ಜಿಲ್ಲೆ

ಹುಲಿ ತಡೆಗೆ ಚೈನ್ ಲಿಂಕ್ ಬೇಲಿ

reportermys

ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ

ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಒಳಗಿನಿಂದ ಹುಲಿಗಳು ನಾಡಿಗೆ ಬರದಂತೆ ತಡೆಯಲು ಚೈನ್ ಲಿಂಕ್ ಬೇಲಿ ನಿರ್ಮಿಸಲು
ಅರಣ್ಯ ಇಲಾಖೆ ವಿನೂತನ ಯೋಜನೆ ರೂಪಿಸಿದೆ. ಹುಲಿ ಸಂರಕ್ಷಿತಾ ಪ್ರದೇಶ ಎಂದು ಘೋಷಿಸಲ್ಪಟ್ಟಿರುವ ನಾಗರಹೊಳೆಯಲ್ಲಿ ಹುಲಿ ಗಳ ಸಂಖ್ಯೆ ಗಣನೀಯವಾಗಿ ಏರಿಕೆ ಕಂಡಿರುವುದರಿಂದ ಉದ್ಯಾನವನದಂಚಿನ ಗ್ರಾಮಗಳಲ್ಲಿ ನೆಲೆಸಿರುವವರು ತೀವ್ರ ಸಂಕಷ್ಟ
ಅನುಭವಿಸುತ್ತಿದ್ದಾರೆ.

ವ್ಯಾಘ್ರನ ದಾಳಿಗೆ ನೆಚ್ಚಿನ ಜಾನುವಾರುಗಳು ಬಲಿಯಾಗುತ್ತಿವೆ. ಇದರೊಂದಿಗೆ ಸಾಕಷ್ಟು ಜನ ವ್ಯಾಘ್ರನ ಬಾಯಿಗೆ ತುತ್ತಾಗಿದ್ದಾರೆ. ಹಲವರು ಗಾಯಾಳುಗಳಾಗಿ, ಶಾಶ್ವತ ಅಂಗವೈಕಲ್ಯತೆಗೆ ಒಳಗಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಉದ್ಯಾನವನದಿಂದ ಹುಲಿಗಳು ಹೊರಬರ ದಂತೆ ತಡೆಯಲು ಅರಣ್ಯ ಇಲಾಖೆ ವಿಶೇಷ ಯೋಜನೆ ರೂಪಿಸಿದೆ.

೧೨ ಅಡಿ ಎತ್ತರದಲ್ಲಿ ಚೈನ್ ಲಿಂಗ್ ಬೇಲಿ ನಿರ್ಮಿಸಲು ಉದ್ದೇಶಿಸಲಾಗಿದೆ. ಈ ಬೇಲಿ ಅಳವಡಿಸಿದಲ್ಲಿ ಹುಲಿಗಳು ಹಾರಿ ಹೊರ ಬರಲು ಸಾಧ್ಯವಾಗುವುದಿಲ್ಲ. ಕಾಡಾನೆಗಳು ಈ ಬೇಲಿ ಹಾಳು ಮಾಡದಂತೆ ತಡೆಯಲು ಕನಿಷ್ಠ ಪ್ರಮಾಣದಲ್ಲಿ ಸೋಲಾರ್ ವಿದ್ಯುತ್ ಪ್ರವಹಿಸಲು ನಿರ್ಧರಿಸಲಾಗಿದೆ. ೧೦ ಕಿಲೋಮೀಟರ್ ವ್ಯಾಪ್ತಿಯಲ್ಲಿ ಈ ಯೋಜನೆ ಪ್ರಾಯೋಗಿಕವಾಗಿ ಕಾರ್ಯಗತಗೊಳಿಸಲು ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿಲಾಗಿದೆ ಎಂದು ಕೊಡಗು ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ಬಿ.ಎನ್. ನಿರಂಜನ್ ಮೂರ್ತಿ ವಿಜಯವಾಣಿಗೆ ಮಾಹಿತಿ ನೀಡಿದ್ದಾರೆ.

ಉದ್ಯಾನವನದಿಂದ ಹುಲಿ, ಕಾಡಾನೆ ಊರಿಗೆ ಬಂದು ಜನರಿಗೆ ತೊಂದರೆ ನೀಡುತ್ತಿರುವುದನ್ನು ತಪ್ಪಿಸಲು ಅರಣ್ಯ ಇಲಾಖೆ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಆದರೂ, ವನ್ಯಪ್ರಾಣಿಗಳ ಉಪಟಳ ಕಮ್ಮಿಯಾಗಿಲ್ಲ. ಫಸಲು ನಷ್ಟದೊಂದಿಗೆ ಜೀವ ಕಳೆದುಕೊಳ್ಳುತ್ತಿರುವುದು ತೀವ್ರ ಆಕ್ರೋಶಕ್ಕೂ ಕಾರಣವಾಗುತ್ತಿದೆ. ಚೈನ್ ಲಿಂಕ್ ಬೇಲಿ ಎಷ್ಟರ ಮಟ್ಟಿಗೆ ಪ್ರಯೋಜನಕಾರಿ ಆಗಬಹುದೆಂಬ ಕುತೂಹಲ ಮೂಡಿದೆ.

ಇನ್ನೂ ೨ ಹುಲಿ ಸೆರೆ

ಕೆ.ಬಾಡಗ ಗ್ರಾಮದಲ್ಲಿ ಇಬ್ಬರನ್ನು ಬಲಿ ತೆಗೆದುಕೊಂಡ ಹೆಣ್ಣು ಹುಲಿಯನ್ನು ಕಾರ್ಯಾಚರಣೆ ಕೈಗೆತ್ತಿಕೊಂಡ ೨೪ ಗಂಟೆ ಒಳಗೆ ಜೀವಂತ ಸೆರೆಹಿಡಿಯುವುದರ ಮೂಲಕ ಅರಣ್ಯ ತಂಡ ಮೆಚ್ಚುಗೆಗೆ ಭಾಜನವಾಗಿದೆ. ನರಭಕ್ಷಕ ಹುಲಿ ಸೆರೆಯಾದರೂ ಕೂಡ ಹುಲಿ ಸೆರೆ ಕಾರ್ಯಾಚರಣೆ ಮುಂದುವರೆಸಲಾಗಿದೆ.

ಉದ್ಯಾನವನದಿಂದ ನಾಡಿಗೆ ಬಂದು ಜಾನುವಾರುಗಳನ್ನು ಕೊಂದು ಹೋಗುತ್ತಿರುವ ಎರಡು ಹುಲಿ ಸೆರೆಗೆ ಕಾರ್ಯಾಚರಣೆ ಮುಂದು ವರಿದಿದೆ. ತಿತಿಮತಿ ಹಾಗೂ ಪೊನ್ನಂಪೇಟೆ ವಲಯ ವ್ಯಾಪ್ತಿಯಲ್ಲಿ ಹುಲಿ ದಾಳಿಗೆ ೧೨ ಜಾನುವಾರುಗಳು ಬಲಿಯಾಗಿವೆ. ಉದ್ಯಾನವನ ದಿಂದ ೨ ಹುಲಿ ಹೊರ ಬಂದು ಹೋಗುತ್ತಿರುವುದನ್ನು ಅರಣ್ಯ ಇಲಾಖೆ ಸೂಕ್ಷ್ಮ ಸ್ಥಳಗಳಲ್ಲಿ ಅಳವಡಿಸಿರುವ ಕ್ಯಾಮರದಲ್ಲಿ ಸೆರೆಯಾಗಿದೆ.

ಪೊನ್ನಂಪೇಟೆ ತಾಲೂಕು ವ್ಯಾಪ್ತಿಯಲ್ಲಿ ಕಾಣಿಸಿಕೊಂಡಿರುವ ಎರಡು ಹುಲಿ ಸೆರೆಹಿಡಿಲು ಅನುಮತಿ ಸಿಕ್ಕಿದೆ. ಅಭಿಮನ್ಯು ಸೇರಿದಂತೆ ನಾಲ್ಕು ಸಾಕಾನೆಗಳೊಂದಿಗೆ ೬೦ ಸಿಬ್ಬಂದಿ ಹುಲಿ ಶೋಧಾ ಕಾರ್ಯಾಚರಣೆಯಲ್ಲಿ ಮುಂದುವರಿದಿದ್ದಾರೆ. ಬೆಂಕಿ ನಿಯಂತ್ರಣ ತಂಡ, ಕಾಡಾನೆ ಕಾರ್ಯಪಡೆ ತಂಡಗಳು ಕಾರ್ಯಾಚರಣೆಗೆ ಸಾಥ್ ನೀಡಿವೆ.

**
ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಿಂದ ಊರಿಗೆ ಹುಲಿ ಬರುವುದನ್ನು ತಡೆಯಲು ಚೈನ್ ಲಿಂಕ್ ಬೇಲಿ ನಿರ್ಮಿಸುವ ಬಗ್ಗೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಪ್ರಾಯೋಗಿಕವಾಗಿ ಆಯ್ದ ೧೦ ಕಿಲೋಮೀಟರ್ ಪ್ರದೇಶದಲ್ಲಿ ೧೨ ಅಡಿ ಎತ್ತರದ ವಿಶೇಷ ಬೇಲಿ ನಿರ್ಮಿಸಲಾಗುವುದು. ಬಿ.ಎನ್. ನಿರಂಜನ್ ಮೂರ್ತಿ, ಕೊಡಗು ವೃತ್ತದ ಅರಣ್ಯ ರಕ್ಷಣಾಧಿಕಾರಿ.