ಜಿಲ್ಲೆ

ನಾಗರಾಜನಿಗೆ ಅಭಿಷೇಕಗಳ ಮಹಾಪೂರ...

ಉಡುಪಿ ಜಿಲ್ಲಾದ್ಯಂತ ಪಂಚಮಿ ಸಂಭ್ರಮ

ನಾಗಬನಗಳಲ್ಲಿ ಭಕ್ತರ ಸಮಾಗಮ

ವಿಜಯವಾಣಿ ಸುದ್ದಿಜಾಲ ಉಡುಪಿ

ಹಿಂದು ಧಾರ್ಮಿಕ ಹಬ್ಬಗಳಿಗೆ ನಾಂದಿ ಹಾಡುವ ನಾಗರಪಂಚಮಿ ಹಬ್ಬವನ್ನು ಉಡುಪಿ ಜಿಲ್ಲಾದ್ಯಂತ ಭಕ್ತರು ಸಂಭ್ರಮ-ಸಡಗರದಿಂದ ಆಚರಿಸಿದರು. ಶ್ರಾವಣ ಮಾಸದ ಮಂಗಳವಾರದಂದೇ ಪಂಚಮಿ ಬಂದಿದ್ದರಿಂದ ಈ ಬಾರಿ ಆಚರಣೆಗೆ ಹೆಚ್ಚಿನ ಮಹತ್ವ ಬಂದಿತ್ತು.

ಜಿಲ್ಲೆಯಲ್ಲಿರುವ ಎಲ್ಲ ನಾಗಬನಗಳಲ್ಲಿ ಹಾಗೂ ವಿವಿಧ ದೇಗುಲಗಳಲ್ಲಿ ಬೆಳಗ್ಗೆಯಿಂದಲೇ ವಿಶೇಷ ಪೂಜೆ, ಹವನ ನಡೆದವು. ಭಕ್ತರು ನಾಗ ಮೂರ್ತಿಗಳಿಗೆ ಪಂಚಾಮೃತ ಅಭಿಷೇಕ ಮಾಡಿ ಪ್ರಾರ್ಥಿಸಿದರು. ವಿವಿಧೆಡೆ ಕ್ಷೀರ, ಸೀಯಾಳ ಹಾಗೂ ಅರಿಶಿನ ಅಭಿಷೇಕ ಮಾಡಿದರು.

ಶ್ರೀಕೃಷ್ಣ ಮಠದಲ್ಲಿ ಆಶ್ಲೇಷಾ ಬಲಿ

ನಾಗರಪಂಚಮಿ ನಿಮಿತ್ತ ಉಡುಪಿ ಶ್ರೀಕೃಷ್ಣ ಮಠದ ಸುಬ್ರಹ್ಮಣ್ಯ ಗುಡಿಯಲ್ಲಿರುವ ನಾಗದೇವರಿಗೆ ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು ಹಾಗೂ ಕಿರಿಯ ಶಿಷ್ಯ ಸುಶ್ರೀಂದ್ರ ತೀರ್ಥ ಶ್ರೀಪಾದರು ವಿಶೇಷ ಅಭಿಷೇಕಗಳ ಮೂಲಕ ನಾಗದೇವನನ್ನು ಪೂಜಿಸಿದರು. ಲೋಕ ಕಲ್ಯಾಣಾರ್ಥವಾಗಿ ಆಶ್ಲೇಷಾ ಬಲಿ ಸೇವೆಯೂ ನೆರವೇರಿತು. ಆಶ್ಲೇಷಾ ಬಲಿ ಸೇವೆಯಲ್ಲಿ ಪರ್ಯಾಯ ಸುಗುಣೇಂದ್ರ ಶ್ರೀ ಹಾಗೂ ಸುಶ್ರೀಂದ್ರ ಶ್ರೀ ಪಾಲ್ಗೊಂಡರು. ಶ್ರೀಕೃಷ್ಣ ಮಠದ ಒಳಗಿನ ವೃಂದಾವನ ಸಮುಚ್ಚಯದಲ್ಲಿರುವ ನಾಗಬನದಲ್ಲಿಯೂ ವಿಶೇಷ ಪೂಜೆ ನೆರವೇರಿತು.

ಜಿಲ್ಲೆಯ ನಾಗಕ್ಷೇತ್ರಗಳಲ್ಲಿ ಪೂಜೆ

ಜಿಲ್ಲೆಯ ಪ್ರಮುಖ ನಾಗಕ್ಷೇತ್ರಗಳಾದ ಕುಡುಪು ಅನಂತಪದ್ಮನಾಭ ದೇವಸ್ಥಾನ, ಮಣಿಪಾಲದ ಪ್ರಸನ್ನ ಗಣಪತಿ ದೇವಸ್ಥಾನ, ನಾಲ್ಕು ಸ್ಕಂದಾಲಯಗಳಾದ ಮುಚ್ಚಲಕೋಡು, ಮಾಂಗೋಡು, ತಾಂಗೋಡು, ಅರಿತೋಡು ಸುಬ್ರಹ್ಮಣ್ಯ ದೇವಸ್ಥಾನ, ಕರಂಬಳ್ಳಿಯ ವೆಂಕಟರಮಣ ದೇವಸ್ಥಾನ, ಗುಂಡಿಬೈಲು ಸುಬ್ರಹ್ಮಣ್ಯ ದೇವಸ್ಥಾನ, ಕಿನ್ನಿಮೂಲ್ಕಿಯ ಕನ್ನರ್ಪಾಡಿ ದೇವಸ್ಥಾನದ ಬಳಿಯ ನಾಗಸನ್ನಿಧಿ, ಸಗ್ರಿ ವಾಸುಕಿ ಅನಂತಪದ್ಮನಾಭ ದೇವಸ್ಥಾನ, ಬನ್ನಂಜೆ ಮಹಾಲಿಂಗೇಶ್ವರ ದೇವಸ್ಥಾನ, ಕಡಿಯಾಳಿ ಮಹಿಷಮರ್ದಿನಿ ದೇವಸ್ಥಾನ ಸೇರಿದಂತೆ ವಿವಿಧೆಡೆ ತನು ಸಮರ್ಪಣೆ ನಡೆಯಿತು.

ವಿಶೇಷ ಖಾದ್ಯ ನೈವೇದ್ಯ

ಮನೆಗಳಲ್ಲಿ ವಿಶೇಷ ಖಾದ್ಯ ತಯಾರಿಸಿ, ದೇವರಿಗೆ ನೈವೇದ್ಯ ಮಾಡಿ ಕುಟುಂಬಿಕರೊಂದಿಗೆ ವಿಶೇಷ ಭೋಜನ ಮಾಡಿದರು. ಹೂವು-ಹಣ್ಣು, ಕಾಯಿಗಳ ಬೆಲೆ ಏರಿಕೆಯ ನಡುವೆ ಹಾಗೂ ಆಗಾಗ ಸುರಿಯುತ್ತಿದ್ದ ಮಳೆಯ ನಡುವೆಯೂ ಸಂಪ್ರದಾಯಕ್ಕೆ ಧಕ್ಕೆಯಾಗದಂತೆ ಆಸ್ತಿಕರು ನಾಗರಪಂಚಮಿ ಹಬ್ಬವನ್ನು ಸಂಭ್ರಮದಿಂದಲೇ ಆಚರಿಸಿದರು.