಳಾಗಿದ್ದು ಮಾತ್ರವಲ್ಲದೆ ಪರಿಸರದ ಮೇಲೂ ದುಷ್ಪರಿಣಾಮ ಉಂಟಾಗುತ್ತಿದೆ. ಹಾಗಾಗಿ ನಗರದಲ್ಲಿ ನೀರಿನ ಪ್ಲಾಸ್ಟಿಕ್ ಬಾಟಲ್‌ಗಳನ್ನು ನಿಷೇಧಿಸಬೇಕು ಎಂದು ಸಲಹೆ ಮಾಡಿದರು. ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿ, 2 ಲೀಟರ್‌ಗಿಂತ ಕಡಿಮೆ ಅಳತೆಯ ನೀರಿನ ಬಾಟಲಿ, ತಂಪು ಪಾನೀಯ ಬಾಟಲಿ ಬಳಕೆ ನಿಷೇಧಿಸಲಾಗುವುದು. ಕಟ್ಟುನಿಟ್ಟಾಗಿ ನಿಯಮ ಜಾರಿಮಾಡಿದರೆ ಕೆಲವೇ ತಿಂಗಳಲ್ಲಿ ಈ ಸಮಸ್ಯೆ ಹತೋಟಿಗೆ ಬರಬಹುದು ಎಂದರು.
ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ನಡೆದುಕೊಂಡು ಹೋಗಲು ಸಾಧ್ಯವಾಗುತ್ತಿಲ್ಲ ಎಂದು ಸದಸ್ಯ ರಮೇಶ್ ಹೇಳಿದರು. ಮಂಗಗಳ ಕಾಟ ಮಿತಿ ಮೀರಿರುವ ಬಗ್ಗೆ ಮನ್ಸೂರ್ ಅಲಿ ಹೇಳಿದರು. ಎಸ್‌ಡಿಪಿಐನ ಮೇರಿ ವೇಗಸ್ ತಮ್ಮ ವಾರ್ಡ್ ವ್ಯಾಪ್ತಿಯಲ್ಲಿ ಕಾಡು ಹಂದಿಗಳ ಹಾವಳಿ ವಿಪರೀತವಾಗಿದೆ ಎಂದರು.ನಾಮನಿರ್ದೇಸಿತ ಸದಸ್ಯ ಮುದ್ದುರಾಜ್ ನಗರದಲ್ಲಿನ ಬೀಡಾಡಿ ದನಗಳ ಸಮಸ್ಯೆ ಪರಿಹರಿಸುವಂತೆ ಮನವಿ ಮಾಡಿದರು. ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿ ನಾಯಿಗಳ ಸಮಸ್ಯೆ ಪರಿಹಾರಕ್ಕೆ ಪ್ರಯತ್ನ ನಡೆದಿದೆ. ಟೆಂಡರ್ ಕರೆದರೂ ದರ ಕಡಿಮೆ ಎಂದು ಯಾರೂ ಬರುತ್ತಿಲ್ಲ.
ಬೇರೆ ಯಾವುದಾದರೂ ಮಾರ್ಗದ ಬಗ್ಗೆ ಪರಿಶೀಲಿಸಲಾಗುವುದು. ಉಳಿದ ಪ್ರಾಣಿಗಳ ಹಾವಳಿ ವಿಷಯವನ್ನು ಅರಣ್ಯ ಇಲಾಖೆ ಅಧಿಕಾರಿಗಳ ಜತೆ ಮಾತನಾಡಲಾಗುವುದು ಎಂದರು.
ಸುದರ್ಶನ ವೃತ್ತದಿಂದ ರಾಜಾಸೀಟ್ ತನಕ ಕಾಬೂಲ್ ಸ್ಟೋನ್ ಬಳಸಿ ಫುಟ್‌ಪಾತ್ ನಿರ್ಮಿಸಲಾಗುವುದು. ಡೆಲ್ಟಾ ಯೋಜನೆ ಅಡಿಯಲ್ಲಿ ಇದಕ್ಕೆ ಅನುದಾನ ಸಿಗಲಿದೆ. ಫುಟ್ ಪಾತ್ ನಿರ್ಮಾಣ ಆದರೆ ಅಗತ್ಯ ಇರುವ ಕಡೆ ಪಾರ್ಕಿಂಗ್‌ಗೆ ಅವಕಾಶ ಮಾಡಿಕೊಡಲು ಅನುಕೂಲ ಆಗುತ್ತದೆ. ಇದರಿಂದ ಪಾದಚಾರಿಗಳಿಗೂ ಸಹಕಾರಿ ಎಂದು ಜಿಲ್ಲಾಧಿಕಾರಿ ಹೇಳಿದರು. ಸರ್ಕಾರದ ಸೂಚನೆಯಂತೆ ಕನ್ನಡ ನಾಮಫಲಕ ಕಡ್ಡಾಯವಾಗಿದೆ. ಈ ಸಂಬAಧ ಎಲ್ಲಾ ಗಡುವು ಮುಗಿದಿದೆ. ಆದರೂ ಕನ್ನಡ ನಾಮಫಲಕ ಬಂದಿಲ್ಲ. ಇನ್ನು ದಂಡ ವಿಧಿಸಬೇಕಾಗಬಹುದು. ಹಾಗಾಗಿ ಅಂಗಡಿ, ವಾಣಿಜ್ಯ ಕಚೇರಿಗಳಿಗೆ ನಗರಸಭೆ ನಿರ್ದೇಶನ ಕೊಡಬೇಕು ಎಂದು ಇದೇ ವೇಳೆ ಹೇಳಿದರು.
ಹೆದ್ದಾರಿ ಬದಿಯಲ್ಲಿ ತಾತ್ಕಾಲಿಕ ಶೆಡ್‌ಗಳಲ್ಲಿ ವಾಣಿಜ್ಯ ಚಟುವಟಿಕೆ ನಡೆಯುತ್ತಿರುವ ಬಗ್ಗೆ ಅಮಿನ್ ಮೊಹಿಸಿನ್, ರಾಜೇಶ್ ಪ್ರಸ್ತಾಪ ಮಾಡಿದರು. ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿ, ಅಂಗಡಿಗಳಿಗೆ ಕ್ರಮ ಸಂಖ್ಯೆ ಕೊಡಬೇಕು ಆಗ ಅನಧಿಕೃತ ಅಂಗಡಿಗಳು ಬಂದರೆ ಗೊತ್ತಾಗುತ್ತದೆ ಎಂದರು. ನಗರಸಭೆ ವ್ಯಾಪ್ತಿಯಲ್ಲಿ ಫಾರಂ ನಂ.3 ವಿತರಣೆಗೆ ಕ್ರಮ ತಗೆದುಕೊಳ್ಳಲಾಗಿದೆ ಎಂದು ಹೇಳಿದರು.
ಮಾರುಕಟ್ಟೆ ಬಳಿ ನಿರ್ಮಾಣ ಆಗುತ್ತಿರುವ ಅಂಗಡಿಗಳಿಗೆ ಚರಂಡಿ ವ್ಯವಸ್ಥೆ ಆಗಬೇಕು ಎಂದು ನಾಮನಿರ್ದೇಶಿತ ಸದಸ್ಯ ಮಹಮ್ಮದ್ ಯಾಕೂಬ್ ಹೇಳಿದರು. ಎಲ್ಲೆಂದರಲ್ಲಿ ಕಸ ಎಸೆಯುವುದರಿಂದ ದೊಡ್ಡ ಸಮಸ್ಯೆ ಆಗುತ್ತಿದೆ. ಇಂಥವರಿಗೆ ದೊಡ್ಡ ಮಟ್ಟದ ದಂಡ ಹಾಕಬೇಕು ಎಂದು ಸದಸ್ಯ ಮನ್ಸೂರ್ ಅಲಿ ಒತ್ತಾಯಿಸಿದರು. ಪೊಲೀಸ್ ಇಲಾಖೆ ವಸತಿಗೃಹದ ಬಳಿ ವಿದ್ಯಾವಂತರೇ ರಸ್ತೆ ಬದಿಯಲ್ಲಿ ಕಸ ಹಾಕುತ್ತಿದ್ದಾರೆ ಎಂದು ಅಪ್ಪಣ್ಣ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಪ್ರಾಣಿಜನ್ಯ ತ್ಯಾಜ್ಯ ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡಬೇಕು. ಎಲ್ಲಾ ನಗರಪ್ರದೇಶಗಳಿಗೆ ಈ ಬಗ್ಗೆ ಸೂಚನೆ ನೀಡಲಾಗುವುದು. ಮಡಿಕೇರಿಯ ಕಸ ನಿರ್ವಹಣಾ ಜಾಗ ಸಂಬAಧ ಅರಣ್ಯ ಇಲಾಖೆ ಜತೆ ಮಾತುಕತೆ ನಡೆಸಲಾಗಿದೆ ಎಂದರು.
ಬನ್ನಿ ಮಂಟಪದಿAದ ಚೌಕಿ ತನಕ ರಸ್ತೆ ಮರು ಡಾಂಬರೀಕರಣ ಆಗಬೇಕು ಎಂದು ಸದಸ್ಯೆ ಸವಿತಾ ರಾಕೇಶ್ ಮನವಿ ಮಾಡಿದರು. ಸಂಪರ್ಕ ರಸ್ತೆಗಳಲ್ಲಿನ ಗುಂಡಿ ಮುಚ್ಚಿಸುವಂತೆ ಅಪ್ಪಣ್ಣ ಒತ್ತಾಯಿಸಿದರು. ನಗರದೊಳಗೆ ರಾಜಕಾಲುವೆ ಗುರುತಿಸಬೇಕು, ಮಡಿಕೇರಿಯ ಭವಿಷ್ಯದ ದೃಷ್ಟಿಯಿಂದ ಇದು ತುಂಬಾ ಅಗತ್ಯವಿದೆ.ಬೆಂಗಳೂರು ಪರಿಸ್ಥಿತಿ ಇಲ್ಲಿ ಬರಬಾರದು ಎಂದು ಸದಸ್ಯ ಬಷೀರ್ ಕಾಳಜಿ ವ್ಯಕ್ತಪಡಿಸಿರು. ಇವುಗಳಿಗೆ ಜಿಲ್ಲಾಧಿಕಾರಿ ಸಕರಾತ್ಮಕವಾಗಿ ಸ್ಪಂದಿಸಿದರು.
ನಗರಸಭೆ ಪೌರಾಯುಕ್ತ ಹೆಚ್.ಆರ್. ರಮೇಶ್, ಅಧಿಕಾರಿಗಳು, ಸಿಬ್ಬಂದಿ ವರ್ಗ ಇದ್ದರು.