ಜಿಲ್ಲೆ

ಉತ್ತಮ ಮಳೆಗೆ ನಾಗರಕೆರೆ ಭರ್ತಿ, ಹೊಲ-ಗದ್ದೆಗಳು ಜಲಾವೃತ, ರಾಗಿಗೆ ಜೀವಕಳೆ

Bengaluru Rural

ವಿಜಯಪುರ: ಕಳೆದೆರಡು ದಿನಗಳಿಂದ ಹೋಬಳಿಯಾದ್ಯಂತ ಭಾರಿ ಮಳೆಯಾಗುತ್ತಿದ್ದು, ತಗ್ಗು ಪ್ರದೇಶಗಳಲ್ಲಿರುವ ಬೆಳೆಗಳಿಗೆ ನೀರು ನುಗ್ಗಿದ್ದು, ನಾಗರಕೆರೆ ಭರ್ತಿಯಾಗಿದೆ.

ಶನಿವಾರ ರಾತ್ರಿ ಅಂದಾಜು 70 ಮಿಮೀ ಮಳೆಯಾಗಿದ್ದು, ಅಮಾನಿಕೆರೆ ಸಂಪೂರ್ಣ ಭರ್ತಿಯಾಗಿದ್ದು, ಇದರ ಹೆಚ್ಚುವರಿ ನೀರು ಭದ್ರನ ಕೆರೆಗೂ ಹರಿಯುತ್ತಿದೆ.

ಅಮಾನಿಕೆರೆಯಿಂದ ಹರಿಯುವ ನೀರು ವಿಜಯಪುರದ ರಾಜಕಾಲುವೆ ಮೂಲಕ ಹರಿದುಹೋಗಬೇಕು. ಆದರೆ, ಕೆಲವು ಕಡೆ ರಾಜಕಾಲುವೆ ಒತ್ತುವರಿ ಮಾಡಿಕೊಂಡು ಹೊಲ-ಗದ್ದೆಯಾಗಿ ಮಾಡಲಾಗಿದೆ. ಬಹುತೇಕ ರಾಜಕಾಲುವೆಗಳಲ್ಲಿ ಹೂಳು ತುಂಬಿಕೊಂಡಿದ್ದು, ನೀರು ಸರಾಗವಾಗಿ ಹರಿಯದಂತಾಗಿದೆ. ಇದರಿಂದ ಹೊಲ ಗದ್ದೆಗಳು ಜಲಾವೃತಗೊಂಡಿವೆ. ಈ ಕಾರಣದಿಂದ ತಾವು ಬೆಳೆದಿರುವ ಬೆಳೆ ಸಂಪೂರ್ಣ ನಾಶವಾಗಿರುವುದಾಗಿ ರೈತ ಮಂಜುನಾಥ್ ಅಲವತ್ತುಕೊಂಡಿದ್ದಾರೆ.

ಕೆರೆಯತ್ತ ಜನರ ಹಿಂಡು: ನಾಗರಕೆರೆ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಅದನ್ನು ನೋಡಲು ಪಟ್ಟಣದ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಕೆರೆಗೆ ಬರುತ್ತಿದ್ದಾರೆ. ಇದರಿಂದಾಗಿ ಈ ಕೆರೆ ಪ್ರದೇಶ ಒಂದು ರೀತಿ ಪ್ರವಾಸಿತಾಣವಾಗಿ ಮಾರ್ಪಟ್ಟಿದೆ.

ಸಾಂಕ್ರಾಮಿಕ ರೋಗ ಭೀತಿ: ನಾಗರಕೆರೆ ಭರ್ತಿಯಾಗಿದ್ದು ಹೆಚ್ಚುವರಿ ನೀರು ಕಾಲುವೆಗಳ ಮೂಲಕ ಹರಿದು ಹೋಗಬೇಕಿದೆ. ಆದರೆ, ಕಾಲುವೆಗಳು ಸಂಪೂರ್ಣ ಹಾಳಾಗಿರುವುದರಿಂದ, ನೀರು ನಿಂತಲ್ಲೇ ನಿಂತಿದೆ. ಇದರಿಂದಾಗಿ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಇದೆ ಎಂದು ಪಟ್ಟಣದ ಜನತೆ ಆತಂಕ ವ್ಯಕ್ತಪಡಿಸಿದ್ದಾರೆ.

ರಾಗಿಗೆ ಜೀವಕಳೆ: ಈ ಬಾರಿ ನಾಟಿ ಮಾಡಿದ್ದ ರಾಗಿ ಪೈರು ಚೆನ್ನಾಗಿ ಬಂದಿತ್ತು. ಒಂದಷ್ಟು ಮಳೆಯ ಅವಶ್ಯಕತೆ ಇತ್ತು. ಇದಕ್ಕಾಗಿ ರೈತರು 10 ದಿನಗಳಿಂದಲೂ ನಿರೀಕ್ಷಿಸುತ್ತಿದ್ದರು. ಈಗ ಉತ್ತಮ ಮಳೆಯಿಂದಾಗಿ ರಾಗಿ, ಸಾಸಿವೆ ಮತ್ತಿತರ ಬೆಳೆ ಬೆಳೆದಿರುವ ರೈತರ ಮೊಗದಲ್ಲಿ ಸಂತಸ ಮೂಡಿದೆ.

ದೂರಾಗಿಲ್ಲ ಅಪಾಯದ ಭೀತಿ: ಈ ಬಾರಿ ಬಿತ್ತನೆ ಮಾಡಿದ ಬೆಳೆಗಳಿಗೆ ಉತ್ತರೆ ಮತ್ತು ಹಸ್ತ (ಅತ್ತೆ) ಮಳೆ ನೆರವಾಗಿದ್ದವು. ಆದರೆ, ಮುಂದೆ ಬರಲಿರುವ ಸ್ವಾತಿ ಮಳೆ ಹೆಚ್ಚು ದಿನ ಸುರಿದರೆ, ರಾಗಿ ಬೆಳೆ ಹಾಳಾಗುವ ಭೀತಿ ರೈತರದ್ದಾಗಿದೆ. ಸ್ವಾತಿ, ವಿಶಾಖ ಮಳೆ ಬಗ್ಗೆ ಆತಂಕದಿಂದ ನೋಡುತ್ತಿದ್ದಾರೆ.

ಮೇವಿನ ಕೊರತೆ ಇಲ್ಲ: ಮಳೆ ಇಲ್ಲದಿದ್ದಾಗ ಮೇವಿನ ಬೆಲೆ ಗಗನಮುಖಿಯಾಗಿತ್ತು. ಒಂದು ಹೊರೆ ಹುಲ್ಲು 200 ರೂ.ಗೆ ಮಾರಾಟವಾಗುತ್ತಿತ್ತು. ಇಷ್ಟು ದುಬಾರಿ ಮೇವು ಕೊಳ್ಳಲಾಗದ ರೈತರು ಜಾನುವಾರುಗಳನ್ನು ಮಾರಾಟ ಮಾಡಿದ್ದರು. ಈಗ ರಾಗಿ ಬೆಳೆ ಚೆನ್ನಾಗಿ ಬಂದಿದೆ. ಹದವಾಗಿ ಮಳೆಯೂ ಆಗುತ್ತಿರುವುದರಿಂದ, ಬದುಗಳಲ್ಲಿ ಹಸಿರು ಮೇವು ಸೊಂಪಾಗಿ ಬೆಳೆಯಲಾರಂಭಿಸಿದೆ. ಕೊಳವೆಬಾವಿಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚುತ್ತಿದೆ. ಇದರಿಂದಾಗಿ ಸದ್ಯ ನೀರು ಮತ್ತು ಮೇವಿನ ಕೊರತೆ ಇರುವುದಿಲ್ಲ ಎಂಬುದು ರೈತರ ಸಂತಸ ಇಮ್ಮಡಿಸಿದೆ.