ನಾಗರಪಂಚಮಿ ಹಿನ್ನೆಲೆಯಲ್ಲಿ ಶಾಸಕ ಆರಗ ಜ್ಞಾನೇಂದ್ರ ಕುಟುಂಬ ಸಮೇತರವಾಗಿ ನಾಗರಹಳ್ಳಿ ಕ್ಷೇತ್ರದಲ್ಲಿ ಪೂಜೆ ಸಲ್ಲಿಸಿದರು.  
ಜಿಲ್ಲೆ

ಶಿವಮೊಗ್ಗ ಜಿಲ್ಲೆಯಲ್ಲಿ ನಾಗರಪಂಚಮಿ ಸಂಭ್ರಮ

ಅರವಿಂದ ಅಕ್ಲಾಪುರ

ಶಿವಮೊಗ್ಗ: ಶ್ರಾವಣ ಮಾಸದ ಮೊದಲ ಹಬ್ಬ ನಾಗರಪಂಚಮಿಯನ್ನು ಸೋಮವಾರ ಜಿಲ್ಲಾಧ್ಯಂತ ಸಡಗರ, ಸಂಭ್ರಮ, ಭಕ್ತಿ ಭಾವದಿಂದ ಆಚರಿಸಲಾಯಿತು. ವಿವಿಧ ನಾಗ ದೇವಾಲಯಗಳಲ್ಲಿ ವಿಶೇಷ ಪೂಜೆ ಏರ್ಪಡಿಸಲಾಗಿತ್ತು. ಹಾಲಿನ ಅಭಿಷೇಕ, ವೇದಪಾರಾಯಣ, ಪವಮಾನ ಅಭಿಷೇಕ, ಆಶ್ಲೇಷಬಲಿ, ಕಾಳಸರ್ಪಶಾಂತಿ, ಮಹಾಮಂಗಳಾರತಿ ನೆರವೇರಿದವು.

ಜನರು ನಾಗರ ಕಲ್ಲಿಗೆ ಭಕ್ತಿ, ಭಾವದಿಂದ ವಿಶೇಷ ಪೂಜೆ ಸಲ್ಲಿಸಿದರು. ಶಾಸಕ ಆರಗ ಜ್ಞಾನೇಂದ್ರ ಕುಟುಂಬ ಸಮೇತರಾಗಿ ಹೊಸನಗರ ತಾಲೂಕು ನಾಗರಹಳ್ಳಿ ಕ್ಷೇತ್ರಕ್ಕೆ ಭೇಟಿ ನೀಡಿ ಸೇವೆ ಒಪ್ಪಿಸಿದರು. ಶಿವಮೊಗ್ಗದ ಸ್ವಾಮಿ ವಿವೇಕಾನಂದ ಬಡಾವಣೆಯ ನಾಗಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯಿತು.
ಬಸವನಗುಡಿ, ಕೀರ್ತಿನಗರದ ನಾಗರಕಟ್ಟೆ, ಸೀಗೆಹಟ್ಟಿ, ರವೀಂದ್ರನಗರ, ಗಾಂಧಿನಗರ, ವಿದ್ಯಾನಗರದ ಅರಳೀಕಟ್ಟೆ, ಬೊಮ್ಮನಕಟ್ಟೆ ಆಶ್ರಯ ಬಡಾವಣೆಯ ಗಣಪತಿ ದೇವಸ್ಥಾನದಲ್ಲಿನ ನಾಗರಕಲ್ಲಿಗೆ ಸಾರ್ವಜನಿಕರು ಹಣ್ಣು, ಕಾಯಿ ಅರ್ಪಿಸಿ, ಹಾಲಿನ ಅಭಿಷೇಕ ಮಾಡಿದರು. ಕೆಲವೆಡೆ ಹುತ್ತದ ಮಣ್ಣಿನಿಂದ ಮಾಡಿದ ಮಣ್ಣಿನ ನಾಗರಕ್ಕೆ ಹಾಲೆರೆದರು.
ಇನ್ನು ಕೆಲ ಬಡಾವಣೆಗಳಲ್ಲಿ ಮಹಿಳೆಯರು ಭಕ್ತಿಯಿಂದ ಹುತ್ತಕ್ಕೆ ಹಾಲೆರೆದರು. ವಿವಿಧ ದೇವಾಲಯಗಳಲ್ಲಿ ಪಂಚಮಿ ಅಂಗವಾಗಿ ವಿಶೇಷ ಅಲಂಕಾರ ಮಾಡಲಾಗಿತ್ತು. ಶ್ರಾವಣ ಮಾಸದ ಪ್ರಥಮ ಹಬ್ಬ ಇದಾಗಿದ್ದು, ನಾಗರಪಂಚಮಿಯೊಂದಿಗೆ ವಿವಿಧ ಹಬ್ಬಗಳಿಗೂ ಚಾಲನೆ ದೊರೆಯುತ್ತದೆ. ನಾಗಚೌತಿಯ ನಂತರ ಬರುವ ಪಂಚಮಿಯಂದು ಹಾಲೆರೆದರೆ ಒಳಿತಾಗುತ್ತದೆ ಎಂಬ ಭಾವನೆ ಜನರಲ್ಲಿದೆ. ನಾಗಾರಾಧನೆಗೆ ಹೆಚ್ಚು ಪ್ರಾಶಸ್ತ್ಯ ನೀಡುವುದರಿಂದ ನಾಗರಪಂಚಮಿ ಪ್ರಮುಖ ಹಬ್ಬವಾಗಿದೆ.