ನಾಲತವಾಡ ಸಮೀಪದ ಅರಸನಾಳ ಬಳಿಯ ನಾಗರಬೆಟ್ಟ ಏತ ನೀರಾವರಿ ಯೋಜನೆಯ ಕಾಲುವೆಗೆ ಹರಿಸುವ ನೀರು ಸಂಗ್ರಹಣೆ ಜಾಕ್‌ವೆಲ್ ಹತ್ತಿರ ಜಮಾಯಿಸಿದ ರೈತರು. ಶಿವಾನಂದ ವಾಲಿ, ಅಮರ ದೇಶಮುಖ, ಮಹಾಂತೇಶ ಮೆನದಾಳಮಠ, ಪರಶುರಾಮ ಜೋಗಿನ ಇತರರಿದ್ದರು. 
ಜಿಲ್ಲೆ

ನಾಗರಬೆಟ್ಟ ಏತ ನೀರಾವರಿ ಯೋಜನೆ ಕಾಲುವೆಗೆ ನೀರು ಹರಿಸಿ

ನಾಲತವಾಡ: ಸಮೀಪದ ಬಂಗಾರಗುಂಡ ಬಳಿ ನಿರ್ಮಾಣವಾದ ಅಂದಾಜು 170 ಕೋಟಿ ರೂ. ವೆಚ್ಚದ ನಾಗರಬೆಟ್ಟ ಏತ ನೀರಾವರಿ ಯೋಜನೆ ಕಾಲುವೆಗಳಿಗೆ ನೀರು ಹರಿಸಿ ಒಣಗುತ್ತಿರುವ ಬೆಳೆಗಳ ರಕ್ಷಣೆ ಮಾಡಬೇಕು ಎಂದು ಪಟ್ಟಣದ ರೈತರು ಆಗ್ರಹಿಸಿದರು.

ಸ್ಥಳೀಯ ರೈತರು ಅರಸನಾಳ ಬಳಿಯ ಕಾಲುವೆಗಳಿಗೆ ನೀರು ಹರಿಸಲು ನಿರ್ಮಿಸಿದ ಘಟಕದ ಹತ್ತಿರ ಶನಿವಾರ ಜಮಾಯಿಸಿ ನೀರಾವರಿ ಇಲಾಖೆ ಅಧಿಕಾರಿಗಳ ವಿಳಂಬ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದರು.

ಅಂದಾಜು 32 ಸಾವಿರ ಹೆಕ್ಟೇರ್ ಪ್ರದೇಶದ ರೈತರು ಮಳೆಯಿಲ್ಲದೆ ಸಂಕಷ್ಟದಲ್ಲಿದ್ದಾರೆ. ಈಗಾಗಲೇ ಅಂತಿಮಗೊಂಡ ಮಹತ್ತರ ಯೋಜನೆಯ ಕಾಲುವೆಗಳಿಗೆ ನೀರು ಹರಿಸದೆ ಮೌನವಾದ ನೀರಾವರಿ ಇಲಾಖೆಯ ಅಧಿಕಾರಿಗಳ ನಡೆ ನಾಗರಬೆಟ್ಟ, ಅರಸನಾಳ, ಸರೂರ ಭಾಗದ ಜನರಲ್ಲಿ ಸಂಶಯ ಮೂಡಿಸಿದೆ ಎಂದರು.

ಕಳೆದ ಆ.11 ರಂದು ಬಂಗಾರಗುಂಡ ಬಳಿ ನಿರ್ಮಾಣಗೊಂಡಿರುವ ನಾಗರಬೆಟ್ಟ ಏತ ನೀರಾವರಿ ಯೋಜನೆಯ ಕಾಲುವೆಗಳಿಗೆ ಸಂಬಂಧಿಸಿ ಕೂಡಲಸಂಗಮದ ಬಳಿಯ ವಿದ್ಯುತ್ ಸರಬರಾಜು ಹಾಗೂ ಪ್ರಾಯೋಗಿಕ ನೀರು ಹರಿಸುವ ಕಾರ್ಯ ಮುಗಿದಿದ್ದರೂ ಈವರೆಗೂ ನೀರು ಹರಿಯುತ್ತಿಲ್ಲ. ಪಶ್ಚಿಮ ಕಾಲುವೆಗಳಿಗೆ ನೀರು ಹರಿಸಿ ಮೇಲಿನ ರೈತರ ಜಮೀನುಗಳಲ್ಲಿ ಒಣಗುತ್ತಿರುವ ಬೆಳೆಗಳಿಗೆ ಜೀವ ತುಂಬಬೇಕು ಎಂದು ಕೆಬಿಜೆಎನ್‌ಎಲ್ ಅಧಿಕಾರಿಗಳಿಗೆ ಒತ್ತಾಯಿಸಿದರು.

ಯುವಜನ ಸೇನೆಯ ರಾಜ್ಯ ಘಟಕದ ಅಧ್ಯಕ್ಷ ಶಿವಾನಂದ ವಾಲಿ, ಅಮರ ದೇಶಮುಖ, ಮಹಾಂತೇಶ ಮೆನದಾಳಮಠ, ಪರಶುರಾಮ ಜೋಗಿನ, ವೀರೇಶ ಕಂದಗಲ್ಲ, ರಫೀಕ್ ತೆಗ್ಗಿನಮನಿ, ವಿಜಯ ಹಿರೇಮಠ, ಉಮೇಶ ಆಲಕೊಪ್ಪರ ಇದ್ದರು.