ವಿಜಯವಾಣಿ ಸುದ್ದಿಜಾಲ ನೆಲಮಂಗಲ
ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆ ಸಂಕಲ್ಪ ಮಾಡಿದರೆ ಉತ್ತಮವಾದ ಜೀವನ ನಡೆಸಬಹುದಾಗಿದೆ ಎಂದು ನಗರಸಭೆ ಅಧ್ಯಕ್ಷೆ ಲತಾ ಹೇಮಂತ್‌ಕುಮಾರ್ ತಿಳಿಸಿದರು.
ನಗರದ ವಿಶ್ವೇಶ್ವರಪುರದ ನಗರಸಭೆ ಕಾರ್ಯಾಲಯದಲ್ಲಿ ಶನಿವಾರ ನಗರಸಭೆಯಿಂದ ಸ್ವಚ್ಛಭಾರತ್ ಮಿಷನ್ ಯೋಜನೆಯಡಿ ನನ್ನ ಜೀವನ ನನ್ನ ಸ್ವಚ್ಛ ನಗರ ಶೀರ್ಷಿಕೆಯಡಿ ನಿರ್ಮಾಣ ಮಾಡಿರುವ ಆರ್‌ಆರ್‌ಆರ್ (ರೆಡ್ಯೂಸ್, ರೀಯೂಸ್, ರಿಸೈಕಲ್) ಸೆಂಟರ್ ಉದ್ಘಾಟಿಸಿ ಮಾತನಾಡಿದರು. ಹಳೆಯ ಬಟ್ಟೆ, ಆಟಿಕೆ, ಶೂ, ಪೀಠೋಪಕರಣ, ಗೃಹಬಳಕೆ ವಸ್ತು, ಬ್ಯಾಗ್, ಎಲೆಕ್ಟ್ರಿಕಲ್ ವಸ್ತು, ಪುಸ್ತಕ, ಕನ್ನಡಕ ಮುಂತಾದ ವಸ್ತುಗಳನ್ನು ಕೇಂದ್ರದಲ್ಲಿ ನೀಡಬಹುದಾಗಿದೆ. ಇದರಿಂದ ಬಡವರಿಗೆ, ಅನಾಥರಿಗೆ, ನಿರಾಶ್ರಿತರ ನೆರವಿಗೆ ಅನುಕೂಲವಾಗಲಿದೆ. ಪ್ರತಿಯೊಬ್ಬರೂ ವಸ್ತುಗಳನ್ನು ನೀಡುವ ಮೂಲಕ ಸಹಕಾರ ನೀಡಬೇಕು ಎಂದರು.
ನಗರಸಭೆ ಪೌರಾಯುಕ್ತ ರಾಜಶೇಖರ್ ಮಾತನಾಡಿ, ಸ್ವಚ್ಛ ಭಾರತ್ ಯೋಜನೆಯ 2ನೇ ಹಂತವಾಗಿ ನನ್ನ ಜೀವನ ನನ್ನ ಸ್ವಚ್ಛ ನಗರ ಕಾರ್ಯಕ್ರಮ ಮೇ 20ರಿಂದ ಜೂ. 5ರವರೆಗೂ ನಡೆಯಲಿದೆ. ನಗರಸಭೆ ವ್ಯಾಪ್ತಿಯ 6 ಸ್ಥಳದಲ್ಲಿ ಸೆಂಟರ್ ಉದ್ಘಾಟಿಸಲಾಗಿದೆ. ಈ ಘಟಕದಲ್ಲಿ ರೆಡ್ಯೂಸ್, ರೀಯೂಸ್, ರಿಸೈಕಲ್ ಮಾಡುವ ವಸ್ತುಗಳನ್ನು ಸ್ವೀಕರಿಸಲಾಗುವುದು. ಮುಂದಿನ 15 ದಿನದಲ್ಲಿ ತಲುಪಿಸಲಾಗುವ ವಸ್ತುಗಳನ್ನು ನಗರಸಭೆಯಿಂದ ರಿಯೂಸ್ ಮಾಡುವ ವ್ಯವಸ್ಥೆ ಕಲ್ಪಿಸುತ್ತೇನೆ. ಇದರಿಂದ ನಗರದಲ್ಲಿ ತ್ಯಾಜ್ಯದ ಪ್ರಮಾಣ ಕಡಿಮೆಯಾಗುತ್ತದೆ. ಈ ನಿಟ್ಟಿನಲ್ಲಿ ಸ್ವಚ್ಛ ನಗರ ಮಾಡಲು ಪ್ರತಿಯೊಬ್ಬರ ಸಹಕಾರ ಮುಖ್ಯ ಎಂದರು.
ನಗರಸಭೆ ಸ್ಥಾಯಿಸಮಿತಿ ಅಧ್ಯಕ್ಷ ಜಿ.ಆನಂದ್, ಕಾರ್ಯನಿರ್ವಹಕ ಅಭಿಯಂತ ಎನ್.ಬಡಿಗೇರ್, ಸಹಾಯಕ ಇಂಜಿನಿಯರ್ ಸಾಗರ್, ಆರೋಗ್ಯ ನಿರೀಕ್ಷಕಿ ಬಿಜಿ, ಮಮತಾ, ಮುಖಂಡರಾದ ಮುನಿಯಪ್ಪ, ನಾರಾಯಣ್‌ರಾವ್ ಇತರರು ಇದ್ದರು.