ಜಿಲ್ಲೆ

ಆಸ್ತಿ ತೆರಿಗೆ ಅಲ್ಪ ಪ್ರಮಾಣದಲ್ಲಿ ಏರಿಕೆಗೆ ನಿರ್ಣಯ

ಸುನಿಲ್ ಪೊನ್ನೇಟಿ

ಮಡಿಕೇರಿ:

ಮಡಿಕೇರಿ ನಗರಸಭೆ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆಯನ್ನು ಸರ್ಕಾರದ ಮಾರ್ಗ ಸೂಚಿಯಂತೆ ಕನಿಷ್ಠ ದರದಲ್ಲಿ ಹೆಚ್ಚಳಕ್ಕೆ ಮಡಿಕೇರಿ ನಗರಸಭೆ ತೀರ್ಮಾನಿಸಿದೆ. ನಗರಸಭೆ ಆಡಳಿತಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಮಡಿಕೇರಿ ನಗರಸಭೆ 2025-26ನೇ ಸಾಲಿನ ಆಯವ್ಯಯ ಸಂಬAಧಿ ಚರ್ಚಿಸಲು ಕರೆಯಲಾಗಿದ್ದ ಸಭೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಯಿತು.

ಆಸ್ತಿ ತೆರಿಗೆ ಹೆಚ್ಚಳ ಮಾಡಬೇಕಿರುವ ಬಗ್ಗೆ ವಿಷಯ ಪ್ರಸ್ತಾಪಿಸಿದ ನಗರಸಭೆ ಪೌರಾಯುಕ್ತ ಹೆಚ್.ಆರ್. ರಮೇಶ್, ಸರ್ಕಾರ ಇನ್ನೂ ದರ ನಿಗದಿಪಡಿಸದ ಕಾರಣ ಹಾಲಿ ತೆರಿಗೆಯಲ್ಲಿ ಶೇ. 3-5ರಷ್ಟು ಪ್ರಮಾಣದಲ್ಲಿ ತೆರಿಗೆ ಹೆಚ್ಚಳ ಮಾಡಲು ಅವಕಾಶವಿದೆ. ಈ ಬಗ್ಗೆ ಸದಸ್ಯರು ಸಲಹೆ ನೀಡಬೇಕು ಎಂದರು. ಈ ಸಂದರ್ಭ ಮಾತನಾಡಿದ ಅರುಣ್ ಶೆಟ್ಟಿ, ಜನಸಾಮಾನ್ಯರು ಈಗ ಸಾಕಷ್ಟು ಸಮಸ್ಯೆಯಲ್ಲಿ ಇದ್ದಾರೆ. ಹಾಗಾಗಿ ತೆರಿಗೆ ಹೊರೆ ಹೇರುವುದು ಬೇಡ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಇದಕ್ಕೆ ಎಲ್ಲಾ ಸದಸ್ಯರೂ ಧ್ವನಿಗೂಡಿಸಿದರು. ಆದರೆ ಸರ್ಕಾರದ ಮಾರ್ಗಸೂಚಿ ಪ್ರಕಾರ ತೆರಿಗೆ ಪ್ರಮಾಣ ಹೆಚ್ಚಳದ ಅನಿವಾರ್ಯತೆಯನ್ನು ಪೌರಾಯುಕ್ತರು ಮನದಟ್ಟು ಮಾಡಿದ ನಂತರ ಕನಿಷ್ಠ ದರವಾದ ಶೇ. 3ರಷ್ಟು ಪ್ರಮಾಣದಲ್ಲಿ ತೆರಿಗೆ ಹೆಚ್ಚಳಕ್ಕೆ ಸಭೆ ಅನುಮೋದನೆ ಕೊಟ್ಟಿತು.

ಜಾಸ್ತಿ ಮಳೆಯಾಗುವ ಮಡಿಕೇರಿಗೆ ವಿದ್ಯುತ್ ಅಥವಾ ಗ್ಯಾಸ್ ಚಿತಾಗಾರದ ಅವಶ್ಯಕತೆ ಹೆಚ್ಚಿದ್ದು, ಈ ನಿಟ್ಟಿನಲ್ಲಿ ನಗರಸಭೆ ಆಡಳಿತ ಸಕರಾತ್ಮಕ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಹೇಳಿದರು. ಸದ್ಯಕ್ಕೆ ಮಡಿಕೇರಿಯಲ್ಲಿ ಶವಗಳನ್ನು ದಹನ ಮಾಡಲು ಕಟ್ಟಿಗೆ ಬಳಸಲಾಗುತ್ತಿದೆ. ಆದರೆ ಮಳೆಗಾಲದ ಅವಧಿ ಹೆಚ್ಚು ಇರುವ ಈ ಪ್ರದೇಶಕ್ಕೆ ಇದು ಸೂಕ್ತ ಅಲ್ಲ. ಹೆಚ್ಚು ಮಳೆ ಬೀಳುವ ಸಂದರ್ಭದಲ್ಲಿ ಕಟ್ಟಿಗೆ ಅಭಾವ ಇರುತ್ತದೆ. ಕಟ್ಟಿಗೆಗೆ ಹೆಚ್ಚು ದರವನ್ನೂ ಕೊಡಬೇಕಾಗುತ್ತದೆ. ಹಾಗಾಗಿ ಗ್ಯಾಸ್ ಅಥವಾ ವಿದ್ಯುತ್ ಚಿತಾಗಾರ ಅಳವಡಿಸಿದರೆ ಸ್ಥಳೀಯ ಹವಾಮಾನ ಪರಿಸ್ಥಿತಿಗೆ ಅನುಕೂಲ ಆಗಲಿದೆ ಎಂದರು. ಇದೇ ಸಂದರ್ಭ ನಗರಸಭೆ ವ್ಯಾಪ್ತಿಯಲ್ಲಿ ವಿವಿಧ ಯೋಜನೆ ಅಡಿ ಉಳಿಕೆ ಆದ ಅನುದಾನ ಮತ್ತು ನಗರಸಭಾ ನಿಧಿ ಅಡಿಯಲ್ಲಿ ಆಯ್ದ ಸ್ಮಶಾನದಲ್ಲಿ ಶವ ದಹನಕ್ಕೆ ಗ್ಯಾಸ್ ಚಿತಾಗಾರ ಖರೀದಿಸಿ ಅಳವಡಿಸಲು ಅಂದಾಜು 26 ಲಕ್ಷ ರೂ. ವೆಚ್ಚದ ಹಾಗೂ ವಿದ್ಯುತ್ ಚಿತಾಗಾರ ಖರೀದಿಸಿ ಅಳವಡಿಸಲು 45 ಲಕ್ಷ ರೂ. ವೆಚ್ಚದ ಕ್ರಿಯಾ ಯೋಜನೆಗೆ ಸಭೆಯಲ್ಲಿ ಅನುಮೋದನೆ ಪಡೆದುಕೊಳ್ಳಲಾಯಿತು.

ಬಜೆಟ್ ಮಂಡನೆ ನಂತರ 14 ದಿನಗಳ ಕಾಲಾವಕಾಶ ಕೊಟ್ಟು ಬಜೆಟ್ ಮೇಲಿನ ಚರ್ಚೆಗೆ ಅವಕಾಶ ಮಾಡಿಕೊಡಲಾಗಿತ್ತು. ಚರ್ಚೆಗೆ ನಾಮನಿರ್ದೇಶಿತ ಸದಸ್ಯ ಮೊಹಮ್ಮದ್ ಯಾಕೂಬ್ ಮಾತ್ರ ಪತ್ರ ಬರೆದು ಸದಸ್ಯರ ಅಧ್ಯಯನ ಪ್ರವಾಸಕ್ಕೆ 25 ಲಕ್ಷ ರೂ. ಮೀಸಲಿಟ್ಟಿರುವುದರ ಬಗ್ಗೆ ವಿವರಣೆ ಕೇಳಿದ್ದರು. ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿ, ಸದಸ್ಯರ ಅಧ್ಯಯನ ಪ್ರವಾಸದ ಅಗತ್ಯ ಇರುತ್ತದೆ. ಪ್ರವಾಸದ ಸಂದರ್ಭ ಬೇರೆ ಉದ್ದೇಶಕ್ಕೆ ಮೀಸಲಿಟ್ಟಿರುವ ಹಣ ಪಡೆಯುವುದಕ್ಕಿಂತ ಇದೇ ಉದ್ದೇಶಕ್ಕಾಗಿಯೇ ಬಜೆಟ್‌ನಲ್ಲಿ ಹಣ ತೆಗೆದಿಡಲಾಗಿದೆ. ಸ್ಥಳ, ದಿನಾಂಕ ಮತ್ತೆ ಬೇಕಾದರೆ ನಿರ್ಧರಿಸಬಹುದು. ಒಂದು ವೇಳೆ ಪ್ರವಾಸ ಹೋಗಿಲ್ಲ ಎಂದಾದರೆ ಈ ಮೊತ್ತವನ್ನು ಬೇರೆ ಉದ್ದೇಶಕ್ಕೆ ಬಳಕೆ ಮಾಡಬಹುದು ಎಂದು ಮಾಹಿತಿ ನೀಡಿದರು. ನಗರದಲ್ಲಿ 45 ಕಡೆ ತಡೆಗೋಡೆಗಳ ನಿರ್ಮಾಣಕ್ಕೆ ಸಮೀಕ್ಷೆ ಆಗಿದೆ. 6 ಕಿಮೀ ರಾಜಕಾಲುವೆ ಇದ್ದು, ಇದರ ಕಾಂಕ್ರೀಟಿಕರಣ ಆಗಬೇಕಿದೆ ಎಂದು ಇದೇ ಸಂದರ್ಭ ಹೇಳಿದರು.

ಸಭೆಯಲ್ಲಿ ಮಾತನಾಡಿ ಎಸ್‌ಡಿಪಿಐನ ಮನ್ಸೂರ್ ಅಲಿ, ಬೀದಿ ದೀಪ ಅಳವಡಿಕೆ ಮತ್ತು ನಿರ್ವಹಣೆಗೆ ಬಜೆಟ್‌ನಲ್ಲಿ ಇಟ್ಟಿರುವ ಮೊತ್ತ ಕಡಿಮೆ ಇದೆ. ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಿದ್ದು, ರಾತ್ರಿ ವೇಳೆ ತಿರುಗಾಡಲು ಕಷ್ಟವಾಗುತ್ತದೆ. ಹಾಗಾಗಿ ಬೀದಿ ದೀಪಗಳ ಸಂಖ್ಯೆ ಹೆಚ್ಚು ಮಾಡಬೇಕು. ಅಗತ್ಯ ಇರುವ ಕಡೆಗಳಲ್ಲಿ ಮಿನಿ ಹೈಮಾಸ್ಕ್ ದೀಪ ಅಳವಡಿಸಬೇಕು. ಅಮೃತ್-2 ಯೋಜನೆ ಅಡಿಯಲ್ಲಿ ನಡೆಯುತ್ತಿರುವ ಕಾಮಗಾರಿ ಸರಿಯಾಗಿ ಆಗುತ್ತಿಲ್ಲ. ಯುಜಿಡಿ ಕಾಮಗಾರಿಯಂತೆ ಅರ್ಧಂಬರ್ಧ ನಡೆಯುತ್ತಿದೆ. ಎಲ್ಲಾ ವಾರ್ಡ್ಗಳಲ್ಲೂ ಇದೇ ಸಮಸ್ಯೆ ಇದ್ದು, ಒಂದು ವಾರ್ಡ್ನಲ್ಲಿ ಕೆಲಸ ಮುಗಿಸಿ ಮತ್ತೊಂದು ವಾರ್ಡ್ಗೆ ಹೋಗಬೇಕು ಎಂದರು. ಇದಕ್ಕೆ ಅರುಣ್ ಶೆಟ್ಟಿ ಧ್ವನಿಗೂಡಿಸಿದರು. ಈ ವಿಷಯಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಬೀದಿ ದೀಪ ವ್ಯವಸ್ಥೆ ಮಾಡಲು ಅದ್ಯತೆ ಕೊಡಲಾಗುವುದು. ಅಮೃತ್ 2 ಯೋಜನೆ ಕಾಮಗಾರಿ ಸರಿಯಾಗಿ ನಡೆಸಲು ಸೂಚಿಸಲಾಗುವುದು ಎಂದು ಹೇಳಿದರು.

ಎಸ್‌ಡಿಪಿಐನ ಅಮೀನ್ ಮೊಹಿಸಿನ್ ಮಾತನಾಡಿ ನಗರಸಭೆ ಕಟ್ಟಡ ಬಾಡಿಗೆದಾರರಿಗೆ ಅಡ್ವಾನ್ಸ್ ಮೊತ್ತ ಹೆಚ್ಚು ಮಾಡಬೇಕು. ಟ್ರೇಡ್ ಲೈಸೆನ್ಸ್ ಪ್ರಗತಿ ಕಡಿಮೆ ಇದೆ. ಬಜೆಟ್‌ನಲ್ಲಿ 1.25 ಕೋಟಿ ರೂ. ಆಡಿಟ್ ರಿಕವರಿ ತೋರಿಸಲಾಗಿದೆ. ಇದರ ಸಂಪೂರ್ಣ ಮಾಹಿತಿ ಕೊಡಬೇಕು ಎಂದರು. ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಹಾಗಾಗಿ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು ಎಂದು ಬಿಜೆಪಿಯ ಮಹೇಶ ಜೈನಿ ಸಲಹೆ ನೀಡಿದರು.

ನಗರಸಭೆ ಸದಸ್ಯರು, ಅಧಿಕಾರಿಗಳು, ಸಿಬ್ಬಂದಿ ಇದ್ದರು.